ಸೌದಿ ಆಸ್ಪತ್ರೆಯಲ್ಲಿ ಉಡುಪಿ ಮೂಲದ ಯುವತಿ ನಿಗೂಢ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

dead-women

ಉಡುಪಿ, ಜು.27- ಸೌದಿ ಅರೇಬಿಯಾದ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಉಡುಪಿಯ ಶಿರವಾ ಮೂಲದ ಯುವತಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಹೆಝಿಲ್ ಜೋತ್ಸಾ ಕ್ವಾಡ್ರಸ್ (28) ಮೃತಪಟ್ಟ ಯುವತಿ. ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯ ಅಲ್‍ಮಿಕ್ವಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಳೆದ ಆರು ವರ್ಷಗಳಿಂದ ಈಕೆ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.

ಕಳೆದ ಮೂರು ವರ್ಷಗಳ ಹಿಂದೆ ಈಕೆ ವಿವಾಹವಾಗಿದ್ದರು. ನಂತರ ಪುನಃ ಸೌದಿಗೆ ತೆರಳಿ ತಮ್ಮ ವೃತ್ತಿ ಬದುಕನ್ನು ಮುಂದುವರಿಸಿದ್ದರು. ಕಳೆದ ಜು.19ರಂದು ತಮ್ಮ ಪತಿ ಅಶ್ವಿನ್ ಮತಾಯ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಹೆಝಿಲ್ ನಂತರ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದರಿಂದಾಗಿ ಆತಂಕಗೊಂಡಿದ್ದ ಇವರ ಕುಟುಂಬದ ಸದಸ್ಯರು ಸೌದಿಯಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದರು. ಅದು ಸಾಧ್ಯವಾಗಿರಲಿಲ್ಲ. ನಂತರ ಶಾಸಕ ರಘುಪತಿಭಟ್ ಮುಖಾಂತರ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮೂಲಕ ಹೆಝಿಲ್ ಅವರ ಬಗ್ಗೆ ಮಾಹಿತಿ ಕೇಳಲಾಗಿ ಈಗ ಆಕೆ ಸಾವನ್ನಪ್ಪಿರುವ ಬಗ್ಗೆ ಆಕೆಯ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಅವರು ಕುಟುಂಬದ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸಾವಿನ ಬಗ್ಗೆ ನಿಖರ ಕಾರಣ ತಿಳಿಯಲು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin