ದಾಂಡೇಲಿಯಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ವಕೀಲನ ಬರ್ಬರ ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Murde--01

ಕಾರವಾರ, ಜು.28- ದಾಂಡೇಲಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ಅಜಿತ್ ನಾಯ್ಕ ಎಂಬವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.   ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಪಟ್ಟಣದ ಬಸ್ ನಿಲ್ದಾಣದ ಸಮೀಪದ ಜೆ.ಎ. ರಸ್ತೆಯಲ್ಲಿ ದುಷ್ಕರ್ಮಿಯೊಬ್ಬ ಮಾರಕಾಸ್ತ್ರದಿಂದ ಏಕಾಏಕಿ ನಾಯ್ಕ ಅವರ ಕುತ್ತಿಗೆ ಹಾಗು ಎದೆ ಭಾಗಗಳಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಹಲ್ಲೆಯಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜಿತ್ ನಾಯ್ಕರನ್ನು ಸ್ಥಳೀಯರು ದಾಂಡೇಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಅಜಿತ್ ನಾಯ್ಕ ಅವರು, ದಾಂಡೇಲಿಯನ್ನು ತಾಲೂಕನ್ನಾಗಿಸಲು ನಡೆದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ನಗರಸಭೆಯ ಮಾಜಿ ಅಧ್ಯಕ್ಷರು, ದಾಂಡೇಲಿ ತಾಲೂಕು ರಚನಾ ಸಮಿತಿಯ ಅಧ್ಯಕರೂ ಆಗಿದ್ದರು.

ಅನೇಕ ವರ್ಷಗಳ ಕಾಲ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, 2007ನೇ ಸಾಲಿನಲ್ಲಿ ದಾಂಡೇಲಿ ಬಚಾವೋ ಸಮಿತಿಯ ಮೂಲಕ ದಾಂಡೇಲಿ ತಾಲೂಕು ರಚನೆಗಾಗಿ ಹೋರಾಟ ನಡೆಸಿ ಗಮನ ಸೆಳೆದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಬಗ್ಗೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Facebook Comments

Sri Raghav

Admin