ಪ್ರಾಣಿ ಚರ್ಮದ ಬೆಲೆ ಕುಸಿತದಿಂದ ವ್ಯಾಪಾರಿಗಳು ಕಂಗಾಲು

ಈ ಸುದ್ದಿಯನ್ನು ಶೇರ್ ಮಾಡಿ

Skin

ರಾಜ್ಯ ಹಾಗೂ ದೇಶದಲ್ಲೇ ಮುಸ್ಲಿಂ ಜನಾಂಗದ ವ್ಯಾಪಾರವಾಗಿರುವ ಚರ್ಮದ ವ್ಯಾಪಾರ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣ ವಾಗಿ ನೆಲ ಕಚ್ಚಿದ್ದು, ಈ ವ್ಯಾಪಾರವನ್ನೇ ನಂಬಿದ್ದವರು ಬೀದಿ ಪಾಲಾಗಿದ್ದಾರೆ. ವ್ಯಾಪಾರ ಕುಸಿದ ಪರಿಣಾಮ ಇಡೀ ದೇಶದಲ್ಲಿ ಸುಮಾರು 25ಕ್ಕೂ ಹೆಚ್ಚು ವ್ಯಾಪಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲೂ ಕೂಡ ಮೂರ್ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚರ್ಮದ ಡೀಲರ್ ಸಿ.ಆರ್.ಅಬ್ದುಲ್ ರಬ್ ಮಾಹಿತಿ ನೀಡಿದ್ದಾರೆ. ನಾನು 1980ರಿಂದ ಈ ವ್ಯಾಪಾರ ಮಾಡುತ್ತಿದ್ದೆ. ಅಂದಿನಿಂದಲೂ ಉತ್ತಮವಾಗಿ ವ್ಯಾಪಾರ ನಡೆಯುತ್ತಿತ್ತು. 2015ರಿಂದ ಕೇಂದ್ರದ ಮೋದಿ ಸರ್ಕಾರದ ಕೆಲವು ನಿಲುವುಗಳಿಂದ ಸಣ್ಣಮಟ್ಟದ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಇಂದು ಒಂದು ಕುರಿ ಅಥವಾ ಮೇಕೆಯ ಚರ್ಮದ ಬೆಲೆ ಕೇವಲ 10 ರಿಂದ 15 ರೂ.ಗಳಾಗಿವೆ. ಹೀಗಾದರೆ ರೈತರ ಪರಿಸ್ಥಿತಿ ಏನು..? ಇದನ್ನೇ ನೆಚ್ಚಿಕೊಂಡಿರುವ ಸಾವಿರಾರು ಜನ ಚರ್ಮದ ವ್ಯಾಪಾರಸ್ಥರ ಕಥೆ ಏನು..? ಕಳೆದ ಮೂರು ವರ್ಷಗಳಿಂದ ನನಗೆ ಸರಿ ಸುಮಾರು ಮೂರು ಕೋಟಿ ನಷ್ಟವಾಗಿದೆ. ತಿಂಗಳಿಗೆ 5 ಲಕ್ಷ ರೂ. ನಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.

Skin-1

ಚರ್ಮದ ವ್ಯಾಪಾರದಲ್ಲಿ ಕೆಲಸ ಮಾಡಲು ಸುಮಾರು 25 ಜನ ಕೆಲಸಗಾರರಿದ್ದರು. ತೀವ್ರ ನಷ್ಟವಿರುವ ಕಾರಣ ಕೇವಲ ಇಬ್ಬರು ಕೆಲಸಗಾರರನ್ನು ಇಟ್ಟುಕೊಳ್ಳುವ ಪರಿಸ್ಥಿತಿ ಇದೆ. ಚರ್ಮದ ವ್ಯಾಪಾರ ನೆಲ ಕಚ್ಚಿದ ಪರಿಣಾಮ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ ಎನ್ನುತ್ತಾರೆ. ಈ ಹಿಂದೆ ಚರ್ಮದ ಬೆಲೆ 250 ರಿಂದ 300 ರೂ . ಇತ್ತು. ಆದರೆ, ಇವತ್ತಿನ ಪರಿಸ್ಥಿತಿಯಲ್ಲಿ ಕೇವಲ 10 ರೂ.ಗೆ ಇಳಿದಿರುವುದು ರೈತರಿಗೂ ನಷ್ಟವಾಗುತ್ತಿದೆ. ಸುಮಾರು 60 ರಿಂದ 70 ಲಕ್ಷದ ಮಾಲನ್ನು ನಮ್ಮ ತೋಟದಲ್ಲಿ ಗುಂಡಿ ತೋಡಿ ಹೂಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಇದನ್ನೇ ನಂಬಿರುವ ಇನ್ನೂ ಅನೇಕ ಜನರು ಬೀದಿಗೆ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ.

