ಬೆಂಗಳೂರಲ್ಲಿ ಮತ್ತೆ ಸೌಂಡ್ ಮಾಡಿದ ಪೊಲೀಸರ ಪಿಸ್ತೂಲ್

ಈ ಸುದ್ದಿಯನ್ನು ಶೇರ್ ಮಾಡಿ

Police--Shootout--01

ಬೆಂಗಳೂರು, ಜು.29- ಬಂಧಿಸಲು ಹೋದ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದ ಅಪರಾಧ ಹಿನ್ನೆಲೆಯ ಆರೋಪಿ ಕಿರಣ ಎಂಬಾತನನ್ನು ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಎಸ್.ಎಸ್.ಮಂಜು ನೇತೃತ್ವದ ತಂಡ ಕಾಲಿಗೆ ಗುಂಡು ಹಾರಿಸಿ ಬಂಧಿಸಿದೆ.
ಗುಂಡೇಟಿನಿಂದ ಗಾಯಗೊಂಡ ಆರೋಪಿ ಕಿರಣನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿರಣ ಅಲಿಯಾಸ್ ಶಶಿಕಿರಣ ಕೊಲೆ, ಕೊಲೆಯತ್ನ, ದರೋಡೆ, ಸುಲಿಗೆಯಂತಹ 9 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಜು.25ರಂದು ರಾತ್ರಿ ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಚೋಳರಪಾಳ್ಯದ 2ನೆ ಕ್ರಾಸ್ ಮತ್ತು ಭುವನೇಶ್ವರಿ ನಗರದ 26ನೇ ಕ್ರಾಸ್‍ನಲ್ಲಿ ಐದು ಜನರ ತಂಡ, ಮಚ್ಚು, ಲಾಂಗ್‍ಗಳಿಂದ ಐದು ವಾಹನಗಳ ಗಾಜುಗಳನ್ನು ಹೊಡೆದು ದಾಂಧಲೆ ಮಾಡಿತ್ತು. ಈ ಮೂಲಕ ಭಯದ ವಾತಾವರಣ ನಿರ್ಮಿಸಿದ್ದರು. ಮಾತ್ರವಲ್ಲ ಇಲ್ಲಿನ ಕಾಂಗ್ರೆಸ್ ಕಚೇರಿಯ ಎದುರು ನಡೆದ ಪ್ರತಿಭಟನೆಯ ವೇಳೆ ಕಚೇರಿಗೆ ನುಗ್ಗಿದ್ದ ಆರೋಪಿ ಕಿರಣ ಅಲ್ಲಿಯೂ ದಾಂಧಲೆ ನಡೆಸಿದ್ದ ಎನ್ನಲಾಗಿದೆ. ಈ ಸಂಬಂಧ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ರವಿ ಡಿ. ಚನ್ನಣ್ಣನವರ್ ಅವರ ಮಾರ್ಗದರ್ಶನದಲ್ಲಿ ಕೆ.ಪಿ.ಅಗ್ರಹಾರ ಹಾಗೂ ಬಸವೇಶ್ವರ ನಗರ ಪೊಲೀಸ್ ಇನ್ಸ್‍ಪೆಕ್ಟರ್ ಅವರ ನೇತೃತ್ವದಲ್ಲಿ 2 ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಈ ತಂಡ ಕಳೆದ ರಾತ್ರಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆಯಲ್ಲಿದ್ದ ವೇಳೆ ಆರೋಪಿ ಕಿರಣ, ಕೆ.ಪಿ.ಅಗ್ರಹಾರದ ರೈಲ್ವೆ ಸೇತುವೆ ಬಳಿಯ ಬಿನ್ನಿಕ್ಯಾಂಟೀನ್ ಹತ್ತಿರ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ಕೆ.ಪಿ.ಅಗ್ರಹಾರ ಇನ್ಸ್‍ಪೆಕ್ಟರ್ ಎಸ್.ಎಸ್. ಮಂಜು ಹಾಗೂ ಸಿಬ್ಬಂದಿ ಬೆಳಗ್ಗಿನ ಜಾವ 12.45ರ ಸುಮಾರಿಗೆ ಸ್ಥಳಕ್ಕೆ ತೆರಳಿ ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಆಗ ಕಿರಣ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು, ಇನ್ಸ್‍ಪೆಕ್ಟರ್ ಮಂಜು ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ತಾಕೀತು ಮಾಡಿದ್ದಾರೆ.

ಇದನ್ನು ಲೆಕ್ಕಿಸದ ಆರೋಪಿ ತನ್ನನ್ನು ಹಿಡಿಯಲು ಬಂದ ಮುಖ್ಯ ಪೇದೆ ನಾಗರಾಜಪ್ಪ ಅವರಿಗೆ ತನ್ನ ಬಳಿ ಇದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಇನ್ಸ್‍ಪೆಕ್ಟರ್ ಮಂಜು ಅವರು ಪ್ರಾಣ ರಕ್ಷಣೆಗಾಗಿ ಸರ್ವೀಸ್ ಪಿಸ್ತೂಲಿನಿಂದ ಆರೋಪಿಯ ಬಲ ಕಾಲಿಗೆ ಗುಂಡು ಹಾರಿಸಿದ್ದಾರೆ. ಕುಸಿದು ಬಿದ್ದ ಆರೋಪಿಯನ್ನು ಇತರ ಸಿಬ್ಬಂದಿ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಿರಣ ಬೀಸಿದ ಮಚ್ಚಿನಿಂದ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯನಗರ ಉಪ ವಿಭಾಗದ ಎಸಿಪಿ ಪರಮೇಶ್ವರ್ ಹೆಗಡೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Facebook Comments

Sri Raghav

Admin