ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಸೀರಿಯಸ್…!

ಈ ಸುದ್ದಿಯನ್ನು ಶೇರ್ ಮಾಡಿ

Karunanidhi
ಚೆನ್ನೈ, ಜು.27-ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಡಾ. ಮುತ್ತುವೇಲು ಕರುಣಾನಿಧಿ(94) ಅವರು ತೀವ್ರ ಅಸ್ವಸ್ಥರಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಜ್ವರ ಮತ್ತು ಮೂತ್ರನಾಳ ಸೋಂಕಿನಿಂದ ಬಳಲುತ್ತಿರುವ ಅವರಿಗೆ ಚೆನ್ನೈನ ಗೋಪಾಲಪುರಂನಲ್ಲಿರುವ ತಮ್ಮ ನಿವಾಸದಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಕಾವೇರಿ ಆಸ್ಪತ್ರೆಯ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ.

ಇಂದು ಬೆಳಗ್ಗೆಯಿಂದಲೇ ಅವರ ನಿವಾಸಕ್ಕೆ ಸಚಿವರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಚಿತ್ರರಂಗದ ಖ್ಯಾತನಾಮರೂ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಶೀಘ್ರ ಚೇತರಿಕೆಗೆ ಹಾರೈಸಿದರು.   ಡಿಎಂಕೆ ವರಿಷ್ಠರ ಆರೋಗ್ಯ ವಿಷಮವಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಕಾರ್ಯಕರ್ತರು ಬೆಳಗ್ಗೆಯಿಂದಲೇ ಗೋಪಾಲಪುರಂಗೆ ಧಾವಿಸುತ್ತಿದ್ದಾರೆ. ಅಸಂಖ್ಯಾತ ಕಾರ್ಯಕರ್ತರ ಜಮಾವಣೆಯಿಂದ ಆ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆ ಏರುಪೇರಾಗಿದೆ.

ಮುನ್ನಚ್ಚರಿಕೆ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಂಕೆ ಕಾರ್ಯಾಧ್ಯಕ್ಷರೂ ಆದ ಕರುಣಾನಿಧಿ ಅವರ ಪುತ್ರ ಎಂ.ಕೆ.ಸ್ಟಾಲಿನ್, ತಮ್ಮ ತಂದೆಯವರ ಆರೋಗ್ಯ ಕುರಿತು ಹಬ್ಬಿರುವ ಇಲ್ಲಸಲ್ಲದ ವದಂತಿಗಳಿಗೆ ಕಿವಿಗೊಡಬೇಡಿ. ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಚೇತರಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

Facebook Comments

Sri Raghav

Admin