ಸ್ತನಪಾನ ಶಿಶು ಆರೋಗ್ಯಕ್ಕೆ ಸೋಪಾನ

ಈ ಸುದ್ದಿಯನ್ನು ಶೇರ್ ಮಾಡಿ

Mother

ನಿಮ್ಮ ಮಗುವಿಗೆ ಸ್ತನಪಾನ ಮಾಡಿಸುವುದರಿಂದ ಕೇವಲ ಶಿಶುವಿನ ಆರೋಗ್ಯ ಆರೈಕೆ, ಜೀವನದಲ್ಲಿ ಪೋಷಕಾಂಶದ ಆರಂಭಿಕ ಕೊಡುಗೆ ನೀಡುವುದಲ್ಲದೆ ಕಂದನಿಗೆ ಬೆಚ್ಚಗಿನ ಪ್ರೀತಿಯನ್ನು ಧಾರೆ ಎರೆಯುವ ಹಾಗೂ ಶಿಶುವಿನ ಜತೆ ನಿಕಟ ಬಾಂಧವ್ಯ ಹೊಂದುವ ಅಗಾಧ ಸಂತೋಷದಾಯಕ ಮಾರ್ಗ ಇದಾಗಿದೆ. ಇದು ಮಗುವಿಗೆ ಸುರಕ್ಷತೆ, ರಕ್ಷಣೆ ಹಾಗೂ ಮಮತೆಯ ಮಡಿಲಿನ ಆರೈಕೆಯ ಭಾವನೆ ಸೃಷ್ಟಿಸುತ್ತದೆ.

ಇದು ನಿಮ್ಮ ಮಗುವಿಗೆ ಹಲವಾರು ಅರೋಗ್ಯ ಮತ್ತು ಬೆಳವಣಿಗೆ ಪ್ರಯೋಜನ ಗಳು ಹಾಗೂ ನಿಮ್ಮ ಸ್ವಾಸ್ಥ್ಯದ ಮೇಲೂ ಪೂರಕ ಪರಿಣಾಮ ಬೀರುತ್ತದೆ.
ಹಸುವಿನ ಹಾಲು ಅಥವಾ ಕೆಲವೊಮ್ಮೆ ಆಡುಗಳ ಹಾಲು ಅಥವಾ ಸೋಯಾಬೀನ್ ಆಧಾರದ ಇತರ ಹಾಲುಗಳು ಸಾಮಾನ್ಯವಾಗಿ ಮಗುವಿಗೆ ಹಾಲಿನ ಅಗತ್ಯ ಪೂರೈಸಿದರೂ, ಅದು ತಾಯಿಯ ಎದೆ ಹಾಲಿಗೆ ಸಮನಾಗಿರುವುದಿಲ್ಲ. ಈ ಹಾಲು ನವ ಶಿಶುವಿನ ಜೀರ್ಣಾಂಗ ವ್ಯವಸ್ಥೆಗೆ ಪರ್ಯಾಯವಾಗಿ ಕಂಡರೂ ಇದು ಸ್ತನಪಾನವನ್ನು ಹೋಲುವುದಿಲ್ಲ.

