ಯುಪಿಯಲ್ಲಿ ಬಿಜೆಪಿ ಮಣಿಸಲು ಕಾಂಗ್ರೆಸ್-ಎಸ್‍ಪಿ-ಬಿಎಸ್‍ಪಿ-ಆರ್‌ಎಲ್‌ಡಿ ಮೆಗಾ ಡಿಲ್..!

ಈ ಸುದ್ದಿಯನ್ನು ಶೇರ್ ಮಾಡಿ

Uttar-Pradesh--01

ನವದೆಹಲಿ/ಲಕ್ನೋ, ಜು.31-ಮುಂಬರುವ ಲೋಕಸಭಾ ಚುನಾವಣೆ ಕಾವು ಈಗಿನಿಂದಲೇ ಏರತೊಡಗಿದೆ. ಉತ್ತರ ಪ್ರದೇಶದಲ್ಲಿ ಪ್ರಬಲ ಬಿಜೆಪಿಯನ್ನು ಮಣಿಸಲು ಮಹಾ ಮೈತ್ರಿಗೆ ಬುನಾದಿ ಹಾಕಲಾಗಿದೆ. ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳ ಒಗ್ಗೂಡಲು ವೇದಿಕೆ ಸಿದ್ದವಾಗಿದೆ. ಇದರೊಂದಿಗೆ ಸಾರ್ವತ್ರಿಕ ಚುನಾವಣೆ ಹೊಸ ಆಯಾಮ ಪಡೆದುಕೊಂಡಿದ್ದು, ಕದನ ಕೌತುಕ ಕೆರಳಿಸಿದೆ.

ದೇಶದ ಬೃಹತ್ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ಸದೃಢ ವಿರೋಧಪಕ್ಷಗಳ ಮಹಾ ಮೈತ್ರಿಯನ್ನು ರಚಿಸುವುದು ಅನಿವಾರ್ಯ ಎಂಬುದನ್ನು ಮನಗಂಡಿರುವ ಈ ರಾಜಕೀಯ ಪಕ್ಷಗಳ ನಾಯಕರು ಒಗ್ಗೂಡಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್, ಅಖಿಲೇಶ್ ಯಾದವ್ ನಾಯಕತ್ವದ ಎಸ್‍ಪಿ, ದಲಿತರ ಪವರ್‍ಹೌಸ್ ಮಾಯಾವತಿ ಮುಂದಾಳತ್ವದ ಬಿಎಸ್‍ಪಿ ಹಾಗೂ ಅಜಿತ್ ಸಿಂಗ್ ಮುಖಂಡತ್ವದ ಆರ್‍ಎಲ್‍ಡಿ ಈ ನಿಟ್ಟಿನಲ್ಲಿ ಒಂದಾಗಿ ವಿಶಾಲ ತಳಹದಿಯ ಮೇಲೆ ಲೋಕಸಭೆ ಸಮರಕ್ಕೆ ಸಜ್ಜಾಗಲು ಹಾಗೂ ರಣತಂತ್ರ ರೂಪಿಸಲು ಕಾರ್ಯೋನ್ಮುಖವಾಗಲಿವೆ.

ಲೋಕಸಭೆಗೆ ಗರಿಷ್ಠ ಸಂಖ್ಯೆಯ ಸಂಸದರನ್ನು ಕಳುಹಿಸಿರುವ ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪ್ರಾಬಲ್ಯ ತಡೆಯಲು ಈ ಮಹಾ ಘಟಬಂಧನ್‍ಗೆ ಈ ಪ್ರಮುಖ ಪಕ್ಷಗಳು ಭದ್ರ ಬುನಾದಿ ಹಾಕಿವೆ. ಉತ್ತರ ಪ್ರದೇಶದಲ್ಲಿ 80 ಸ್ಥಾನಗಳನ್ನು ಹಂಚಿಕೊಂಡು ಸೌಹಾರ್ದಯುತ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು ವಿರೋಧ ಪಕ್ಷಗಳ ಮೈತ್ರಿ ಕೂಟ ಸಹಮತ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.  ಪ್ರತಿಪಕ್ಷಗಳ ರಂಗವನ್ನು ರೂಪಿಸಿ ಆ ಮೂಲಕ ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಕಡಿವಾಣ ಹಾಕುವುದು ಈ ಮಹಾ ಘಟಬಂಧನ್‍ನ ಮೂಲ ಆಶಯವಾಗಿದೆ.

ಉತ್ತರ ಪ್ರದೇಶದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ವಿರೋಧ ಪಕ್ಷಗಳ ಮೈತ್ರಿ ಕೂಟದ ಗೆಲುವಿನ ಫಲಿತಾಂಶದ ಲಾಭವನ್ನು ಮನಗಂಡಿರುವ ರಾಜಕೀಯ ನೇತಾರರು ಅದನ್ನು ಲೋಕಸಭೆ ಚುನಾವಣೆಯಲ್ಲಿಯೂ ಮತ್ತಷ್ಟು ಸದೃಢವಾಗಿ ಮುಂದುವರಿಸಲು ಕೃತ ನಿಶ್ಚಯ ಮಾಡಿದ್ದಾರೆ.
ಪ್ರತಿಷ್ಠಿತ ಗೋರಖ್‍ಪುರ್ ಮತ್ತು ಫುಲ್‍ಪುರ್ ಲೋಕಸಭಾ ಕ್ಷೇತ್ರಗಳು ಹಾಗೂ ನಂತರ ಕೈರಾನಾ ಮತ್ತು ನೂರ್‍ಪುರ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು. ಇದನ್ನು ಸಾರ್ವತ್ರಿಕ ಚುನಾವಣೆಯಲ್ಲಿಯೂ ಪುನರಾವರ್ತನೆ ಮಾಡುವ ಧ್ಯೇಯದೊಂದಿಗೆ ಪ್ರತಿಪಕ್ಷಗಳು ಸಜ್ಜಾಗಿವೆ.

Facebook Comments

Sri Raghav

Admin