Skin-2

ನಾನು ಚನ್ನರಾಯಪಟ್ಟಣದ ಕೆನರಾ ಬ್ಯಾಂಕ್‍ನಲ್ಲಿ ಸರಿ ಸುಮಾರು 2.40ಲಕ್ಷ ಸಾಲ ಮಾಡಿದ್ದೇನೆ. ದಿನನಿತ್ಯ ಬ್ಯಾಂಕ್‍ನಿಂದ ಹಣ ಕಟ್ಟುವಂತೆ ಫೋನ್ ಮಾಡಿ ಒತ್ತಡ ಹೇರುತ್ತಿದ್ದಾರೆ. ಪ್ರತಿ ತಿಂಗಳು ಸರಿ ಸುಮಾರು 4 ಲಕ್ಷ ತೆರಿಗೆಯನ್ನೇ ಕಟ್ಟುತ್ತಿದ್ದೆ. ಆದರೆ, ಈಗಿನ ಪರಿಸ್ಥಿತಿಯಿಂದ ಸಂಪೂರ್ಣವಾಗಿ ನಾನೇ ಸಾಲಗಾರನಾಗಿದ್ದೇನೆ. ಬ್ಯಾಂಕ್‍ನಲ್ಲೂ ಸಹ ಸುಸ್ಥಿದಾರನಾಗಿದ್ದು, ಮುಂದಿನ ದಿನಗಳಲ್ಲಿ ಅಲ್ಲೂ ಕೂಡ ಯಾವುದೇ ಸಾಲ ಸೌಲಭ್ಯ ಸಿಗುವುದಿಲ್ಲ. ನನ್ನಂತಯೇ ರಾಜ್ಯದ ಅನೇಕ ಜನ ಈ ವ್ಯಾಪಾರವನ್ನೇ ನಂಬಿ ಸಾಲಗಾರರಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಚರ್ಮದ ವ್ಯಾಪಾರಸ್ಥರ ನೆರವಿಗೆ ಬರಬೇಕು. ಇಲ್ಲದಿದ್ದರೆ ರೈತ ಹಾಗೂ ಚರ್ಮದ ವ್ಯಾಪಾರಿಗಳು ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ. ಆತ್ಮಹತ್ಯೆಯೇ ದಾರಿ ಎಂಬಂತಾಗುತ್ತದೆ.

ರೈತರ ನಾಯಕರಾಗಿರುವ ಮುಖ್ಯಮಂತ್ರಿ ಗಳು ರೈತರ ಸಾಲಮನ್ನಾ ಮಾಡಿದಂತೆ ನಷ್ಟದಲ್ಲಿರುವ ಸ್ಕಿನ್ ಮರ್ಚೆಂಟ್‍ಗಳ ಸಾಲವನ್ನು ಕೂಡ ಮನ್ನಾ ಮಾಡಬೇಕೆಂದು ನಮ್ಮ ಆಶಯ. ಈ ಬಗ್ಗೆ ಮುಖ್ಯ ಮಂತ್ರಿಗಳು ಗಮನ ಹರಿಸುತ್ತಾರೆಂಬುದು ನಮ್ಮ ನಂಬಿಕೆಯಾಗಿದೆ. ನಮ್ಮ ಜನಾಂಗದ ಸಚಿವರಾಗಿರುವ ಜಮೀರ್ ಅಹಮದ್ ಹಾಗೂ ಯು.ಟಿ.ಖಾದರ್ ಅವರು ಈ ಬಗ್ಗೆ ಸರ್ಕಾರದ ಜತೆ ಮಾತುಕಥೆ ನಡೆಸಿ ನಮಗೆ ನ್ಯಾಯ ದೊರಕಿಸಿ ಕೊಡಲು ಪ್ರಯತ್ನ ಪಡಬೇಕು. ಚರ್ಮದ ವ್ಯಾಪಾರವನ್ನೇ ನಂಬಿರುವಂತಹ ನಮ್ಮೆಲ್ಲರಿಗೆ ಅನುಕೂಲ ಕಲ್ಪಿಸಲಿ.

