ಮಂಗಳೂರು : ತೈಲ ಸಾಗಾಟದ ಪೈಪ್ಲೈನ್ನಲ್ಲಿ ಸೋರಿಕೆ, ಸ್ಥಳೀಯರಲ್ಲಿ ಆತಂಕ
ಮಂಗಳೂರು, ಆ.1: ಎಂಆರ್ಪಿಎಲ್ನಿಂದ ಎನ್ಎಂಪಿಟಿಗೆ ತೈಲ ಸಾಗಾಟದ ಪೈಪ್ಲೈನ್ನಲ್ಲಿ ಎಸ್.ಇ.ಝೆಡ್. ರಸ್ತೆಯಲ್ಲಿರುವ ಅದಾನಿ ಕಂಪೆನಿ ಬಳಿ ಸೋರಿಕೆ ಉಂಟಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.ಸೋರಿಕೆಯನ್ನು ಮೊದಲು ಸ್ಥಳೀಯರು ಕಂಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಸೋರಿಕೆ ತಡೆಗಟ್ಟುವ ಕೆಲಸಕ್ಕೆ ಎಂಆರ್ಪಿಎಲ್ ಮುಂದಾಗಿದೆ.
ಪಣಂಬೂರಿನ ಕುದುರೆಮುಖ ಕಂಪೆನಿ ಸಮೀಪದಿಂದ ಫಲ್ಗುಣಿ ನದಿ ತೀರವಾಗಿ ಜೋಕಟ್ಟೆಗೆ ಹೋಗುವ ಒಳರಸ್ತೆಯಲ್ಲಿ ಸೋರಿಕೆ ಉಂಟಾಗಿದೆ. ಕಳೆದ ಎರಡು-ಮೂರು ದಿನಗಳಿಂದ ಈ ಪ್ರದೇಶದಲ್ಲಿ ಇಂಧನ ತೈಲ ಸಾಗಾಟದ ಪೈಪ್ಲೈನ್ನಲ್ಲಿ ಸೋರಿಕೆ ಕಂಡುಬಂದಿದ್ದರೂ, ನಿನ್ನೆ ರಾತ್ರಿಯಷ್ಟೇ ಎಂಆರ್ಪಿಎಲ್ ಕಂಪೆನಿಯ ಗಮನಕ್ಕೆ ಬಂದಿದೆ.
ಸೋರಿಕೆಯಾಗುತ್ತಿರುವ ಸ್ಥಳದಲ್ಲಿ ಇದೀಗ ಕಾರ್ಯಾಚರಣೆ ಆರಂಭಿಸಿರುವ ಎಂಆರ್ಪಿಎಲ್ ಕಂಪೆನಿ, ಸೋರಿಕೆಯನ್ನು ತಡೆಗಟ್ಟಲು ಸೂಕ್ತ ಕ್ರಮಕ್ಕೆ ಮುಂದಾಗಿದೆ. ಕಟ್ಟುನಿಟ್ಟಿನ ನಿರಂತರ ತಪಾಸಣೆಯಲ್ಲಿ ಇರಬೇಕಾದ ಈ ಕೊಳವೆ ಮಾರ್ಗದಲ್ಲಿ ಕಳೆದ ಕೆಲವು ದಿನಗಳ ಹಿಂದೆಯೇ ಸೋರಿಕೆ ಕಾಣಿಸಿಕೊಂಡಿದ್ದರೂ ಎರಡು ದಿನಗಳ ಹಿಂದೆಯಷ್ಟೇ ಇದು ಕಂಪೆನಿಯ ಗಮನಕ್ಕೆ ಬಂದಿರುವುದು ದುರದೃಷ್ಟಕರ. ಆದರೆ ಸೋರಿಕೆ ಆಗುತ್ತಿರುವ ನಿರ್ದಿಷ್ಟ ಸ್ಥಳವನ್ನು ಗುರುತಿಸಲು ಕಂಪೆನಿಗೆ ಇದುವರೆಗೆ ಸಾಧ್ಯವಾಗಿಲ್ಲ. ಇದು ಈ ಭಾಗದಲ್ಲಿ ಆತಂಕಕಾರಿ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಈ ಘಟನೆಗೆ ಎಂಆರ್ಪಿಎಲ್ ಬೇಜವಾಬ್ದಾರಿತನವೇ ಕಾರಣ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.