ಸಾಮೂಹಿಕ ಹಲ್ಲೆ ಮತ್ತು ಹತ್ಯೆ ಪ್ರಕರಣದ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

lynching
ನವದೆಹಲಿ, ಜು.31-ದೇಶದ ವಿವಿಧೆಡೆ ವದಂತಿ ಮತ್ತು ಗಾಳಿ ಸುದ್ದಿಗಳನ್ನು ನಂಬಿ ಉದ್ರಿಕ್ತ ಗುಂಪಿನಿಂದ ಸಾಮೂಹಿಕ ಹಲ್ಲೆ ಮತ್ತು ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸುವ ಕಠಿಣ ಕ್ರಮದ ತಿದ್ದುಪಡಿ ಮಸೂದೆಯನ್ನು ಶೀಘ್ರ ಜಾರಿಗೊಳಿಸಲಿದೆ.

ಉದ್ರಿಕ್ತ ಗುಂಪಿನ ಸಾಮೂಹಿಕ ಹಲ್ಲೆಯಿಂದ ದೇಶದ ಹಲವೆಡೆ 30ಕ್ಕೂ ಹೆಚ್ಚು ಜನರು ಬಲಿಯಾಗಿ, ಅನೇಕರು ತೀವ್ರ ಗಾಯಗೊಂಡಿರುವ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಮರಣದಂಡನೆ ಕಾನೂನು ಜಾರಿಗೊಳಿಸುವ ವಿಧೇಯಕಕ್ಕೆ ಅನುಮೋದನೆ ನೀಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಕ್ಕಳ ಕಳ್ಳರು ಮತ್ತು ಗೋ ಕಳ್ಳಸಾಗಣೆದಾರರೆಂಬ ಶಂಕೆಯಿಂದ ದೇಶದಲ್ಲಿ ವ್ಯಾಪಕವಾಗಿ ಹೆಚ್ಚಾಗಿರುವ ಗುಂಪಿನ ಹತ್ಯೆ ಬಗ್ಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ತೀವ್ರ ಆತಂಕ ವ್ಯಕ್ತಪಡಿಸಿ ಇದನ್ನು ತಡೆಗಟ್ಟಲು ಕಠಿಣ ಕಾನೂನು ರೂಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಇಂಥ ಘಟನೆಗಳ ಬಗ್ಗೆ ವಿರೋಧ ಪಕ್ಷಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ, ಉದ್ರಿಕ್ತ ಗುಂಪಿನ ಹತ್ಯೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸುವ ತಿದ್ದುಪಡಿ ವಿಧೇಯಕವನ್ನು ಶೀಘ್ರದಲ್ಲೇ ಮಂಡಿಸಿ, ಸಂಪುಟ ಮತ್ತು ಸಂಸತ್ತಿನ ಅನುಮೋದನೆ ನಂತರ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಿದೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ಹೇಳಿವೆ.

ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ತಿದ್ದುಪಡಿ ಮಸೂದೆಯನ್ನು ಲೋಕಸಭೆ ನಿನ್ನೆ ಅಂಗೀಕರಿಸಲಾಗಿತ್ತು. 12 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಮರಣದಂಡನೆ ಹಾಗೂ ತ್ವರಿತ ವಿಚಾರಣೆ ನಡೆಸಲು ಅವಕಾಶ ಇರುವ ಕ್ರಿಮಿನಲ್ ಕಾಯ್ದೆಯ ತಿದ್ದುಪಡಿ ಮಸೂದೆಗೆ ನಿನ್ನೆ ಅಂಗೀಕಾರ ನೀಡಲಾಗಿದೆ.

Facebook Comments

Sri Raghav

Admin