ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಕರೆ ನೀಡಿದ್ದ ಬಂದ್ ಠುಸ್…!

ಈ ಸುದ್ದಿಯನ್ನು ಶೇರ್ ಮಾಡಿ

North-Karnataka--01
ಹುಬ್ಬಳ್ಳಿ, ಆ.2- ಅಭಿವೃದ್ಧಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಉತ್ತರ ಕರ್ನಾಟಕ ಪ್ರತ್ಯೇಕತೆಗೆ ಒತ್ತಾಯಿಸಿ ಈ ಭಾಗದ ರೈತ ಸಂಘಟನೆಗಳು ಕರೆ ನೀಡಿದ್ದ ಬಂದ್ ಸಂಪೂರ್ಣ ವಿಫಲವಾಗಿದ್ದು, ಈ ಮೂಲಕ ಅಖಂಡ ಕರ್ನಾಟಕ ಪರಿಕಲ್ಪನೆಯನ್ನು ಜನ ಎತ್ತಿ ಹಿಡಿದಿದ್ದಾರೆ. ಉತ್ತರ ಕರ್ನಾಟಕದ 13 ಜಿಲ್ಲೆಗಳ ವಿವಿಧ ಸಂಘಟನೆಗಳು ಇಂದು ಬಂದ್‍ಗೆ ಕರೆ ನೀಡಿದ್ದವಾದರೂ ನಿನ್ನೆ ನಡೆದ ಮಾತುಕತೆಯ ಹಿನ್ನೆಲೆಯಲ್ಲಿ ಬಂದ್‍ನಿಂದ ಹಿಂದೆ ಸರಿದು ಸಾಂಕೇತಿಕ ಹೋರಾಟಕ್ಕೆ ನಿರ್ಧರಿಸಿದ್ದವು. ಆದರೆ ರೈತ ಸಂಘಟನೆಯವರು ಬಂದ್ ನಡೆಸುವುದಾಗಿ ಪಟ್ಟು ಹಿಡಿದಿದ್ದರು. ಈ ಗೊಂದಲದ ಹಿನ್ನೆಲೆಯಲ್ಲಿ ಇಂದಿನ ಬಂದ್ ಯಶಸ್ವಿಯಾಗಲಿಲ್ಲ. ಈ ಎಲ್ಲಾ ಜಿಲ್ಲೆ, ಪಟ್ಟಣ ಪ್ರದೇಶಗಳಲ್ಲಿ ಪರಿಸ್ಥಿತಿ ಎಂದಿನಂತೆ ಕಂಡುಬಂತು. ಬಂದ್‍ಗೆ ಯಾರೂ ಸಹಕರಿಸಿರಲಿಲ್ಲ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜನಜೀವನ ಎಂದಿನಂತಿತ್ತು. ರೈತ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದವು. ಕಲಬುರಗಿಯಲ್ಲಿಯೂ ಸಾರಿಗೆ ಸಂಚಾರ, ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಅಂಗಡಿ ಮುಂಗಟ್ಟು, ಶಾಲಾ ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸಿದವು. ರಾಯಚೂರಿನಲ್ಲಿ ಬಂದ್ ಆಚರಣೆಯಿಲ್ಲ. ಯಾವುದೇ ಸಂಘಟನೆ ಬಂದ್ ಕರೆ ನೀಡಿಲ್ಲ. ಮುಂಜಾನೆಯಿಂದ ಜನಜೀವನ ಎಂದಿನಂತಿತ್ತು. ಉಸ್ಮಾನೀಯ ಮಾರುಕಟ್ಟೆ ಸೇರಿದಂತೆ ಎಲ್ಲಾ ಮಾರುಕಟ್ಟೆಗಳೂ ಎಂದಿನಂತೆ ಕಾರ್ಯನಿರ್ವಹಿಸಿದವು. ಏಲಕ್ಕಿ ನಾಡು ಹಾವೇರಿಯಲ್ಲಿ ಬಸ್ ಸಂಚಾರ, ಜನಜೀವನ ಎಂದಿನಂತಿತ್ತು. ಹಾಗೂ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಿರಲಿಲ್ಲ. ಆದರೆ ರೈತರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತಾಯಿಸಿದರು.

