ಗ್ರಹಣದ ಭಯ ಇದ್ದವರು ಪೂಜೆ ಮಾಡಿ, ಇಲ್ಲದವರು ಚಂದಮಾಮನ ಸೌಂದರ್ಯ ಕಣ್ತುಂಬಿಕೊಳ್ಳಿ..!

ಈ ಸುದ್ದಿಯನ್ನು ಶೇರ್ ಮಾಡಿ

Moon-Blood-Moon--01

ಬೆಂಗಳೂರು, ಜು.27- ಬಾನಂಗಳದಲ್ಲಿ ಹುಣ್ಣಿಮೆಯ ದಿನ ಪ್ರಕಾಶಮಾನವಾಗಿರಬೇಕಾದ ಚಂದಿರ ಮಂಕಾಗಲಿದ್ದಾನೆ. ಬಾಹ್ಯಾಕಾಶದಲ್ಲಿ ಇಂದು ಈ ವಿಸ್ಮಯ ನಡೆಯಲಿದೆ. ಕೇತುಗ್ರಸ್ಥ ಚಂದ್ರಗ್ರಹಣ ಮನುಕುಲದ ಮೇಲೂ ಪ್ರಭಾವ ಬೀರುತ್ತದಂತೆ. ಇಂದು ಹುಣ್ಣಿಮೆಯ ರಾತ್ರಿ 11.54ರಿಂದ 3.40ರವರೆಗೆ ಸಂಭವಿಸುವ ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಅತ್ಯಂತ ಕೌತುಕ ಸೃಷ್ಟಿಸಿದೆ.  ನಭೋ ಮಂಡಲದಲ್ಲಿ ಹುಣ್ಣಿಮೆಯ ಚಂದಿರ ರಾಶಿಗಳ ಜತೆ ಹೇಗಿರುತ್ತಾನೆ ಎಂಬುದನ್ನು ನೋಡಲು ಇದೊಂದು ಅವಕಾಶ. ಗ್ರಹಣದ ಬಗ್ಗೆ ಭಯ ಇದ್ದವರು ಜ್ಯೋತಿಷಿಗಳು ಹೇಳಿದಂತೆ ಪೂಜೆ, ಪುನಸ್ಕಾರಗಳಲ್ಲಿ ತೊಡಗಿಕೊಳ್ಳಬಹುದು. ನಂಬಿಕೆ ಇಲ್ಲದವರು ಆಕಾಶದ ವಿಸ್ಮಯವನ್ನು ನೋಡಿ ಖುಷಿ ಪಡಬಹುದು.

ಕೇತುಗ್ರಸ್ಥ ಚಂದ್ರಗ್ರಹಣ ಯಾವ ರಾಶಿಯವರ ಮೇಲೆ ಪ್ರಭಾವ ಬೀರಲಿದೆ:

ಉತ್ತರಾಷಾಢ ಶ್ರವಣ ನಕ್ಷತ್ರ ಮಕರ ರಾಶಿ, ಮೇಷ, ವೃಷಭ, ಮಿಥುನ ಲಗ್ನದಲ್ಲಿ ಚಂದ್ರಗ್ರಹಣ ಸಂಭವಿಸಲಿದೆ. ಈ ನಾಲ್ಕು ರಾಶಿಗಳ ಮೇಲೆ ತೀರ ಕೆಡಕು ಹಾಗೂ ಮಿಶ್ರಫಲ, ಕೊಂಚ ಶುಭದಾಯಕವಾಗಿದೆ. ಆದರೆ, ಇದು ಭೂಮಂಡಲವನ್ನೇ ಅಲುಗಾಡಿಸುವಂತೆ ಮಾಡುವ, ಚಂದಿರನ ಹೊಳಪನ್ನು ಮರೆಮಾಚುವ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು, ಬಹುತೇಕ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂಬುದು ಜ್ಯೋತಿಷಿಗಳ ವಿವರಣೆ.

ಈ ಚಂದ್ರಗ್ರಹಣ ನಕ್ಷತ್ರ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು, ಯಾವ ರಾಶಿಯ ಮೇಲೆ ಚಂದ್ರಗ್ರಹಣ ಪ್ರಭಾವ ಬೀರುತ್ತೋ ಅವರಿಗೆ ಮಾನಹಾನಿ, ಅನಾರೋಗ್ಯ, ಕಂಟಕ ತಲೆದೋರಲಿದೆ. ಮುಖ್ಯವಾಗಿ ಉತ್ತರಾಷಾಢ, ಕೃತಿಕ, ಉತ್ತರ, ಶ್ರವಣ, ರೋಹಿಣಿ, ಹಸ್ತಾ ನಕ್ಷತ್ರದವರೆಗೆ ತೀವ್ರ ತೊಂದರೆಕಾಡಲಿದ್ದು, ರಾಶಿಗಳ ಪ್ರಕಾರ ನೋಡುವುದಾದರೆ ಮಕರ, ಧನಸ್ಸು, ವೃಷಭ, ಸಿಂಹ ರಾಶಿಯವರಿಗೆ ದೋಷದ ಫಲ ಹೆಚ್ಚಾಗುತ್ತದೆ. ವೃಶ್ಚಿಕ, ಮೀನ, ತುಲಾ ರಾಶಿಯವರಿಗೆ ಈ ಗ್ರಹಣ ಅದೃಷ್ಟದ ಬಾಗಿಲು ತೆರೆಯಲಿದೆ ಎನ್ನುವುದು ಜ್ಯೋತಿಷ್ಯ ಲೆಕ್ಕಾಚಾರವಾದರೆ, ದ್ವಾದಶ ರಾಶಿವರಿಗೆ ಕಂಟಕ ಎದುರಾಗುವುದರಿಂದ ಎಲ್ಲರಿಗೂ ಗ್ರಹಣ ದೋಷ ಪರಿಣಾಮ ಬೀರಲಿದೆ.

ದೇವಾಲಯಗಳಲ್ಲಿ ಪೂಜೆ:
ಗ್ರಹಣ ದೋಷ ನಿವಾರಣೆಗಾಗಿ ಆಯಾ ರಾಶಿ, ನಕ್ಷತ್ರಗಳವರು ಈಗಾಗಲೇ ದೇವಾಲಯಗಳಲ್ಲಿ ಪೂಜೆಗಳಲ್ಲಿ ತೊಡಗಿದ್ದಾರೆ. ಬಹುತೇಕ ದೇವಾಲಯಗಳ ಮುಂದೆ ಗ್ರಹಣ ದೋಷ ನಿವಾರಣೆಯ ಪೂಜೆಗಳು ನಡೆಯುತ್ತಿವೆ.  ಗ್ರಹಣ ಕೇವಲ ಮನುಷ್ಯನಿಗೆ ಮಾತ್ರವಲ್ಲ. ದೇವರಿಗೂ ಕೂಡ ಆವರಿಸುತ್ತಿದೆ. ಹಾಗಾಗಿ ದೇವಾಲಯದ ಗರ್ಭಗುಡಿಯಲ್ಲಿ ಗ್ರಹಣ ಸಂದರ್ಭದಲ್ಲಿ ದರ್ಬೆಯಿಂದ ದೇವರನ್ನು ಬಂಧಿಸಲಾಗುತ್ತದೆ. ಇಂದು ಮಧ್ಯರಾತ್ರಿ ಗ್ರಹಣ ಸಂದರ್ಭದಲ್ಲಿ ಪೂಜೆ, ಹೋಮ, ಹವನಗಳು ನಡೆಯುತ್ತವೆ. ಗ್ರಹಣ ದೋಷ ನಿವಾರಣೆಗೆ ನಾಳೆ ಬೆಳಗಿನ ಜಾವ ಎಲ್ಲಾ ದೇಗುಲಗಳಲ್ಲಿ ಹೋಮ, ಹವನ ನಡೆಯಲಿದ್ದು, ದೇವರ ಪೂಜೆ, ಜಪದ ಜತೆಗೆ ಚಂದ್ರಗ್ರಹ ಶಾಂತಿಗೆ ಅಕ್ಕಿ, ಬಿಳಿ ವಸ್ತ್ರ, ಹಾಲು ದಾನ, ಉಪ್ಪು ಹಾಕದ ಮೊಸರನ್ನ ದಾನ, ಶ್ರೀ ದುರ್ಗಾಸ್ತುತಿ ಹಾಗೂ ಕೇತು ಗ್ರಹ ಶಾಂತಿಗೆ ಹುರುಳಿಕಾಳು, ಚಿತ್ರವಸ್ತ್ರ, ಶ್ರೀಗಣೇಶನಿಗೆ ಕೆಂಪುಕಣಗಿಲೆ ಹೂ ಸಮರ್ಪಣೆ ಮಾಡಿ ಮೃಂತ್ಯುಜಯ ಜಪ ಮಾಡಬೇಕೆಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.  ಗ್ರಹಣದ ದಿನ ಭೋಜನ ನಿಷಿದ್ಧ. ಮಧ್ಯಾಹ್ನ 2.30ರ ತನಕ ಭೋಜನ ಮಾಡಬಹುದು. ಅನಾರೋಗ್ಯ ಇರುವವರು ರಾತ್ರಿ 7.30ರೊಳಗೆ ಭೋಜನ ಮುಗಿಸುವುದು ಒಳಿತು. ಗ್ರಹಣದ ಬಳಿಕ ತಣ್ಣೀರು ಸ್ನಾನ ಮಾಡಿ ಶಿವನ ದರ್ಶನ ಪಡೆದರೆ ಗ್ರಹಣ ದೋಷ ನಿವಾರಣೆಯಾಗಲಿದೆ.

ನಂಬಿಕೆ ಇಲ್ಲದವರೂ ಹೀಗೆ ಮಾಡಬಹುದು:
ಇವುಗಳ ಮೇಲೆ ನಂಬಿಕೆ ಇಲ್ಲ. ಗ್ರಹಣದ ಬಗ್ಗೆ ಭಯವಿಲ್ಲ ಎನ್ನುವವರೂ ಇದ್ದಾರೆ. ಅಂತಹವರು ನಭೋಮಂಡಲದಲ್ಲಿ ನಡೆಯುವ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಆಕಾಶದತ್ತ ಕಣ್ಣು ಹಾಯಿಸಿ. ದೋಷ, ಸಮಸ್ಯೆ, ಭಯ, ಭೀತಿ, ಕಂಟಕ ಎಲ್ಲವನ್ನೂ ಮರೆತು ಚಂದಮಾಮನ ಅವತಾರವರನ್ನು ನೋಡಿ ಆನಂದಿಸಿ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin