“ರಾಜ್ಯವನ್ನು ಒಡೆದು ಜೆಡಿಎಸ್ ಬಲಪಡಿಸಲು ದೇವೇಗೌಡರ ಪ್ಲಾನ್”

ಈ ಸುದ್ದಿಯನ್ನು ಶೇರ್ ಮಾಡಿ

Devegowda-vs-Yadiyurappa-Ya

ಬೆಂಗಳೂರು, ಜು.30-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯವನ್ನು ಪ್ರತ್ಯೇಕಿಸುವ ಮೂಲಕ ಜೆಡಿಎಸ್ ಬಲಪಡಿಸಲು ಹುನ್ನಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಯಾವುದೇ ಕಾರಣಕ್ಕೂ ರಾಜ್ಯವನ್ನು ಇಬ್ಬಾಗವಾಗಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.  ಅಖಂಡ ಕರ್ನಾಟಕ ನಿರ್ಮಾಣವಾಗಲು ನಮ್ಮ ಹಿರಿಯರು ರಕ್ತ ಹರಿಸಿದ್ದಾರೆ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತರ ನಡೆಸಿರುವಂತೆ ಕಾಣುತ್ತಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.  ನಾಳೆ ಬೆಳಗಾವಿಯ ಸುವರ್ಣ ಸೌಧದ ಮುಂದೆ ಪ್ರತ್ಯೇಕ ಕರ್ನಾಟಕ ರಾಜ್ಯ ಹೋರಾಟದಲ್ಲಿ ಭಾಗವಹಿಸಲಿರುವ ವಿವಿಧ ಮಠಾಧೀಶರು ಹಾಗೂ ಇತರ ಹೋರಾಟಗಾರರ ಮನವೊಲಿಸಲು ತಾವು ನಾಳೆ ಬೆಳಗಾವಿಗೆ ತೆರಳುತ್ತಿದ್ದು, ಏಕೀಕೃತ ಕರ್ನಾಟಕದ ಹೋರಾಟಕ್ಕೆ ಬದ್ಧವಾಗಿರಲು ಸ್ವಾಮೀಜಿಯವರಲ್ಲಿ ಮನವಿ ಮಾಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಜನತೆಯನ್ನು ಸವತಿ ಮಕ್ಕಳಂತೆ ಕಾಣುತ್ತಿರುವ ಕುಮಾರಸ್ವಾಮಿಯವರು, ಸಾಲ ಮನ್ನಾ ಮಾಡಲು ನೀವೇನು ನನಗೆ ಓಟು ಹಾಕಿದ್ದೀರ, ಓಟು ಹಾಕುವಾಗ ನನ್ನ ನೆನಪಾಗಲಿಲ್ಲವೆ ಎಂದು ಕೇಳುವ ಮೂಲಕ ಮುಖ್ಯಮಂತ್ರಿಯವರು ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ. ಇದು ದುರಹಂಕಾರದ ಮಾತಾಗಿದ್ದು, ಈ ರೀತಿ ಹಿಂದೆ ಯಾವ ಮುಖ್ಯಮಂತ್ರಿಯೂ ಮಾತಾಡಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಗಳೂರಿನ ಹಣವನ್ನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಡುತ್ತೇನೆ ಎನ್ನುವ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿಯವರು ಮನೆ ಒಡೆಯುವ ಸಂಚಿಗೆ ಕೈ ಹಾಕಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರ ಮೌನ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕುಮಾರಸ್ವಾಮಿಯವರ ಹೇಳಿಕೆಗಳಿಂದ ಉತ್ತರ ಕರ್ನಾಟಕದ ಜನತೆಗೆ ನೋವಾಗಿದೆ. ಇವರ ಹೇಳಿಕೆಗಳ ಲಾಭವನ್ನು ಪಡೆಯಲು ಹಲವರು ಪ್ರಯತ್ನಿಸುತ್ತಿದ್ದು, ಯಾವುದೇ ಕಾರಣಕ್ಕೂ ರಾಜ್ಯವನ್ನು ಇಬ್ಬಾಗವಾಗಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ.

Facebook Comments

Sri Raghav

Admin