ಸಮನ್ವಯ ಸಮಿತಿಯಲ್ಲಿ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

MB-Patil
ಬೆಂಗಳೂರು, ಜು.31- ಉತ್ತರ ಕರ್ನಾಟಕ ಭಾಗದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕುರಿತು ಸಮನ್ವಯ ಸಮಿತಿಯಲ್ಲಿ ಹಾಗೂ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುವುದಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ತಮ್ಮ ಮನೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನ ಜೆಡಿಎಸ್‍ಗೆ ಮತ ನೀಡದೇ ಇರಬಹುದು. ಆದರೆ, ಕಾಂಗ್ರೆಸ್‍ಗೆ ಮತ ಹಾಕಿದ್ದಾರೆ. ಅತಿ ಹೆಚ್ಚು ಶಾಸಕರು ಉತ್ತರ ಕರ್ನಾಟಕ ಭಾಗದಿಂದ ಆಯ್ಕೆಯಾಗಿದ್ದಾರೆ. ನಮ್ಮ ಪಕ್ಷಕ್ಕೆ ಜನ ಬೆಂಬಲ ಹೆಚ್ಚಿದೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ರೈತರ ಬಗ್ಗೆ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಅವರ ಪಕ್ಷದ ವತಿಯಿಂದ ಮಾತನಾಡಿರಬಹುದು. ಎಲ್ಲಾ ವಿಷಯಗಳ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬುದು ನಮ್ಮ ಬಯಕೆ ಅಲ್ಲ. ಸಮಗ್ರ ಕರ್ನಾಟಕ ನಮ್ಮ ಧ್ಯೇಯ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ರಾಜ್ಯದ ಎರಡು ಕಣ್ಣುಗಳಿದ್ದಂತೆ. ನಾವು ಅಭಿವೃದ್ಧಿಯನ್ನು ಬಯಸುತ್ತೇವೆಯೇ ಹೊರತು ಪ್ರತ್ಯೇಕತೆಯನಲ್ಲ. ಮೈಸೂರು ಒಡೆಯರ ಕಾಲದಿಂದಲೂ ದಕ್ಷಿಣ ಕರ್ನಾಟಕ ಭಾಗಕ್ಕೆ ಅನೇಕ ನೀರಾವರಿ ಯೋಜನೆಗಳು ಬಂದಿವೆ. ಉತ್ತರ ಕರ್ನಾಟಕ ಔದ್ಯೋಗಿಕ ಹಾಗೂ ನೀರಾವರಿಯಿಂದ ವಂಚಿತವಾಗಿದೆ. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳಲ್ಲೂ ಅಭಿವೃದ್ಧಿಯಾಗಬೇಕಾಗಿದೆ. ಈ ಎಲ್ಲವನ್ನೂ ಅಧ್ಯಯನ ನಡೆಸಿ ಮುಂದಿನ ಹೆಜ್ಜೆ ಇಡಬೇಕಾಗಿದೆ ಎಂದರು.

ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಭೇದ ಭಾವ ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ನಮ್ಮ ಭಾಗಕ್ಕೆ ಹೆಚ್ಚು ಹೆಚ್ಚು ಕಾರ್ಖಾನೆಗಳು ಬರಬೇಕು. ಅಭಿವೃದ್ಧಿಯ ಸಲುವಾಗಿ ಸಮಿತಿಯನ್ನು ರಚಿಸಬೇಕು ಎಂದು ತಿಳಿಸಿದರು.

Facebook Comments

Sri Raghav

Admin