ಇತರ ಹಾಲಿಗಿಂತ ಸ್ತನದ ಹಾಲು ಹೇಗೆ ವಿಭಿನ್ನವಾಗಿರುತ್ತದೆ..?
ಸ್ತನಪಾನದ ಘಟಕಾಂಶಗಳ ಭಾಗಗಳು ಇತರ ಪರ್ಯಾಯ ಹಾಲಿಗಿಂತ ಭಿನ್ನವಾಗಿರುತ್ತವೆ. ಉದಾಹರಣೆಗೆ ಹಸು ಹಾಲಿನಲ್ಲಿರುವ ಪ್ರೊಟೀನ್ ಪ್ರಮಾಣ ತಾಯಿಯ ಹಾಲಿನಲ್ಲಿ ಎರಡರಷ್ಟು ಇರುತ್ತದೆ. ಘಟಕಾಂಶಗಳ ಅನುಪಾತ ಕೂಡ ತುಂಬ ವಿಭಿನ್ನವಾಗಿರುತ್ತದೆ. ಪರ್ಯಾಯ ಹಾಲಿಗೆ ಹೋಲಿಸಿದಲ್ಲಿ ಈ ಹಾಲಿನಲ್ಲಿ ಪಾಲಿ ಅನುಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್ ಭಾಗ ಅಧಿಕವಾಗಿರುತ್ತದೆ. ತಾಯಿ ಹಾಲು ಇಮ್ಯುನೋ ಗ್ಲಾಬುಲಿನ್ಸ್, ಫಗೋಸೈಟ್ಸ್, ಲಿಂಪೋಸೈಟ್ಸ್, ಲೈಸೋಜೈಮ್ಸ್ ನಂಥ ಕಿಣ್ವಗಳು ಹಾಗೂ ಇತರ ಅನೇಕ ವಸ್ತುಗಳನ್ನು ಒಳಗೊಂಡಿರುತ್ತದೆ. ಸೋಂಕುಗಳ ವಿರುದ್ಧ ಹೋರಾಡಿ ಶಿಶುವಿಗೆ ರಕ್ಷಣೆ ನೀಡುವ ಜತೆಗೆ ಕೋಶಗಳು, ಆ್ಯಂಟಿಬಾಡಿಗಳು, ಹಾರ್ಮೋನುಗಳು ಹಾಗೂ ಇತರ ಮುಖ್ಯ ಜೀವಕೋಶಗಳನ್ನು ರಕ್ಷಿಸುತ್ತದೆ.

ಎದೆ ಹಾಲು ಶಿಶುವಿಗೆ ಹೇಗೆ ರಕ್ಷಣೆ ನೀಡುತ್ತದೆ..?
ಎದೆ ಹಾಲು ಜೀವರಕ್ಷಕ ದ್ರವ ರೂಪದ ಆಹಾರವಾಗಿದ್ದು, ಮಗು ಬೆಳವಣಿಗೆಯಾದಂತೆ ಅದರ ಬದಲಾವಣೆ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ಪೌಷ್ಟಿಕಾಂಶ ಒದಗಿಸುತ್ತದೆ. ಇದು ಮುಖ್ಯವಾದ ರೋಗ ಪ್ರತಿರೋಧಕ ಘಟಕಾಂಶಗಳನ್ನು ಹೊಂದಿದ್ದು, ರೋಗಗಳು, ಸೋಂಕುಗಳ ವಿರುದ್ಧ ಹೋರಾಡಲು ಶಿಶುವಿಗೆ ನೆರವಾಗುತ್ತದೆ. ತುಂಬ ಅಚ್ಚರಿಯ ಸಂಗತಿಯೆಂದರೆ, ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳ ವಿರುದ್ಧ ಹೋರಾಡುವ ಮೂಲಕ ಶಿಶುವಿನ ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತೇಜನ ಗೊಳಿಸುವ ಶಕ್ತಿಶಾಲಿ ಇಮ್ಯುನೋ ಗ್ಲೋಬುಲಿನ್‍ಗಳ ಹೊಸ ರಚನೆ ಯನ್ನು ಉತ್ಪಾದಿಸಿ ಸೋಂಕುಗಳಿಗೆ ಮಗು ಪ್ರತಿರೋಧಿಸುವಂತೆ ಮಾಡುತ್ತದೆ. ಮಾತೆಯು ರೋಗಕ್ಕೆ ಕಾರಣವಾಗುವ ಸೂಕ್ಷ್ಮಾಣು ವಿನೊಂದಿಗೆ ಸಂಪರ್ಕಕ್ಕೆ ಬಂದಾಗ ಅದು ಆಕೆಯ ಉಸಿರಾಟ ವ್ಯವಸ್ಥೆ ಅಥವಾ ಕರುಳಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದಕ್ಕೆ ಪ್ರತಿಯಾಗಿ, ಆಕೆಯ ಶ್ವಾಸಕೋಶಗಳ ಶ್ಲೇಷ, ಪದರ ಗೆರೆ ಹಾಗೂ ಕರುಳು ರೋಗ ಪ್ರತಿರೋಧಕತೆಯನ್ನು ಉತ್ಪಾದಿಸುತ್ತದೆ. ಅದು ಮಾತೆಗೆ ರಕ್ಷಣೆ ನೀಡಿ ರಕ್ತ ವಾಹಿನಿಯನ್ನು ಪ್ರವೇಶಿಸುತ್ತದೆ. ಉತ್ಪಾದನೆಗೊಂಡ ಇಮ್ಯುನೋ ಗ್ಲೋಬುಲಿನ್ಸ್ ಸ್ತನಗಳಿಗೆ ಪಯಣಿಸಿ ಎದೆ ಹಾಲನ್ನು ತಲುಪುತ್ತದೆ. ಮುಂದಿನ ಸಲ ಮಗು ಸ್ತನದೊಂದಿಗೆ ಸಂಪರ್ಕಕ್ಕೆ ಬಂದಾಗ ಅದು ಶಿಶುವಿನ ದೇಹವನ್ನು ಪ್ರವೇಶಿಸುತ್ತದೆ. ಹೀಗಾಗಿ ತಾಯಿಗೆ ರಕ್ಷಣೆ ನೀಡಿದಂತೆ ಮಗುವಿಗೂ ಇದು ಸಂರಕ್ಷಣೆ ನೀಡುತ್ತದೆ.

