ಕುಗ್ರಾಮದಲ್ಲಿ ಮಳವಳ್ಳಿ ಶಾಸಕ ಅನ್ನದಾನಿ ಗ್ರಾಮ ವಾಸ್ತವ್ಯ

ಈ ಸುದ್ದಿಯನ್ನು ಶೇರ್ ಮಾಡಿ

Annadani--01

ಮಳವಳ್ಳಿ, ಜು.27- ಹಲಗೂರು ಹೋಬಳಿ ಹಗಡಯ್ಯನದೊಡ್ಡಿ ಗ್ರಾಮದ ಮುದ್ದಅಂಕಯ್ಯ ಎಂಬುವರ ಮನೆಯಲ್ಲಿ ಶಾಸಕ ಡಾ.ಕೆ.ಅನ್ನದಾನಿ ಅವರು ಗ್ರಾಮವಾಸ್ತವ್ಯ ಮಾಡಿ ಗ್ರಾಮದ ಪರಿಸ್ಥಿತಿ ಪರಿಶೀಲಿಸಿದರು. ಮುದ್ದಅಂಕಯ್ಯನ ಮನೆ ಶಿಥಿಲವಾಗಿದ್ದು, ಅಲ್ಲೆ ಅಡುಗೆ ಮಾಡಿಸಿ ಊಟ ಮಾಡಿ ರಾತ್ರಿ ಅಲ್ಲೇ ತಂಗಿದ್ದರು. ಈ ಗ್ರಾಮ ಕಾಡಂಚಿನಲ್ಲಿದ್ದು, ಆನೆ ಮತ್ತಿತರ ಪ್ರಾಣಿಗಳ ದಾಳಿಯಿಂದಾಗಿ ಜನ ಆತಂಕದಲ್ಲೇ ಕಾಲಕಳೆಯುತ್ತಿದ್ದಾರೆ. ಇದೊಂದು ಕುಗ್ರಾಮ. ಮೂಲಭೂತ ಸೌಕರ್ಯ ವಂಚಿತ ಗ್ರಾಮ.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯ ತಮಗೆ ಪ್ರೇರಣೆಯಾಗಿದ್ದು, ತಾವು ಕೂಡಾ ಒಂದೊಂದು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಸುದ್ದಿಗಾರರಿಗೆ ಅನ್ನದಾನಿ ತಿಳಿಸಿದರು. ಪ್ರತಿವಾರ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಮುಂದಿನ ವಾರ ಬೀಜಿಪುರ ಹೋಬಳಿಯ ಗ್ರಾಮವೊಂದನ್ನು ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.

ಬೆಳಗ್ಗೆ ಹಗಡಯ್ಯನ ಹಳ್ಳಿಯಿಂದ ಹೊರಟು ಅಕ್ಕಪಕ್ಕದ ಹಳ್ಳಿಗಳಿಗೂ ಭೇಟಿ ನೀಡಿದ ಶಾಸಕರು ಗ್ರಾಮಸ್ಥರ ಕುಂದುಕೊರತೆ ಆಲಿಸಿದರು. ನಿವೇಶನ ರಹಿತರು ಸಾಕಷ್ಟು ಅರ್ಜಗಳನ್ನು ಸಲ್ಲಿಸಿದ್ದಾರೆ. ಸ್ಥಳೀಯ ಹಾಗೂ ಮೇಲ್‍ಮಟ್ಟದ ಅಧಿಕಾರಿಗಳ ಜತೆ ಚರ್ಚಿಸಿ ಹಂತ ಹಂತವಾಗಿ ನಿವೇಶನ ಕೊಡಿಸುವ ಭರವಸೆ ನೀಡಿದರು.ಚರಂಡಿ, ಉತ್ತಮ ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೌಕರ್ಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಹಲಗೂರು ಹೋಬಳಿ ಭೀಮಾ ಜಲಾಶಯ ಹಾಗೂ ಇತರೆ ಕೆರೆಗಳಿಗೆ ಶೀಘ್ರದಲ್ಲೇ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನನ್ನೊಂದಿಗೆ ಅಧಿಕಾರಿಗಳು ಇರುವುದರಿಂದ ಸ್ಥಳದಲ್ಲೇ ಆಗುವಂತಹ ಕೆಲಸಗಳನ್ನು ಮಾಡಿಸಿಕೊಟ್ಟಿದ್ದೇನೆ ಎಂದು ಡಾ.ಅನ್ನದಾನಿ ಹೇಳಿದರು. ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾ ಜೆಡಿಎಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಡಿ.ಜಯರಾಂ, ಕಾರ್ಯಕರ್ತರು ಕೂಡಾ ಪಾಲ್ಗೊಂಡಿದ್ದರು.

Facebook Comments

Sri Raghav

Admin