ನಾನು ಬದುಕಿರುವವರೆಗೂ ರಾಜ್ಯ ವಿಭಜನೆ ಮಾಡಲು ಬಿಡಲ್ಲ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01
ಹುಬ್ಬಳ್ಳಿ, ಜು.31- ಉತ್ತರ ಕರ್ನಾಟಕದ ಪ್ರತ್ಯೇ ಕತೆಯ ಕೂಗಿಗೆ ಮುಖ್ಯಮಂತ್ರಿಯವರ ಧೋರಣೆಯೇ ಕಾರಣ ಎಂದು ಇಂದಿಲ್ಲಿ ಹೇಳಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ, ಅಖಂಡ ಕರ್ನಾಟಕದ ಪರಿಕಲ್ಪನೆ ನಮ್ಮದು ಎಂದು ಪ್ರತಿಪಾದಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಬೇಜವಾಬ್ದಾರಿ ಹೇಳಿಕೆ ಹಾಗೂ ಒಡೆದು ಆಳುವ ನೀತಿ, ಜಾತಿ ವಿಷ ಬೀಜುವ ರೀತಿ ಪ್ರತ್ಯೇಕತೆಯ ಕಿಚ್ಚಿಗೆ ಕಾರಣವಾಗಿದೆ.

ಅಖಂಡ ಕರ್ನಾಟಕವೇ ನಮ್ಮ ಕನಸು. ಯಾವುದೇ ಕಾರಣಕ್ಕೂ ನಾನು ಬದುಕಿರುವವರೆಗೆ ರಾಜ್ಯ ವಿಭಜನೆಗೆ ಅವಕಾಶ ನೀಡುವುದಿಲ್ಲ. ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿ ಅವರ ಮನವೊಲಿಸುತ್ತೇನೆ ಎಂದು ಭರವಸೆ ನೀಡಿದರು. ಕರ್ನಾಟಕ ಏಕೀಕರಣಗೊಂಡ ಬಳಿಕ ರಾಜ್ಯದ ಯಾವ ಮುಖ್ಯಮಂತ್ರಿಯೂ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಮಾತುಗಳನ್ನು ಆಡಿಲ್ಲ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉತ್ತರ ಕರ್ನಾಟಕದ ಜನರಿಗೆ ಅವಮಾನವಾಗುವ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆರೋಪಿಸಿದರು.

ಉತ್ತರ ಕರ್ನಾಟಕದವರು ಮತ ಹಾಕಿಲ್ಲ ಎನ್ನುವ ಮೂಲಕ ಈ ಭಾಗದ ಜನರಿಗೆ ಮುಖ್ಯಮಂತ್ರಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ ಬಿ.ಎಸ್.ಯಡಿಯೂರಪ್ಪ, ಈ ಭಾಗದ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಅನ್ಯಾಯ ಮಾಡಲಾಗಿದೆ. ಮುಂದಿನ ಬಜೆಟ್‍ನಲ್ಲಾದರೂ ಈ ಅನ್ಯಾಯವನ್ನು ಸರಿಪಡಿಸಿ, ಹೆಚ್ಚಿನ ಅನುದಾನ ನೀಡಬೇಕು, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಉತ್ತರ ಕರ್ನಾಟಕದಲ್ಲಿ 40 ಸಾವಿರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆದರೆ ಕೇವಲ 3-4 ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. 9 ಕೋಟಿ ರೂ.ಹಣವನ್ನು ಆಲಮಟ್ಟಿ ಅಣೆಕಟ್ಟಿಗೆ ಮೀಸಲಿಡಲಾಗಿತ್ತು. ಇದನ್ನು ಕೆಎಸ್‍ಆರ್ ಉದ್ಯಾನವನ ಅಭಿವೃದ್ಧಿಗೆ ಕಳುಹಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಇಡೀ ರಾಜ್ಯಕ್ಕೆ ಉತ್ತರ ಕರ್ನಾಟಕ ಅನ್ನ ನೀಡುತ್ತಿದ್ದರೆ ಕಾರವಾರ ಇಡೀ ರಾಜ್ಯಕ್ಕೆ ಬೆಳಕು ನೀಡುತ್ತಿದೆ. ಆದರೆ ಬಜೆಟ್‍ನಲ್ಲಿ ಆಲಮಟ್ಟಿ ನೀರಾವರಿ ಯೋಜನೆಗೆ ಒಂದು ಪೈಸೆ ಅನುದಾನವನ್ನೂ ಮೀಸಲಿಟ್ಟಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ನೀರಾವರಿ ಯೋಜನೆಗಳಿಗೆ ಅನ್ಯಾಯ ಮಾಡಿದ್ದರು ಎಂದು ಅವರು ಆರೋಪಿಸಿದರು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 600 ಕೋಟಿ ರೂ.ವೆಚ್ಚದಲ್ಲಿ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಿದ್ದೇನೆ. ಯಾರ ಕಾಲದಲ್ಲಿ ಏನು ಅಭಿವೃದ್ಧಿ ಕೆಲಸ ಆಗಿದೆ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಅವರು, ಹೋರಾಟಗಾರರನ್ನು ಭೇಟಿ ಮಾಡಿ ಅವರ ಮನವೊಲಿಸುವ ಕೆಲಸ ಮುಖ್ಯಮಂತ್ರಿಯವರು ಮಾಡಬೇಕಿತ್ತು. ಅವರ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಹೇಳಿದರು. ಪ್ರತ್ಯೇಕ ರಾಜ್ಯದ ಬೇಡಿಕೆ ಹೋರಾಟದ ಹಿಂದೆ ಬಿಜೆಪಿ ಕುಮ್ಮಕ್ಕು ಇದೆಯಾ ಎಂಬ ಪ್ರಶ್ನೆಗೆ ಯಾರೋ ತಲೆ ತಿರುಕರು ಈ ರೀತಿ ಹೇಳಿದ್ದಾರೆ ಎಂದು ಯಡಿಯೂರಪ್ಪ ಕೆಂಡಾಮಂಡಲರಾದರು. ಶಾಸಕರಾದ ಉಮೇಶ್ ಕತ್ತಿ, ಅಭಯ ಪಾಟೀಲ್, ಮಹದೇವಪ್ಪ ಯಾದವಾಡ, ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಎ.ಎಸ್.ಪಾಟೀಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin