ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ : ಬಸವರಾಜ ರಾಯರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Basavaraja-Rayareddy

ಬೆಂಗಳೂರು, ಜು.30- ರಾಜ್ಯ ಸರ್ಕಾರದ ಬಜೆಟ್‍ನಲ್ಲಾಗಲಿ, ಅಭಿವೃದ್ಧಿಯಲ್ಲಾಗಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ರಾಜಕೀಯವಾಗಿ ಉತ್ತರ ಕರ್ನಾಟಕ ಭಾಗಕ್ಕೆ ತಾರತಮ್ಯವಾಗಿದೆ ಎಂದು ಮಾಜಿ ಸಚಿವ ಬಸವರಾಜರಾಯರೆಡ್ಡಿ ಹೇಳಿದರು. ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ಬಂದ್ ಆಚರಿಸಲು ನೀಡಿರುವ ಕರೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರಿಂದ ಹಿಡಿದು ಈವರೆಗೂ ಆಡಳಿತ ನಡೆಸಿದ ಯಾವುದೇ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿಲ್ಲ. ಎಲ್ಲರೂ ತಮ್ಮದೇ ಆದಂತಹ ಕೊಡುಗೆ ನೀಡಿದ್ದಾರೆ. ಆದರೆ ರಾಜಕೀಯವಾಗಿ ಅನ್ಯಾಯವಾಗಿದೆ ಎಂದು ಹೇಳಿದರು.  ಉತ್ತರ ಕರ್ನಾಟಕ ಭಾಗದಲ್ಲಿ 96 ಮಂದಿ ಶಾಸಕರಿದ್ದಾರೆ. ಆದರೆ ಕೇವಲ 8 ಮಂದಿ ಮಾತ್ರ ಸಚಿವರಾಗಿದ್ದಾರೆ. ದಕ್ಷಿಣ ಕರ್ನಾಟಕ ಭಾಗಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿಧಾನ ಸಭಾಧ್ಯಕ್ಷರು, ಉಪಾಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಜಲ ಸಂಪನ್ಮೂಲ, ಕೈಗಾರಿಕೆ ಸೇರಿದಂತೆ ಎಲ್ಲಾ ಪ್ರಮುಖ ಖಾತೆಗಳು ದಕ್ಷಿಣ ಕರ್ನಾಟಕ ಭಾಗದವರ ಪಾಲಾಗಿದೆ. ಹೀಗಾಗಿ ರಾಜಕೀಯ ತಾರತಮ್ಯವಾಗಿದೆ. ಆದ್ದರಿಂದ ಮುಂದಿನ ಸಂಪುಟ ವಿಸ್ತರಣೆ ವೇಳೆ ಉತ್ತರ ಕರ್ನಾಟಕ ಭಾಗದವರಿಗೆ ಅವಕಾಶ ನೀಡಬೇಕು, ನಿಗಮ ಮಂಡಳಿಗಳಲ್ಲೂ ಆದ್ಯತೆ ಕಲ್ಪಿಸಬೇಕು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಿಂದ ಆಯ್ಕೆಯಾಗಿದ್ದಾರೆ. ಅವರಿಗೆ ಕೊಡಲು ಯಾವ ಹುದ್ದೆಗಳೂ ಇಲ್ಲ, ಕೊಟ್ಟರೆ ಮುಖ್ಯಮಂತ್ರಿ ಸ್ಥಾನವನ್ನೇ ನೀಡಬೇಕು ಎಂದು ಹೇಳಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಜನ ನನಗೆ ಮತ ಹಾಕಿಲ್ಲ ಎಂದು ಹೇಳಿಕೆ ನೀಡಿದರೆ ಅದು ತಪ್ಪು. ಆ ರೀತಿ ಮಾತನಾಡುವುದು ಅಪ್ರಬುದ್ಧತೆ. ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಲಿ ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕ ಭಾಗದ ಶಾಸಕರು, ಜನಪ್ರತಿನಿಧಿಗಳ ಸಭೆ ಕರೆದು ಮುಖ್ಯಮಂತ್ರಿಗಳುಗಳು ಸಮಸ್ಯೆಗಳನ್ನು ಆಲಿಸಬೇಕು ಎಂದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ನಷ್ಟವಾಗಲಿದೆ ಎಂಬ ಅಂದಾಜು ಸರಿಯಲ್ಲ. ಕಾಂಗ್ರೆಸ್ ಎಲ್ಲಾ ಭಾಗಗಳಲ್ಲೂ ಬಲಿಷ್ಠವಾಗಿದೆ. ಜಾತ್ಯತೀತ ಪಕ್ಷಗಳು ಒಗ್ಗೂಡಿಕೆ ದೃಷ್ಟಿಯಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ನಡೆಯಲಿದೆ ಎಂದು ಹೇಳಿದರು.  ನಾಳೆ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳ ಬಂದ್ ರಾಜಕೀಯ ಪ್ರೇರಿತ, ಅದನ್ನು ಹಿಂಪಡೆಯಬೇಕು. ಬಿಜೆಪಿಯ ಶ್ರೀರಾಮುಲು, ಉಮೇಶ್ ಕತ್ತಿಯಂತವರಿಗೆ ಏಕೀಕರಣದ ಮಹತ್ವ ಗೊತ್ತಿಲ್ಲ. ಅದಕ್ಕಾಗಿ ಹಲವಾರು ಮಂದಿ ಹೋರಾಡಿದ್ದಾರೆ, ಪ್ರಾಣ ತ್ಯಾಗ ಮಾಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ಮನಸ್ಸಿಗೆ ಬಂದಂತೆ ಮಾತನಾಡಬಾರದು ಎಂದು ಹೇಳಿದರು.

