ಕರುಣಾನಿಧಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

Karunanidhi--01

ಚೆನ್ನೈ, ಜು.30- ತೀವ್ರ ಅನಾರೋಗ್ಯದಿಂದಾಗಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಅವರ ಬೆಂಬಲಿಗರು, ಡಿಎಂಕೆ ಕಾರ್ಯಕರ್ತರು ಆತಂಕಗೊಂಡಿದ್ದಾರೆ.  ಕರುಣಾನಿಧಿಯವರ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಮೊರೆ ಇಟ್ಟಿರುವ ಅವರು, ಪೋ … ಪೋ … ಯಮರಾಜ (ಹೋಗು ಹೋಗು ಯಮರಾಜ) ಎಂದು ಪ್ರಾರ್ಥಿಸುತ್ತಾ ಕಣ್ಣೀರಿಡುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಲು ಆಸ್ಪತ್ರೆ ಮುಂಭಾಗ ಎರಡು ಸ್ಪೀಕರ್ ಅಳವಡಿಸಲಾಗಿದೆ. ಮೈಕ್ ಮೂಲಕ ವೈದ್ಯರು ಕರುಣಾನಿಧಿ ಅವರ ಆರೋಗ್ಯದ ಕುರಿತು ಮಾಹಿತಿ ನೀಡುತ್ತಿದ್ದಾರೆ. ಕ್ಷಣ ಕ್ಷಣ ಆರೋಗ್ಯ ಮಾಹಿತಿಯನ್ನು ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಆತಂಕದಿಂದ ಕೇಳುತ್ತಿದ್ದು, ಯಾವುದೇ ರೀತಿ ತೊಂದರೆಯಾಗಬಾರದು, ಅವರು ಮೊದಲಿನಂತೆ ಆಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಈ ಮಧ್ಯೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ.ಪನ್ನೀರ್‍ಸೆಲ್ವಂ ಬೆಳಗಿನ ಜಾವ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಕರುಣಾನಿಧಿಯವರ ಸಂಬಂಧಿಕರು, ಕುಟುಂಬವರ್ಗದವರು ಈಗಾಗಲೆ ಆಸ್ಪತ್ರೆಯಲ್ಲಿ ಬೀಡುಬಿಟ್ಟಿದ್ದಾರೆ.

ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದಂತೆ ಕಾವೇರಿ ಆಸ್ಪತ್ರೆ ಮುಂದೆ ಜಮಾಯಿಸುತ್ತಿರುವ ಅಭಿಮಾನಿಗಳನ್ನು ನಿಯಂತ್ರಿಸಲು ಚೆನ್ನೈ ಪೊಲೀಸರು ಹೆಚ್ಚಿನ ಬಿಗಿ ಭದ್ರತೆ ಒದಗಿಸಿದ್ದಾರೆ. ಚೆನ್ನೈಯಾದ್ಯಂತ 6 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ತಮಿಳುನಾಡಿನಾದ್ಯಂತ ಪೊಲೀಸರು ಸನ್ನದ್ಧರಾಗಿರುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೆ, ಯಾವೊಬ್ಬ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯೂ ರಜೆ ತೆಗೆದುಕೊಳ್ಳದಂತೆ ಸೂಚನೆ ನೀಡಲಾಗಿದೆ.

Facebook Comments

Sri Raghav

Admin