ಸ್ತನಪಾನದಿಂದ ಮಗುವಿಗೆ ಲಭಿಸುವ ರಕ್ಷಣೆಗಳು:
ವಿಭಿನ್ನ ಪರಿಸರಗಳಲ್ಲಿ ಅನೇಕ ಸಂಖ್ಯೆಯ ಮಕ್ಕಳೊಂದಿಗೆ ನಡೆಸಿದ ಸಂಶೋಧನೆಗಳು ತಾಯಿ ಹಾಲು ಕುಡಿದ ಮಕ್ಕಳು ಈ ಕೆಳಕಂಡ ರೋಗಗಳಿಂದ ಬಳಲುವ ಸಾಧ್ಯತೆ ಕಡಿಮೆ ಇರುತ್ತದೆ: ಕರುಳು ಬೇನೆ, ಉಸಿರಾಟದ ಸೋಂಕು, ಕಿವಿ ಸೋಂಕು, ಮೂತ್ರ ಸೋಂಕು, ಅಲರ್ಜಿಗಳು, ಆಸ್ತಮಾ, ಕಜ್ಜಿ, ಇಸಬು. ಅಧ್ಯಯನದಿಂದ ಸ್ತನಪಾನ ಮಾಡಿದ ಶಿಶುಗಳ ಜೀವದೊಂದಿಗೆ ಏನೋ ಸಂಪರ್ಕವಿದೆ ಅಥವಾ ಮಾತೆಯರು ಸ್ತನಪಾನ ಮಾಡಿಸಿದ ಸಂಗತಿಗಿಂತ ಮಿಗಿಲಾಗಿ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಿದ್ದಾರೆ ಎಂಬುದು ತಿಳಿದುಬರುತ್ತದೆ. ಈ ನಿಟ್ಟಿನಲ್ಲಿ ಇಂಥ ಅನೇಕ ಅಧ್ಯಯನಗಳನ್ನು ನಡೆಸಲಾಗಿದ್ದು, ಸ್ತನಪಾನವು ತುಂಬ ವಿಶಿಷ್ಟ, ವಿಭಿನ್ನವಾದುದು ಮತ್ತು ಅದಕ್ಕೆ ಸರಿಸಮವಾದುದು ಯಾವುದೂ ಇಲ್ಲ ಎಂಬ ಸಂಗತಿಗಳು ದೃಢಪಟ್ಟಿದೆ. ದೀರ್ಘಕಾಲ ಶಿಶುವಿಗೆ ಎದೆ ಹಾಲು ಕುಡಿಸುವುದರಿಂದ ಅನೇಕ ಪ್ರಯೋಜನಗಳುಂಟು. ಎದೆ ಹಾಲು ಸದಾ ಆರೋಗ್ಯಕರ ಮತ್ತು ಪೋಷಣೆ ನೀಡುವಂಥದ್ದು. ಅನೇಕ ಮಾತೆಯರು ತಮ್ಮ ಮಗುವಿಗೆ ದೀರ್ಘ ಕಾಲ ಸ್ತನಪಾನ ಮಾಡಿಸುತ್ತಾರೆ. ವಾಂತಿ ಮತ್ತು ಅತಿಸಾರದಿಂದ ಶಿಶು ನರಳುವುದು ಸದಾ ಸಂಕಷ್ಟದ ಸಂಗತಿಯಾಗಿರುತ್ತದೆ. ಕಿವಿ ಸೋಂಕಿನ ನೋವಿನಿಂದ ಕರುಣಾಜನಕವಾಗಿ ಅಳುವ ಮಗುವನ್ನು ಆರೈಕೆ ಮಾಡುವುದು ಮತ್ತು ಸಂತೈಸುವುದು ತುಂಬಾ ಶ್ರಮದ ಕೆಲಸವಾಗಿರುತ್ತದೆ.
