ಬಾಬಾ ಪೂಜೆ ಹೆಸರಿನಲ್ಲಿ ಚಿನ್ನಾಭರಣ ದೋಚುತ್ತಿದ್ದ ಆಟೋ ಚಾಲಕ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Kiran-Kuanmr

ಬೆಂಗಳೂರು, ಆ.1-ಬಾಬಾ ಹೆಸರಿನಲ್ಲಿ ಪೂಜೆ ಮಾಡಿದರೆ ಬಾಬಾ ಕಾಣಿಸಿಕೊಳ್ಳುತ್ತಾರೆ ಎಂದು ನಂಬಿಸಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನ ಹಾಗೂ ಆಭರಣಗಳನ್ನು ದೋಚಿದ್ದ ದಂಪತಿಯ ಪೈಕಿ ಪತಿಯನ್ನು ಬಂಧಿಸಿರುವ ಕೋರಮಂಗಲ ಪೊಲೀಸರು, 1.35 ಕೊಟಿ ರೂ. ಬೆಲೆಬಾಳುವ 3 ಕೆ.ಜಿ. 750 ಗ್ರಾಂ ತೂಕದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೋರಮಂಗಲ 1ನೇ ಬ್ಲಾಕ್ ಜಕ್ಕಸಂದ್ರ 6ನೆ ಕ್ರಾಸ್ ನಿವಾಸಿ ಕಿರಣ್ ಎಸ್ (28) ಬಂಧಿತ ಆರೋಪಿ. ತಮಿಳುನಾಡು ಮೂಲದ ಈತ ರಿಕ್ಷಾ ಚಾಲಕನಾಗಿದ್ದು, ರೇಷ್ಮಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಪತ್ನಿ ಕೋರಮಂಗಲದ ಜಯಂತ್ ಎಸ್.ಬೇಡ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು.

ಜಯಂತ್ ಅವರ ಶ್ರೀಮಂತಿಕೆ ಹಾಗೂ ಅವರ ಪತ್ನಿಯ ದೇವಭಕ್ತಿಯ ಬಗ್ಗೆ ಪತ್ನಿಯಿಂದ ತಿಳಿದುಕೊಂಡಿದ್ದ ಕಿರಣ್‍ನ ಪತ್ನಿ ರೇಷ್ಮಾ ಪತಿಯೊಂದಿಗೆ ಸೇರಿ ಮಾಲೀಕರಿಗೆ ಬಾಬಾ ಹೆಸರಿನಲ್ಲಿ ವಂಚಿಸಿದ್ದಾರೆ. ಜಯಂತ್ ಅವರು ಮನೆಯಲ್ಲಿ ಇಲ್ಲದಿದ್ದಾಗ ಕೆಲಸದಾಕೆ ರೇಷ್ಮಾ ಅವರು, ನಿಮ್ಮ ಮನೆಯವರಿಗೆ ಗಂಡಾಂತರವಿದೆ. ಬಾಬಾ ಪೂಜೆ ಮಾಡಿ ದೋಷ ನಿವಾರಣೆ ಮಾಡಿಕೊಡುತ್ತೇನೆ ಎಂದು ನಂಬಿಸಿ ಕೆಲವು ಚಿನ್ನದ ಆಭರಣಗಳನ್ನು ಪಡೆದುಕೊಂಡಿದ್ದಾಳೆ. ಬಳಿಕ ಒಡವೆಗಳನ್ನು ಇಟ್ಟಿರುವ ಸ್ಥಳ ಅರಿತುಕೊಂಡು ಗಂಡ ಕಿರಣ್‍ನೊಂದಿಗೆ ಸೇರಿ ಅವುಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಜಯಂತ್ ಅವರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕಳವು ಮಾಡಿದ್ದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಆರೋಪಿಗಳು ಸಾಯಿಗೋಲ್ಡ್ ಪ್ಯಾಲೇಸ್ ಹಾಗೂ ಚಿಕ್ಕಪೇಟೆಯ ಇತರೆಡೆಗಳಲ್ಲಿ ಮಾರಾಟ ಮಾಡಿ ಹೊಸದಾಗಿ ಚಿನ್ನದ ಆಭರಣಗಳನ್ನು ಮಾಡಿಸಿಕೊಂಡಿದ್ದರು. ಮಾತ್ರವಲ್ಲ ಸುಜುಕಿ ಡಿಸೈರ್ ಕಾರು, ರಾಯಲ್ ಎನ್‍ಫೀಲ್ಡ್ ಬುಲೇಟ್ ವಾಹನ ಖರೀಸಿದ್ದಾರೆ. ವಾಸದ ಮನೆಯನ್ನು ಕೋರಮಂಗಲದ ಪ್ರತಿಷ್ಠಿತ ಬಡಾವಣೆಗೆ ಸ್ಥಳಾಂತರ ಮಾಡಿಕೊಂಡು ಒಂದು ಫ್ಲಾಟನ್ನು ಭೋಗ್ಯಕ್ಕೆ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರು. ಆರೋಪಿಯನ್ನು ಬಂಧಿಸಿರುವ ಕೋರಮಂಗಲ ಪೊಲೀಸರು ಒಟ್ಟು 1.35 ಕೋಟಿ ರೂ. ಬೆಲೆಬಾಳುವ ಸುಮಾರು 3 ಕೆ.ಜಿ. ಗ್ರಾಂ ತೂಕದ ಚಿನ್ನದ ಹಾಗೂ ವಜ್ರದ ಆಭರಣಗಳು ಹಾಗೂ 2.5 ಕೆ.ಜಿ.ಬೆಳ್ಳಿ, ಕಂಚಿನ ವಸ್ತುಗಳು, 2 ಲಕ್ಷ ರೂ. ನಗದು ಹಾಗೂ ಒಂದು ಸ್ವಿಫ್ಟ್ ಕಾರು, ಒಂದು ಬುಲೆಟ್ ಬೈಕನ್ನು ವಶಪಡಿಸಿಕೊಂಡಿದ್ದಾರೆ.

ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಂಪತ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಕೋರಮಂಗಲ ಪೊಲೀಸ್ ಠಾಣೆ ಪಿಐ ಮಂಜುನಾಥ, ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Facebook Comments

Sri Raghav

Admin