‘ಕರ್ನಾಟಕ ಎಂದಿಗೂ ಒಂದೇ’ : ಸಿಎಂ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

CM-HD-Kumaraswamy

ಬೆಂಗಳೂರು, ಜುಲೈ 31: ಕರ್ನಾಟಕ ರಾಜ್ಯವನ್ನು ಉತ್ತರ ಕರ್ನಾಟಕ- ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಬೇರೆ ಬೇರೆ ಎಂದು ಕನಸು ಮನಸ್ಸಿನಲ್ಲೂ ಊಹಿಸಲು ಸಾಧ್ಯವಿಲ್ಲ. ಕರ್ನಾಟಕದ ಅಖಂಡತೆಯ ಕಡೆಗೆ ಅಚಲ ವಿಶ್ವಾಸ ನನ್ನದು. ಉತ್ತರ ಮತ್ತು ದಕ್ಷಿಣ ಕರ್ನಾಟಕಗಳೆಂಬ ಭೇದವನ್ನು ನಮ್ಮ ಸರ್ಕಾರ ಎಂದಿಗೂ ಎಣಿಸಿಲ್ಲ. ಎಣಿಸುವುದೂ ಇಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಸ್ಪಷ್ಟಪಡಿಸಿದರು. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ಚರ್ಚಿಸಲು ನಿಯೋಗವೊಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡುವ ಘೋಷಣೆ ಮಾಡಿದ್ದೆ. ಬೆಳಗಾವಿಯ ಸುವರ್ಣ ಸೌಧಕ್ಕೆ ರಾಜ್ಯದ ಹಲವು ಕಚೇರಿಗಳನ್ನು ಸ್ಥಳಾಂತರಿಸಲು ತೀರ್ಮಾನಿಸಿದ್ದೇನೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸ್ಥಳೀಯ ಕೈಗಾರಿಕಾ ಕೌಶಲ್ಯಕ್ಕೆ ಅನುಗುಣವಾಗಿ ಕ್ಲಸ್ಟರ್ ಮಾದರಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು 500 ಕೋಟಿ ರೂ.ಗಳನ್ನು ಈಗಾಗಲೇ ತೆಗೆದಿರಿಸಿದ್ದೇನೆ. ಸಾಲ ಮನ್ನಾ ಯೋಜನೆಯಿಂದ ಉತ್ತರ ಕರ್ನಾಟಕ ಭಾಗದ ರೈತರಿಗೆ ಹೆಚ್ಚಿನ ಉದ್ದೇಶಕ್ಕಾಗಿಯೇ ಅನುಕೂಲವಾಗಲಿದೆ,’ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಉತ್ತರ ಕರ್ನಾಟಕ ನನ್ನ ಉಸಿರಿನ ಭಾಗ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ 27 ಬಾರಿ ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದೇನೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲು ಮುಂದಾಗಿದ್ದು ನಾನು. ಹಾಗಿರುವಾಗ ನಾನು ಉತ್ತರ ಕರ್ನಾಟಕ ಅಭಿವೃದ್ಧಿಯ ವಿರುದ್ಧ ಇದ್ದೇನೆ ಎಂದು ಸುಳ್ಳು ಸುದ್ದಿ ಹರಡುತ್ತಿರುವವರ ಬಗ್ಗೆ ಅನುಕಂಪವಿದೆ.

ಶಾಸಕ ಶ್ರೀರಾಮುಲು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ನಾನು ಪ್ರತಿಕ್ರಿಯೆ ನೀಡಿದ್ದೇನೆ ಅಷ್ಟೇ. ಅದನ್ನು ಬೇಕೆಂದೇ ವಿಚ್ಚಿದ್ರಕಾರಿ ಶಕ್ತಿಗಳು ದೊಡ್ಡದಾಗಿ ಬೆಳಸುತ್ತಿದೆ. ಹೇಳಿಕೆಯನ್ನು ತಿರುಚಿ ಸಮಾಜದ ಒಡಕಿಗೆ ಮುಂದಾಗಿವೆ. ‘ಕರ್ನಾಟಕ ಒಂದೇ’ ಎನ್ನುವ ನನ್ನ ಭಾವನೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ‘ಕಾವೇರಿಯಿಂದ ಗೋದಾವರಿಯವರೆಗೆ.’ ಎಂದು ಹೇಗೆ ಕವಿಗಳು ಮನದುಂಬಿ ನುಡಿದರೋ ಹಾಗೆಯೇ ನಾನೂ ಸಹಾ ಕರ್ನಾಟಕ ಎನ್ನುವುದನ್ನು ಅಖಂಡ ಕರ್ನಾಟಕವಾಗಿ ಕಂಡಿದ್ದೇನೆ. ಕರ್ನಾಟಕ ಏಕೀಕರಣದ ಕನಸು ಚಿಗುರಿದ್ದೇ ಇಲ್ಲಿ. ಉತ್ತರ ಕರ್ನಾಟಕ ಕನ್ನಡ ಸಂಸ್ಕೃತಿಗೆ ಸಾಕಷ್ಟು ಮಹತ್ವದ ಕೊಡುಗೆ ನೀಡಿದೆ. ಈ ನೆಲದ ಹೆಮ್ಮೆಯ ಗರಿಯಾಗಿದೆ. ‘ಉತ್ತರ ಕರ್ನಾಟಕಕ್ಕೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ವಿಧಾನಮಂಡಲದ ಅಧಿವೇಶವನ್ನು ಬೆಳಗಾವಿಯಲ್ಲಿ ನಡೆಸಲು ತೀರ್ಮಾನ ಕೈಗೊಂಡವನು ನಾನು.