ಮಕ್ಕಳು ಅನಾರೋಗ್ಯಕ್ಕೆ ಒಳಗಾದಾಗ ಇಂಥ ಸ್ಥಿತಿಗಳ ಪರಿಣಾಮವಾಗಿ ಹಸುಳೆಗಳಿಗೆ ಶುಶ್ರೂಷೆ ಮಾಡುವುದು ಇಡೀ ಕುಟುಂಬಕ್ಕೆ ಯಾತನೆ ಮತ್ತು ಸಂಕಷ್ಟವಾಗುತ್ತದೆ. ಮಗುವಿಗೆ ಸೂಕ್ತ ಸಮಯದ ತನಕ ಸ್ತನಪಾನ ಮಾಡಿಸುವುದರಿಂದ ಇಂಥ ಅನಾರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಎದೆ ಹಾಲಿಗೆ ಪರ್ಯಾಯ ಇಲ್ಲ
ಎದೆ ಹಾಲು ಮಗುವಿಗೆ ನೈಸರ್ಗಿಕ ಮತ್ತು ಸರಿಯಾದ ಆಹಾರ. ಎಲ್ಲಾ ಶಿಶುಗಳು ಆರು ತಿಂಗಳು ತನಕ ವಿಶೇಷವಾಗಿ ಎದೆ ಹಾಲು ನೀಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಶಿಫಾರಸು ಮಾಡಿದೆ. ಆರು ತಿಂಗಳ ನಂತರ ಮಗುವಿಗೆ ಸಾಕಷ್ಟು ಪೂರಕ ಆಹಾರದೊಂದಿಗೆ ಎರಡು ವರ್ಷಗಳ ಕಾಲ ಸ್ತನಪಾನ ಮುಂದುವರೆಸಬೇಕು ಎಂದು ಡಬ್ಲ್ಯುಎಚ್‍ಒ ಸಲಹೆ ನೀಡಿದೆ. ಬೆಳವಣಿಗೆ ಮತ್ತು ವಿಕಾಸ ಪ್ರಮಾಣ ಗರಿಷ್ಠ ಮಟ್ಟದಲ್ಲಿ ರುವಾಗ ಎದೆ ಹಾಲು ಬಹುತೇಕ ಸಕಲ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಒಳಗೊಂಡ ಸೂಕ್ತ ಪುಷ್ಟಿಯನ್ನು ಹಾಲಿನ ರೂಪದಲ್ಲಿ ಒದಗಿಸುತ್ತದೆ.  ತಾಯಿಯ ಹಾಲು ಎಲ್ಲ ಪೌಷ್ಟಿಕಾಂಶಗಳ ದೊಡ್ಡ ಭಂಡಾರವೆನ್ನ ಬಹುದು. ಎದೆ ಹಾಲಿನಲ್ಲಿ ಬಿಳಿ ರಕ್ತ ಕಣಗಳು (ಲ್ಯೂಕೋಸೈಟ್ಸ್), ಮ್ಯಾಕ್ರೋಫೆಜಸ್ ಮತ್ತು ಎಫಿಥೆಲಿಯಲ್ ಕೋಶಗಳು, ಲಿಪಿಡ್‍ಗಳು, ಕಾರ್ಬೊಹೈಡ್ರೇಟ್‍ಗಳು, ಪೋಷಕಾಂಶಗಳು, ಪ್ರೊಟೀನ್ ನೈಟ್ರೋಜೀನಸ್ ಕಾಂಪೌಂಡ್‍ಗಳು, ನೀರಿನಲ್ಲಿ ಕರುಗುವ ವಿಟಮಿನ್‍ಗಳು, ಮ್ಯಾಕ್ರೋನ್ಯೂಟಿಯೆಂಟ್ಸ್ ಎಲಿಮೆಂಟ್‍ಗಳು, ಟ್ರೆಸ್ ಎಲಿಮೆಂಟ್‍ಗಳು ಹಾಗೂ ವಿವಿಧ ನಾನ್ ನ್ಯೂಟ್ರಿಷನಲ್ ಕಾಂಪೌಂಡ್‍ಗಳು, ಶಿಶುವಿನ ಬೆಳವಣಿಗೆ ಮತ್ತು ಪ್ರಗತಿಗೆ ಉತ್ತೇಜನ ನೀಡುತ್ತವೆ.