Skin-3

ಕೇಂದ್ರ ಸರ್ಕಾರದ ನೀತಿ
ಸ್ಕಿನ್ ಬಿಸಿನೆಸ್ ಈ ಮಟ್ಟಕ್ಕೆ ಪಾತಾಳಕ್ಕೆ ಇಳಿಯಲು ಕೇಂದ್ರ ಸರ್ಕಾರದ ಈಗಿನ ನೀತಿಯೇ ಕಾರಣ. ಹಿಂದೆ ಯುಪಿಎ ಸರ್ಕಾರ ಶೇ.10ರಷ್ಟು ರಾಯಲ್ಟಿ ವ್ಯಾಪಾರಿಗಳಿಗೆ ನೀಡುತ್ತಿದ್ದರು. ಆದರೆ, ಈಗಿನ ಕೇಂದ್ರ ಸರ್ಕಾರ ಕೇವಲ ಶೇ.1ರಷ್ಟು ನೀಡುತ್ತಿದ್ದು, ಇದರಿಂದ ನಷ್ಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.
ಸ್ಕಿನ್ ಬಿಸಿನೆಸ್ ಸಂಪೂರ್ಣವಾಗಿ ಇಡೀ ದೇಶದಲ್ಲಿ ನೆಲ ಕಚ್ಚಿದೆ. ಈ ನಷ್ಟದಿಂದ ಸುಮಾರು 25 ಜನ ಮರ್ಚೆಂಟ್‍ಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಬ್ಯಾಂಕ್‍ಗಳಿಂದ, ಇತರ ವೈಯಕ್ತಿಕ ಸಾಲಗಳಿಂದ ಈ ಆತ್ಮಹತ್ಯೆಗಳು ನಡೆದಿವೆ. ಕರ್ನಾಟಕದಲ್ಲೂ ಸುಮಾರು 4 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಚರ್ಮದ ವ್ಯಾಪಾರ ಸಂಪೂರ್ಣ ಕುಸಿದಿದ್ದು, ಇದರಿಂದ ಕುರಿಗಾಹಿ ರೈತರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಈ ಹಿಂದೆ 250 ರೂ. ರಿಂದ 300 ರೂ. ಇದ್ದ ಚರ್ಮ ಈಗ ಕೇವಲ 10ರೂ. ಬೆಲೆ ಇದೆ. ಏನು ಮಾಡುವುದೆಂದು ತಿಳಿಯದೆ ಆತಂಕ ಎದುರಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಈ ವ್ಯಾಪಾರದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಚರ್ಚೆಗಳು ನಡೆದಿಲ್ಲ. ಕೇವಲ ಮುಸ್ಲಿಂ ಜನಾಂಗ ಈ ವ್ಯಾಪಾರವನ್ನೇ ನಂಬಿರುವ ಕಾರಣ ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರು ಈ ಬಗ್ಗೆ ಗಮನ ಹರಿಸಲಿ. ಕೇಂದ್ರ ಸರ್ಕಾರದ ನಿಲುವಿನಿಂದ ಆಗಿರುವ ನಷ್ಟದ ಬಗ್ಗೆ ಪ್ರಧಾನಮಂತ್ರಿ ಮೋದಿಯವರಲ್ಲಿ ತಿಳಿಸಿ ಮುಸ್ಲಿಂ ಜನಾಂಗದ ಉಳಿವಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಈ ಜನಾಂಗಕ್ಕೆ ದೊಡ್ಡ ಹೊಡೆತವೇ ಬೀಳುತ್ತದೆ ಎನ್ನುತ್ತಾರೆ.