ಅಧಿವೇಶನ ನಡೆಯದ ಸಂದರ್ಭದಲ್ಲಿ ಸುವರ್ಣ ಸೌಧ ಸದ್ಭಳಕೆಯಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಸಧ್ಯದಲ್ಲೇ ಸರ್ಕಾರದ ಕೆಲವು ಪ್ರಮುಖ ಇಲಾಖೆಗಳು ಹಾಗೂ ನಿಗಮಗಳು ಸುವರ್ಣಸೌಧದಲ್ಲಿ ಕೆಲಸ ನಿರ್ವಹಿಸುವಂತೆ ಕ್ರಮಕೈಗೊಳ್ಳುತ್ತೇನೆ,’ ಎಂದು ತಿಳಿಸಿದರು. ಹೀಗಿರುವಾಗ ಕರ್ನಾಟಕದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಸಹಿಸಲಾಗದೆ ಉತ್ತರ ಕರ್ನಾಟಕವನ್ನು ಅಸ್ತ್ರವಾಗಿ ಬಳಸುತ್ತಿರುವವರು ರಾಜ್ಯವನ್ನು ಒಡೆಯುವ ಮನಸ್ಸಿನವರು. ನಮ್ಮ ಪೂರ್ವಿಕರು ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನೆಲವನ್ನು ಒಂದುಗೂಡಿಸಲು, ಕರ್ನಾಟಕವಾಗಿಸಲು ತಮ್ಮ ಬದುಕನ್ನು ತೆತ್ತಿದ್ದಾರೆ. ಅವರ ತ್ಯಾಗದ ಬಗ್ಗೆ ನನಗೆ ಹೆಮ್ಮೆ ಇದೆ. ಇಂತಹ ಕರ್ನಾಟಕವನ್ನು ಯಾವುದೇ ಹುನ್ನಾರ ಮಾಡಿದರೂ ಬೇರೆಯಾಗಿಸಲು ಸಾಧ್ಯವಿಲ್ಲ. ಇತ್ತೀಚಿಗೆ ಪ್ರಕಟವಾದ ‘ಪ್ಯಾಕ್’ ವರದಿ ‘ಆರ್ ಬಿ ಐ’ ವರದಿಗಳು ಕರ್ನಾಟಕ ಇಡೀ ದೇಶದಲ್ಲಿ ಹಲವಾರು ರಂಗಗಳಲ್ಲಿ ಮೊದಲ ಸ್ಥಾನದಲ್ಲಿರುವುದನ್ನು ಗುರುತಿಸಿದೆ. ಹೀಗೆ ಇನ್ನೂ ಅನೇಕ ರಂಗದಲ್ಲಿ ಮೊದಲ ಸ್ಥಾನಕ್ಕೆ ಏರಬೇಕಾದರೆ ಕನ್ನಡಿಗರೆಲ್ಲರೂ ಒಗ್ಗೂಡಿ ಮಾಡುವ ಸಾಧನೆಯಿಂದ ಮಾತ್ರ ಸಾಧ್ಯ. ಹಾಗಾಗಿ ನನ್ನ ಮಾತುಗಳಲ್ಲಿ ಹುಳುಕು ಹುಡುಕಲು ಮುಂದಾದವರ ಬಗ್ಗೆ ಗಮನ ಕೊಡದೆ ಸಮಾಜದ ಏಳಿಗೆಗೆ ಗಮನ ಹರಿಸೋಣ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Facebook Comments

Sri Raghav

Admin