ಡೀಸೆಲ್ ಕಳ್ಳನನ್ನು ಹಿಡಿದುಕೊಟ್ಟವನ ಜೀವ ತೆಗೆದ ಕಿರಾತಕರು..!

ಈ ಸುದ್ದಿಯನ್ನು ಶೇರ್ ಮಾಡಿ

Murder--01

ಸೂಲಿಬೆಲೆ, ಜು.27- ಕಂಪೆನಿಯೊಂದರ ಲಾರಿಗಳಲ್ಲಿ ಡೀಸೆಲ್ ಕದಿಯುತ್ತಿದ್ದವನನ್ನು ಹಿಡಿದುಕೊಟ್ಟ ವ್ಯಕ್ತಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಪುಂಗನೂರು ಬಳಿಯ ಮುತ್ತುಕೂರು ನಿವಾಸಿ ಶಂಕರ್(35) ಕೊಲೆಯಾದ ದುರ್ದೈವಿ.

ಘಟನೆ ವಿವರ:
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ಬೀರಹಳ್ಳಿಯಲ್ಲಿನ ಜೆಲ್ಲಿ ಕ್ರಷರ್‍ನಲ್ಲಿ ಪವನ್ ಕುಮಾರ್ ಎಂಬಾತ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಲಾರಿಗಳಿಗೆ ಚಾಲಕರು ಬೇಕಾಗಿದ್ದಾರೆ ಎಂದು ಕಂಪನಿ ಮಾಲೀಕರು ತಿಳಿಸಿದ್ದ ಕಾರಣ ತನ್ನ ಅಕ್ಕನ ಗಂಡ ಶಂಕರ್‍ನನ್ನು ಒಂದು ವರ್ಷದÀ ಹಿಂದೆ ಬೀರಹಳ್ಳಿಗೆ ಕರೆಯಿಸಿಕೊಂಡು ಚಾಲಕನಾಗಿ ಸೇರಿಸಿದ್ದ.

ಶಂಕರ್ ಚಾಲಕ ಕೆಲಸ ಮಾಡಿಕೊಂಡು ಕಂಪನಿ ಮಾಲೀಕರು ನೀಡಿದ ಮನೆಯಲ್ಲಿ ವಾಸವಾಗಿದ್ದ. ಎರಡು ತಿಂಗಳ ಹಿಂದೆ ಚಿಂತಾಮಣಿ ತಾಲ್ಲೂಕು ಬಟ್ಲಹಳ್ಳಿ ಗ್ರಾಮದ ಶ್ರೀನಿವಾಸ್ ರೆಡ್ಡಿ ಎಂಬಾತ ಜೆಲ್ಲಿಕ್ರಷರ ಕೆಲಸಕ್ಕೆ ಸೇರಿಕೊಂಡು ಕಂಪನಿ ಇನ್‍ಚಾರ್ಜ್ ನೋಡಿಕೊಳ್ಳುತ್ತಿದ್ದ. ಶ್ರೀನಿವಾಸ್ ಕಂಪನಿಯ ಲಾರಿಗಳಲ್ಲಿ ಡೀಸೆಲ್ ಕದಿಯುತ್ತಿದ್ದು, ಒಮ್ಮೆ ಲಾರಿಯಲ್ಲಿ ಡೀಸೆಲ್ ಕದಿಯುವಾಗ ಶಂಕರ್ ಕೈಗೆ ಸಿಕ್ಕಿಬಿದ್ದಿದ್ದ. ಈ ವಿಚಾರ ಶಂಕರ್ ಮಾಲೀಕರಿಗೆ ಹೇಳಿದ್ದರಿಂದ ಶ್ರೀನಿವಾಸನನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ಅಂದಿನಿಂದ ಶಂಕರ್ ಮೇಲೆ ಜಿದ್ದು ಸಾಧಿಸಿದ್ದ ಶ್ರೀನಿವಾಸ್ ರೆಡ್ಡಿ ತನ್ನ ಸಹಚರರೊಂದಿಗೆ ಕ್ರಷರ್ ಬಳಿಗೆ ಬಂದು ಮಾರಾಕಾಸ್ತ್ರಗಳಿಂದ ಶಂಕರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಶಂಕರ್ ಭಾಮೈದ ಪವನ್ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ನಂದಗುಡಿ ಪೊಲೀಸ್ ಠಾಣೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Facebook Comments

Sri Raghav

Admin