ಸಿಂಡಿಕೇಟ್‍ನಲ್ಲಿ ಅನರ್ಹರಿಲ್ಲ:
ರಾಜ್ಯ ವಿಶ್ವವಿದ್ಯಾನಿಲಯಗಳಿಗೆ ಅರ್ಹರನ್ನು ನೇಮಿಸಲಾಗಿದೆ. ಅನರ್ಹರಿದ್ದಾರೆ ಎಂಬ ಕಾರಣಕ್ಕೆ ಹಿಂದಿನ ಸರ್ಕಾರ ನೇಮಿಸಿದ್ದ ಸಿಂಡಿಕೇಟ್ ಸದಸ್ಯರನ್ನು ವಜಾ ಮಾಡಿರುವುದು ಸರಿಯಲ್ಲ. ಕೂಡಲೇ ಅವರನ್ನು ಪುನರ್ ನೇಮಕ ಮಾಡಿಕೊಳ್ಳಬೇಕೆಂದು ರಾಯರೆಡ್ಡಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರನ್ನು ಒತ್ತಾಯಿಸಿದರು.

ವಿದ್ಯಾವಂತರು, ಅನುಭವಿಗಳನ್ನೇ ಸಿಂಡಿಕೇಟ್‍ಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಸಿಂಡಿಕೇಟ್ ಸದಸ್ಯರ ಪಟ್ಟಿಯನ್ನು ನೋಡದೆ ಜಿ.ಟಿ.ದೇವೇಗೌಡ ಮಾತನಾಡುತ್ತಿದ್ದಾರೆ. ಅದರಲ್ಲಿ ಯಾರೂ ಅನರ್ಹರಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ರಾಜಕೀಯ ನೇಮಕಾತಿ ಮಾಡಲು ಸಾಧ್ಯವಿಲ್ಲ. ಕೂಡಲೇ ಹಿಂದಿನ ಸಿಂಡಿಕೇಟ್ ಸದಸ್ಯರನ್ನೇ ಮುಂದುವರೆಸಬೇಕೆಂದು ಆಗ್ರಹಿಸಿದರು.

ಟಿಎಡಿಎ ಬಂದರೆ ತೆಗೆದುಕೊಳ್ಳುತ್ತೇನೆ:
ಈ ಮೊದಲು ಸಚಿವನಾಗಿ, ಶಾಸಕನಾಗಿ ಕೆಲಸ ಮಾಡಿದ ವೇಳೆ ವೇತನ,ಮನೆ ಬಾಡಿಗೆಯನ್ನು ಪಡೆದುಕೊಂಡಿಲ್ಲ. ಇತ್ತೀಚೆಗೆ ಚುನಾವಣೆಯಲ್ಲಿ ಸೋತಾಗ ಕಾರ್ಯಕರ್ತರೊಬ್ಬರು ಸಂವಿಧಾನವೇ ತಿದ್ದುಪಡಿಯಾಗುತ್ತದೆ, ನಿಮ್ಮ ನಿಲುವುಗಳನ್ನು ತಿದ್ದುಪಡಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು.   ಅದೇ ರೀತಿ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರು ಕೂಡ ರಾಜಕೀಯವಾಗಿ ನೀವು ಉಳಿಯಬೇಕಾದರೆ ಟಿಎಡಿಎ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಹೀಗಾಗಿ ಟಿಎಡಿಎ ಲೆಕ್ಕ ಹಾಕಿ ಅರ್ಜಿ ಹಾಕಿದ್ದೇನೆ. ಸರಿಸುಮಾರು 47 ಲಕ್ಷಗಳಷ್ಟಿದೆ. ಅದನ್ನು ಕೊಡಲು ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೊಟ್ಟರೆ ತೆಗೆದುಕೊಳ್ಳುತ್ತೇನೆ. ಚುನಾವಣೆಯಲ್ಲಿ ಸೋತಾಗ ಮನಸ್ಸಿಗೆ ತುಂಬಾ ಬೇಜಾರಾಯಿತು. ಜೊತೆಗೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಅರ್ಜಿ ಹಾಕಿದ್ದೇನೆ ಎಂದು ಹೇಳಿದರು. ಮಾಜಿ ಶಾಸಕ ಪಿ.ಎಂ.ಅಶೋಕ್ ಪಟ್ಟಣ್ ಪತ್ರಿಕಾಗೋಷ್ಠಿಯಲ್ಲಿದ್ದರು.

Facebook Comments

Sri Raghav

Admin