ಹೊರಗಿನಿಂದ ಜನರನ್ನು ಕರೆತಂದು ಪಾದಯಾತ್ರೆ ಮಾಡುತ್ತಿದೆ ಬಿಜೆಪಿ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

D-K-Shivakumar--01

ಬೆಂಗಳೂರು,ಜು.28- ರೈತರ ಸಾಲಮನ್ನಾಕ್ಕಾಗಿ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಜನರನ್ನು ದಾರಿತಪ್ಪಿಸುವ ಕೆಲಸ ಎಂದು ತಿರುಗೇಟು ನೀಡಿರುವ ಜಲಸಂಪನ್ಮೂ ಸಚಿವ ಡಿ.ಕೆ.ಶಿವಕುಮಾರ್, ಬಿಜೆಪಿಗೆ ರೈತರ ಬೆಂಬಲವಿಲ್ಲ ಎಂದು ಹೇಳಿದರು.  ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ನೆರವಿಗೆ ಕೇಂದ್ರ ಸರ್ಕಾರ 10 ರೂ.ಗಳನ್ನೂ ಕೊಟ್ಟಿಲ್ಲ. ಆದರೆ ನಮ್ಮ ಜೋಡಿ ಸರ್ಕಾರ ಸಾಲಮನ್ನಾ ಸೇರಿದಂತೆ ವಿವಿಧ ಯೋಜನೆಗಳ ಮೂಲಕ 40 ಸಾವಿರ ಕೋಟಿ ರೂ.ಗಳ ನೆರವು ನೀಡಿದೆ. ರೈತರಿಗೆ ನಾವು ಮಾಡಿರುವ ಸಾಲಮನ್ನಾದ ಖುಷಿಯನ್ನು ಹಂಚಿಕೊಳ್ಳಲು ಬಿಡದ ಬಿಜೆಪಿ ಸಂಚು ಮಾಡಿ ಪಾದಯಾತ್ರೆ ಹೋರಾಟದ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಇವರ ಈ ಹೋರಾಟಕ್ಕೆ ಸ್ಥಳೀಯ ರೈತರ ಬೆಂಬಲವಿಲ್ಲ. ಹೊರಗಿನಿಂದ ಜನರನ್ನು ಕರೆಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರ ರಚನೆಗೆ ಮುನ್ನವೇ ರೈತರ ಸಾಲಮನ್ನಾ ಮಾಡಬೇಕೆಂದು ಬಿ.ಎಸ್.ಯಡಿಯೂರಪ್ಪ ಗಡುವು ನೀಡಿ ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಿದ್ದರು. ಸರ್ಕಾರ ರಚನೆಯಾಗಿ ಎರಡು ತಿಂಗಳಾಗಿಲ್ಲ. ನಾವು ರೈತರ ಎರಡು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿದ್ದೇವೆ. ಸಂತಸ ಪಡಲು ರೈತರಿಗೆ ಅವಕಾಶ ಕೊಡದೆ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾವು ಮಾಡಿದ ಸಾಲಮನ್ನಾ ರಾಷ್ಟ್ರೀಕೃತ ಬ್ಯಾಂಕ್‍ಗಳು ಒಪ್ಪುವುದಿಲ್ಲ. ಕೋ-ಆಪರೇಟಿವ್ ಸೊಸೈಟಿ ಮೂಲಕ ಸಾಲ ಮನ್ನಾ ಮಾಡಿ ಋಣಮುಕ್ತ ಪತ್ರಗಳನ್ನು ನೀಡಬೇಕೆಂದು ಆಗ್ರಹಿಸಿದ್ದರು. ಆದರೆ ನಾವು ಬ್ಯಾಂಕರ್ಸ್ ಜೊತೆಯೂ ಮಾತುಕತೆ ನಡೆಸಿದ್ದೇವೆ. ಅವರು ಕೂಡ ಸಮ್ಮತಿ ಸೂಚಿಸಿದ್ದಾರೆ. ಇದನ್ನು ಸಹಿಸದ ಬಿಜೆಪಿ ಹೋರಾಟದ ಮೂಲಕ ದಾರಿ ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಡಿಕೆಶಿ ಹೇಳಿದರು.

ಬಿಜೆಪಿ ರಾಜ್ಯವನ್ನು ಇಬ್ಭಾಗ ಮಾಡುವ ಸಂಚು ರೂಪಿಸಿದೆ. ಪ್ರತ್ಯೇಕತೆಗೆ ಕಾಂಗ್ರೆಸ್, ಜೆಡಿಎಸ್ ಯಾವತ್ತೂ ಬೆಂಬಲ ನೀಡುವುದಿಲ್ಲ. ಬೀದರ್‍ನಿಂದ ಚಾಮರಾಜದವರೆಗೆ, ಬಳ್ಳಾರಿಯಿಂದ ಕೋಲಾರದವರೆಗೆ ಅಖಂಡ ಕರ್ನಾಟಕದ ಪರಿಕಲ್ಪನೆ ನಮ್ಮದು. ಕರ್ನಾಟಕ ಅಭಿವೃದ್ಧಿಶೀಲ ರಾಜ್ಯವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಪಡೆದಿದೆ. ಈ ರಾಜ್ಯವನ್ನು ಇಬ್ಭಾಗ ಮಾಡಲು ಬಿಜೆಪಿ ಹೊರಟಿದೆ. ಇದನ್ನು ಖಂಡಿಸುತ್ತೇವೆ ಮತ್ತು ರಾಜ್ಯ ಹೋಳಾಗಲು ಬಿಡುವುದಿಲ್ಲ ಎಂದರು. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಡ್ಯಾಂಗಳು ಭರ್ತಿಯಾಗಿದೆ. ತಮಿಳುನಾಡಿಗೆ ಹರಿಸಬೇಕಾದ ನೀರನ್ನು ಹರಿಸಿದ್ದೇವೆ ಎಂದು ಹೇಳಿದರು.

Facebook Comments

Sri Raghav

Admin