ಧರಣಿನಿರತ ಮಠಾಧೀಶರನ್ನು ಭೇಟಿಯಾದ ಯಡಿಯೂರಪ್ಪ
ಬೆಳಗಾವಿ,ಜು.31- ಉ-ಕ ನಿರ್ಲಕ್ಷ್ಯವಾಗಿರುವುದು ನಿಜ. ಆದರೆ, ಪ್ರತ್ಯೇಕ ರಾಜ್ಯದ ಕೂಗು ಬೇಡ ಅಖಂಡ ಕರ್ನಾಟಕವಿರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಠಾಧೀಶರಿಗೆ ಮನವಿ ಮಾಡಿದ್ದಾರೆ. ಉ-ಕಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿಪಡಿಸಬೇಕು ಹಾಗೂ ಸುವರ್ಣಸೌಧಕ್ಕೆ ಪ್ರಮುಖ ಇಲಾಖೆಗಳನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿ ಮಠಾಧೀಶರು ಸುವರ್ಣಸೌಧದ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಅವರು ಶ್ರೀಗಳಲ್ಲಿ ಮನವಿ ಮಾಡಿದರು. ನಿಮ್ಮ ಬೇಡಿಕೆಗಳು ಸರಿಯಾಗಿಯೇ ಇವೆ. ಹೋರಾಟ ಮಾಡುವುದು ತಪ್ಪಲ್ಲ. ಆದರೆ, ಪ್ರತ್ಯೇಕ ರಾಜ್ಯದ ಕೂಗು ಬೇಡ. ಉ-ಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೋರಾಟ ಮಾಡೋಣ. ಅದಕ್ಕೆ ನನ್ನ ಬೆಂಬಲವಿದೆ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿವರವಾಗಿ ಮಾತನಾಡಿದ್ದಾರೆ. ಇದೇ ಪ್ರತ್ಯೇಕ ರಾಜ್ಯದ ಕೂಗಿಗೆ ನಾಂದಿಯಾಗಿದೆ ಎಂದರು. ಎಲ್ಲ ಪ್ರಮುಖ ಇಲಾಖೆಗಳು ಸುವರ್ಣಸೌಧಕ್ಕೆ ವರ್ಗಾವಣೆಯಾಗಬೇಕು. ಮುಖ್ಯ ಕಾರ್ಯದರ್ಶಿಯನ್ನು ನೇಮಿಸಬೇಕು ಎಂದು ತಿಳಿಸಿದ ಅವರು, ತಮ್ಮ ಅಧಿಕಾರ ಅವಧಿಯಲ್ಲಿ ಸುಮಾರು 600 ಕೋಟಿ ಖರ್ಚು ಮಾಡಿ ಸುವರ್ಣಸೌಧ ನಿರ್ಮಿಸಲಾಗಿದೆ. ಆದರೆ, ಅದರ ಸದುಪಯೋಗ ಸರಿಯಾಗಿ ಆಗುತ್ತಿಲ್ಲ ಎಂದರು.
ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೆಗೌಡರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಧರಣಿಯಲ್ಲಿ ರುದ್ರಾಕ್ಷಿ ಮಠದ ಸಿದ್ಧರಾಮ ಶ್ರೀಗಳು, ಹುಕ್ಕೇರಿ ಮಠದ ಚಂದ್ರಶೇಖರ ಶ್ರೀಗಳು, ಪಂಚಲಿಂಗೇಶ್ವರ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಸುಮಾರು 22ಕ್ಕೂ ಹೆಚ್ಚು ಸಂಘಟನೆಗಳು ಶ್ರೀಗಳ ಹೋರಾಟಕ್ಕೆ ಬೆಂಬಲಿಸಿವೆ.