ವಿದೇಶಕ್ಕೆ ರಫ್ತು
ಈ ಹಿಂದೆ ಅಮೆರಿಕಾ, ಯೂರೋಪ್, ಜಪಾನ್, ಜರ್ಮನ್, ಲಿಬಿಯಾ ಸೇರಿದಂತೆ ಅನೇಕ ದೇಶಗಳಿಗೆ ಚರ್ಮ ರಫ್ತಾಗುತ್ತಿತ್ತು. ಇದರ ಪ್ರಮುಖ ವ್ಯಾಪಾರ ಕೇಂದ್ರ ಚೆನ್ನೈ ಆಗಿದ್ದು, ಚೆನ್ನೈ ಮುಖಾಂತರ ಅನೇಕ ದೇಶಗಳಿಗೆ ಹೋಗುತ್ತಿತ್ತು. ಈ ಹಿಂದೆ ಸುಮಾರು 300ಕ್ಕಿಂತ ಹೆಚ್ಚು ಜನ ಮರ್ಚೆಂಟ್‍ಗಳಿದ್ದರು. ಈಗ ಕೇವಲ ಚೆನ್ನೈನಲ್ಲಿ 4 ಜನ ಮಾತ್ರ ಇದ್ದಾರೆ.

ಭಾರತದಲ್ಲಿ ಕಡಿಮೆ ರಫ್ತು
ಈ ಹಿಂದೆ ಪಾದರಕ್ಷೆಗಳು , ಕೆಲವು ವಾಹನಗಳ ಸೀಟ್‍ಗಳು ಮಹಿಳೆಯರ ಪರ್ಸ್‍ಗಳು ಸೇರಿದಂತೆ ಅನೇಕ ಗೃಹೋಪಯೋಗಿ ವಸ್ತುಗಳಿಗೆ ಚರ್ಮವನ್ನು ಬಳಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಚರ್ಮದಿಂದ ಉತ್ಪಾದಿಸುವ ವಸ್ತುಗಳು ಕಡಿಮೆಯಾಗುತ್ತಿದ್ದು, ಈಗ ರಬ್ಬರ್‍ನಂತಹ ಕೆಲವು ರಾಸಾಯನಿಕ ವಸ್ತುಗಳಿಂದ ಇವುಗಳನ್ನು ತಯಾರು ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಚರ್ಮದ ವ್ಯಾಪಾರ ಸಂಪೂರ್ಣ ಕುಸಿದಿದ್ದು, ನಮ್ಮ ಮೇಕೆಯ ಚರ್ಮವನ್ನು ಕೇವಲ 10ರೂ.ಗೆ ಮಾರಾಟ ಮಾಡುವ ಪರಿಸ್ಥಿತಿಗೆ ಬಂದಿದೆ. ಒಂದು ಟೀ ಬೆಲೆ ಒಂದು ಚರ್ಮದ ಬೆಲೆಯಾಗಿದೆ. 200 ರಿಂದ 300ರೂ. ಇದ್ದ ಬೆಲೆ ಈಗ 10 ರೂ. ಆಗಿದೆ. ನಾವು ಏನು ಮಾಡಬೇಕು ಎನ್ನುತ್ತಾರೆ ಕುರಿಗಾಯಿ ರೈತ ರಂಗೇಗೌಡ.

Skin-4

ನಮ್ಮ ತಂದೆ ಕಾಲದಿಂದಲೂ ನಾವು ಈ ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದೇವೆ. ಆದರೆ, ಇವತ್ತಿನ ಮಾರುಕಟ್ಟೆಯಲ್ಲಿ ಚರ್ಮದ ಬೆಲೆ 10ರೂ.ಗೆ ಬಂದು ನಿಂತಿದೆ. ಇದರಿಂದ ಸಂಪೂರ್ಣ ವ್ಯಾಪಾರ ನೆಲ ಕಚ್ಚಿದ್ದು, ಕುಟುಂಬವನ್ನು ನಡೆಸುವುದೇ ಕಷ್ಟಕರವಾಗಿದೆ ಎನ್ನುತ್ತಾರೆ ಸಣ್ಣ ವ್ಯಾಪಾರಿ ಮಕ್ತರ್ ಪಾಷಾ.
ಸರ್ಕಾರ ಈಗಲಾದರೂ ಚರ್ಮದ ವ್ಯಾಪಾರಿಗಳು, ರೈತರ ನೆರವಿಗೆ ದಾವಿಸಬೇಕಿದೆ.

ಪ್ರದೀಪ್ 

Facebook Comments

Sri Raghav

Admin