BIG NEWS : ರಜನಿ-ಕಮಲ್ ರಾಜಕೀಯ ಮೈತ್ರಿ..?

ಈ ಸುದ್ದಿಯನ್ನು ಶೇರ್ ಮಾಡಿ

rtrajnikant--01
ಚೆನ್ನೈ, ಆ.1-ತಮಿಳುನಾಡಿನ ಅಧಿನಾಯಕಿ ಮತ್ತು ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರ ನಿಧನ ನಂತರ ತಮಿಳುನಾಡಿನಲ್ಲಿ ಅತ್ಯಂತ ಪ್ರಭಾವಶಾಲಿ ನಾಯಕತ್ವದ ಕೊರತೆ ಎದುರಾಗಿದೆ. ಈ ಸಂದರ್ಭದಲ್ಲೇ ತಮಿಳುನಾಡಿನ ಸೂಪರ್‍ಸ್ಟಾರ್‍ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ರಾಜಕೀಯ ಮೈತ್ರಿ ಮೂಲಕ ಈ ನಿರ್ವಾತವನ್ನು (ವ್ಯಾಕ್ಯೂಮ್) ಭರ್ತಿ ಮಾಡಲು ಒಗ್ಗೂಡಲಿದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತಿದೆ.

ಈ ಬಗ್ಗೆ ಸೂಚ್ಯವಾಗಿ ತಿಳಿಸಿರುವ ಖ್ಯಾತ ಹಿರಿಯ ನಟ ಹಾಗೂ ಮಕ್ಕಳ್ ನೀಧಿ ಮೈಯಮ್(ಎಂಎನ್‍ಎಂ) ಪಕ್ಷದ ನಾಯಕ ಕಮಲ್ ಹಾಸನ್ ಹಾಗೂ ಸಕ್ರಿಯ ರಾಜಕೀಯ ರಂಗ ಪ್ರವೇಶಿಸಲು ಸಜ್ಜಾಗಿರುವ ರಜನಿಕಾಂತ್ ಈ ಸಂಭವನೀಯ ಮೈತ್ರಿ ಕುರಿತು ಸಮಯವೇ ನಿರ್ಧರಿಸಲಿದೆ ಎಂದು ಹೇಳುವ ಮೂಲಕ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಜನಿ ಮತ್ತು ಕಮಲ್ ಸಂಪರ್ಕ ಮತ್ತು ಒಡನಾಟ ಹಿಂದೆಂದಿಗಿಂತಲೂ ಹೆಚ್ಚಾಗಿರುವುದು ಇವರಿಬ್ಬರ ಸಾಂಭವ್ಯ ಮೈತ್ರಿಕೂಟ ರಚನೆ ಬಗ್ಗೆ ಹಲವು ಊಹಾಪೋಹಾಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ವರ್ಷದ ಆರಂಭದಿಂದಲೂ ಕೆಲವು ಬಾರಿ ರಹಸ್ಯ ಸಭೆಗಳಲ್ಲಿ ಈ ಇಬ್ಬರು ಸೂಪರ್‍ಸ್ಟಾರ್‍ಗಳು ರಾಜಕೀಯ ವಿದ್ಯಮಾನಗಳ ಬಗ್ಗೆ ಗೋಪ್ಯವಾಗಿ ಚರ್ಚಿಸಿರುವುದು ಸಹ ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇವರಿಬ್ಬರ ರಾಜಕೀಯ ನೀತಿ-ಧರ್ಮ ಹಾಗೂ ಧ್ಯೇಯೋದ್ದೇಶಗಳು ಒಂದೇ ದಿಕ್ಕಿನತ್ತ ಸಾಗುತ್ತಿರುವುದು ಕೂಡ ಇಲ್ಲಿ ಗಮನಾರ್ಹ. ಅಲ್ಲದೇ ಕಳೆದ ಏಪ್ರಿಲ್‍ನಲ್ಲಿ ಇವರಿಬ್ಬರು ಕಾವೇರಿ ಮಂಡಳಿ ರಚನೆಯಾಗಬೇಕೆಂದು ಆಗ್ರಹಿಸಿ ನಡೆದ ಪ್ರತಿಭಟನಾ ಧರಣಿ ವೇಳೆ ಒಂದೇ ವೇದಿಕೆ ಹಂಚಿಕೊಂಡಿದ್ದರು. ಅದಾದ ನಂತರವೂ ರಜನಿ-ಕಮಲ್ ಕೆಲವು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದರು.

ತಮಿಳುನಾಡಿನ ಪ್ರಚಲಿತ ರಾಜಕೀಯ ವಿದ್ಯಮಾನದ ಬಗ್ಗೆ ಇವರಿಬ್ಬರ ನಿಲುವು ಮತ್ತು ಧೋರಣೆಯೂ ಒಂದೇ ಆಗಿದೆ. 63 ವರ್ಷದ ಕಮಲ್ ಎಂಎನ್‍ಎಂ ಪಕ್ಷವನ್ನು ಹುಟ್ಟು ಹಾಕಿದ್ದರೆ, 67 ವರ್ಷದ ರಜನಿ ಸೂಕ್ತ ಸಮಯದಲ್ಲಿ ಸಕ್ರಿಯ ರಾಜಕಾರಣ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಒಟ್ಟಾರೆ ಇವರಿಬ್ಬರು ಆಡಳಿತರೂಢ ಎಐಎಡಿಎಂಕೆ ಮತ್ತು ವಿರೋಧಪಕ್ಷ ಡಿಎಂಕೆಗೆ ತಲೆನೋವಾಗಿರುವುದು ಸುಳ್ಳಲ್ಲ. ಇವರಿಬ್ಬರು ಸದ್ಯಕ್ಕೆ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಕಮಲ್, ಪ್ರಶ್ನೆಯೊಂದಕ್ಕೆ ಉತ್ತರಿಸಿ ನಾವಿಬ್ಬರು ಒಗ್ಗೂಡಬೇಕೆಂಬುದು ಬಹಳಷ್ಟು ಅಭಿಮಾನಿಗಳು ಅಭಿಲಾಷೆಯಾಗಿದೆ. ನಾವಿಬ್ಬಗೂ ಒಂದಾದರೆ… ರಾಜಕೀಯ ಸ್ಥಿರತೆ ಸಾಧ್ಯವಾಗ ಬಹುದು. ಸದ್ಯಕ್ಕೆ ಈ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಕಾದು ನೋಡುತ್ತಿದ್ದೇವೆ. ಇದನ್ನು ಸಮಯವೇ ನಿರ್ಧರಿಸುತ್ತದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ಒಟ್ಟಂಗೆ ರಜನಿ-ಕಮಲ್ ಮೈತ್ರಿಕೂಟ ರಚನೆಯಾದರೆ ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಲ್ಲಟಕ್ಕೆ ಕಾರಣವಾಗಲಿದೆ.

Facebook Comments

Sri Raghav

Admin