ನೋಟ್ ಬ್ಯಾನ್ ನಂತರ 3,178 ಕೋಟಿ ಠೇವಣಿ ಇಟ್ಟ ಹೈದರಾಬಾದ್’ನ ಬೇನಾಮಿ ಕಂಪನಿ ..!

ಈ ಸುದ್ದಿಯನ್ನು ಶೇರ್ ಮಾಡಿ

Note-Ban--01

ಹೈದರಾಬಾದ್, ಜು.31-ಹಳೆ ನೋಟುಗಳ ಅಮಾನ್ಯೀಕರಣದ ನಂತರ ಬೇನಾಮಿ ಕಂಪನಿಗಳ ದೊಡ್ಡ ದೊಡ್ಡ ಹಗರಣಗಳು ಬೆಳಕಿಗೆ ಬರುತ್ತಿವೆ. ಮುತ್ತಿನ ನಗರಿ ಹೈದರಾಬಾದ್‍ನ ಬೇನಾಮಿ ಸಂಸ್ಥೆಯೊಂದು ವಿವಿಧ ಬ್ಯಾಂಕ್‍ಗಳಲ್ಲಿ 3,178 ಕೋಟಿ ರೂ.ಗಳನ್ನು ಠೇವಣಿಯಾಗಿಟ್ಟು, ಹಣವನ್ನು ಮತ್ತೆ ವಿತ್‍ಡ್ರಾ ಮಾಡಿರುವ ಭಾರೀ ಅಕ್ರಮ ವಹಿವಾಟು ಪತ್ತೆಯಾಗಿದೆ. ಈ ಬಗ್ಗೆ ಗಂಭೀರ ವಂಚನೆ ತನಿಖಾ ಕಚೇರಿ (ಎಸ್‍ಎಫ್‍ಐಒ) ತನಿಖೆ ತೀವ್ರಗೊಳಿಸಿದೆ.

ಹೈದರಾಬಾದ್‍ನ ಎರ್ರಾಗಡ್ಡದಲ್ಲಿ ಬೇನಾಮಿ ಹೆಸರಿನಲ್ಲಿ ನೋಂದಣಿಯಾಗಿದ್ದ ಈ ಕಂಪನಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ. ಡ್ರೀಮ್‍ಲೈನ್ ಮ್ಯಾನ್‍ಪವರ್ ಸೆಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿದ್ದ ಈ ಸಂಸ್ಥೆ ನಂತರ ನಿತ್ಯಾಂಕ್ ಇನ್‍ಫ್ರಾಪವರ್ ಅಂಡ್ ಮಲ್ಟಿವೆಂಚುರ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಬದಲಾಯಿತು. ವಾಸ್ತವವಾಗಿ ಎರ್ರಾಗಡ್ಡದ ಗೋಕುಲ್ ಥಿಯೇಟರ್ ಬಳಿ ಕಚೇರಿ ಹೊಂದಿರುವಾಗಿ ವಿಳಾಸ ನೀಡಿ ಕಂಪನಿ ವ್ಯವಹಾರಗಳ ಸಚಿವಾಲಯದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದ ಸಂಸ್ಥೆ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಈ ಕಂಪನಿ ಕಾರ್ಯನಿರ್ವಹಿಸಲಿದ್ದರೂ, ಹಳೆ ನೋಟುಗಳು ಅಮಾನ್ಯೀಕರಣಗೊಂಡ ನಂತರ ವಿವಿಧ ಬ್ಯಾಂಕುಗಳಲ್ಲಿ ಒಟ್ಟು 3,178 ಕೋಟಿ ರೂ.ಗಳನ್ನು ಠೇವಣಿಯಾಗಿಟ್ಟು, ನಂತರ ವಿತ್‍ಡ್ರಾ ಮಾಡಿದೆ ಎಂಬ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಎಸ್‍ಎಫ್‍ಐಒ ತನಿಖೆ ಚುರುಕುಗೊಳಿಸಿದೆ. ಈ ಸಂಸ್ಥೆ ಸೇರಿದಂತೆ ಒಟ್ಟು 18 ಕಂಪನಿಗಳು ಇಂಥ ಅಕ್ರಮ ವಹಿವಾಟುಗಳನ್ನು ನಡೆಸಿದ್ದು, ಇವುಗಳಲ್ಲಿ ಡ್ರೀಮ್‍ಲೈನ್ ನಡೆಸಿರುವ ಅನಧಿಕೃತ ವ್ಯವಹಾರ ಅತಿ ದೊಡ್ಡ ಮೊತ್ತವಾಗಿದೆ.

Facebook Comments

Sri Raghav

Admin