North-Karnataka--02

ಕಲಬುರಗಿಯ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕಕ್ಕೆ ಒತ್ತಾಯಿಸಿ ಸಹಿ ಸಂಗ್ರಹಕ್ಕೆ ಮುಂದಾದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ, ಕೊಪ್ಪಳ, ಚಿಕ್ಕೋಡಿಯಲ್ಲಿ ಬಂದ್‍ಗೆ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ. ಸಂಚಾರ ವ್ಯವಸ್ಥೆ ಹಾಗೂ ಅಂಗಡಿ ಮುಗ್ಗಟ್ಟುಗಳು ಹಾಗೂ ಶಾಲಾ ಕಾಲೇಜು, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಕುಂದಾನಗರಿ ಬೆಳಗಾವಿಯಲ್ಲಿ ಬಂದ್‍ನ ಯಾವುದೇ ಸೂಚನೆ ಕಂಡುಬರಲಿಲ್ಲ. ಬಂದ್ ವಿರೋಧಿಸಿ ಎಂಟು ಗಂಟೆಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಕರವೇ ನಾರಾಯಣಗೌಡರ ಬಣ ಹಾಗೂ ಶಿವರಾಮೇಗೌಡ ಬಣದ ಕಾರ್ಯಕರ್ತರು ಗುಲಾಬಿ ನೀಡಿ ಬಂದ್ ಗೆ ಬೆಂಬಲಿಸದಂತೆ ಕರೆ ನೀಡಿ ವಿನೂತನ ಪ್ರತಿಭಟನೆ ನಡೆಸಿದರು.

ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಬಹುತೇಕ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡದೆ ಅಂಗಡಿ ಮುಂಗಟ್ಟುಗಳನ್ನು ತೆರೆದವರನ್ನು ಸಾಲು ಸಾಲಾಗಿ ಅಭಿನಂದಿಸಿದರು. ಅಖಂಡ ಕರ್ನಾಟಕ ನಮ್ಮದು, ಇದು ಇಬ್ಭಾಗವಾಗಲು ಬಿಡುವುದಿಲ್ಲ ಎಂದು ಘೋಷಣೆಗಳು ಕೇಳಿಬಂದವು. ಸಾಂಕೇತಿಕ ಪ್ರತಿಭಟನೆ ನಡೆಸಿದ ಹಲವು ಸಂಘಟನೆಗಳ ಕಾರ್ಯಕರ್ತರು, ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಯಲ್ಲಿ ಅನ್ಯಾಯವಾಗಿದೆ. ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ. ಎಲ್ಲಾ ಸರ್ಕಾರಗಳು ಕಡೆಗಣಿಸುತ್ತಾ ಬಂದಿವೆ. ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಬೇಕಾಗಿದೆ. ಪ್ರತ್ಯೇಕತೆ ನಮ್ಮ ಕೂಗಲ್ಲ , ಸಮಗ್ರ ಅಭಿವೃದ್ಧಿ ಮುಖ್ಯ ಎಂದು ಹೇಳಿದರು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಎಚ್ಚರಿಕೆಯ ಹೆಜ್ಜೆಯನ್ನು ಇಟ್ಟಿವೆ. ಕಾಂಗ್ರೆಸ್ ಮೌನಕ್ಕೆ ಶರಣಾದರೆ, ಬಿಜೆಪಿ ಪ್ರತಿಭಟನಾನಿರತರ ಮನವೊಲಿಸುವ ಕೆಲಸ ಮಾಡಲು ಮುಂದಾಗಿದೆ. ಪ್ರತಿಭಟನೆಗೆ ಮುಂದಾಗಿದ್ದ ಸ್ವಾಮೀಜಿಗಳ ಬಳಿ ತೆರಳಿದ ಬಿ.ಎಸ್. ಯಡಿಯೂರಪ್ಪ ಒಡಕಿನ ಧ್ವನಿ ಬೇಡ, ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸೋಣ ಎಂದು ಮನವಿ ಮಾಡಿದ್ದಾರೆ. ಅತ್ತ ನವದೆಹಲಿಯಲ್ಲಿ ಬಿಜೆಪಿ ಸಂಸದ ಸುರೇಶ್ ಅಂಗಡಿ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಅಖಂಡ ಕರ್ನಾಟಕದ ಪರಿಕಲ್ಪನೆ ನಮ್ಮದು. ಯಾವುದೇ ಕಾರಣಕ್ಕೂ ರಾಜ್ಯ ಪ್ರತ್ಯೇಕವಾಗಬಾರದು. ನಾವು ಬೆಂಗಳೂರಿಗೆ ಹೋಗಿ ಹೋರಾಟ ಮಾಡಿ, ಹಣ ತಂದು ನಮ್ಮ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡೋಣ ಎಂದು ಉತ್ತರ ಕರ್ನಾಟಕದ ಶಾಸಕರಿಗೆ ಮನವಿ ಮಾಡಿದ್ದಾರೆ.

ಹಾಸನದ ಹೊಳೆನರಸೀಪುರದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ನಮಗೆ ಉತ್ತರ ಕರ್ನಾಟಕ ಬೇರೆಯಲ್ಲ, ದಕ್ಷಿಣ ಕರ್ನಾಟಕವೂ ಬೇರೆಯಲ್ಲ. ಎಲ್ಲ ಕರ್ನಾಟಕವೂ ಒಂದೇ. ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಹಾಗಾಗಿ ಈ ರೀತಿ ವರ್ತಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

Facebook Comments

Sri Raghav

Admin