ತಾಯಿ ಹಾಲುಣಿಸುವುದನ್ನು 6-11 ತಿಂಗಳ ಕಾಲ ಮುಂದುವರೆಸುವುದು 5 ವರ್ಷದೊಳಗಿನ ಶಿಶುಗಳ ಸಾವಿನ ಪ್ರಮಾಣವನ್ನು ಶೇ.13-15ರಷ್ಟು ಕಡಿಮೆ ಮಾಡುವ ಏಕೈಕ ಅಧಿಕ ಪರಿಣಾಮಕಾರಿ ಕ್ರಮವಾಗಿದೆ ಎಂದು ಇತ್ತೀಚಿನ ಮಕ್ಕಳ ಬದುಕುಳಿದಿರುವ ಮಾಹಿತಿ ವರದಿ ಮಾಡಿದೆ. ಮತ್ತೊಂದು ಅಧ್ಯಯನದಲ್ಲಿ ಶಿಶು ಜನಿಸಿದ ಮೊದಲ ದಿನವೇ ಎಲ್ಲ ಮಕ್ಕಳಿಗೂ ಎದೆ ಹಾಲು ಕುಡಿಸುವುದನ್ನು ಆರಂಭಿಸಿದರೆ ನವಜಾತ ಶಿಶುಗಳ ಮರಣವನ್ನು ಶೇ.13ರಷ್ಟು ತಪ್ಪಿಸಬಹುದು. ಮಗು ಹುಟ್ಟಿದ ಒಂದು ಗಂಟೆಯಿಂದಲೇ ಸ್ತನಪಾನ ಪ್ರಾರಂಭಿಸಿದರೆ ನವಜಾತ ಶಿಶುಗಳ ಸಾವನ್ನು ಶೇ.22ರಷ್ಟು ತಪ್ಪಿಸಬಹುದು. ಅತಿಸಾರ ಮತ್ತು ಉಸಿರಾಟದ ಸೋಂಕುಗಳು ಸೇರಿದಂತೆ ಹಲವಾರು ಸೋಂಕು ರೋಗಗಳ ವಿರುದ್ಧ ಸ್ತನಪಾನ ರಕ್ಷಣೆ ನೀಡುತ್ತದೆ. ಇದರ ಜತೆಗೆ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗಗಳು ಮತ್ತು ಇತರ ರೋಗಗಳಂಥ ದೀರ್ಘಕಾಲದ ಸಮಸ್ಯೆಗಳಿಂದ ರಕ್ಷಿಸುತ್ತದೆ. ಚೆನ್ನಾಗಿ ಎದೆ ಹಾಲು ಕುಡಿದ ಶಿಶುಗಳು ಅಧಿಕ ಮಟ್ಟದ ಬುದ್ಧಿಮತ್ತೆಯನ್ನು ಹೊಂದಿರುತ್ತವೆ. ಇದು ಮಗು ಮತ್ತು ತಾಯಿಯ ನಡುವೆ ಭಾವನಾತ್ಮಕ ಸಂಬಂಧವನ್ನು ಹೆಚ್ಚಿಸಿ ಬೆಚ್ಚಗಿನ ಪ್ರೀತಿ/ವಿಶ್ವಾಸವನ್ನು ಒದಗಿಸುತ್ತದೆ. ಹಾಗಾಗಿ ಇದು ಆಹಾರಕ್ಕಿಂತಲೂ ಮಿಗಿಲು.

ಸ್ತನಪಾನ ಮಾಡಿಸುವುದರಿಂದ ಮಾತೆಗೂ ಅನೇಕ ಆರೋಗ್ಯಕರ ಪ್ರಯೋಜನಗಳುಂಟು. ಇದು ರಕ್ತ ಹೀನತೆಯನ್ನು ಕಡಿಮೆ ಮಾಡುತ್ತದೆ. ಶೂಶ್ರುಷೆ ಮಾಡುವ ಮಾತೆಯರಲ್ಲಿ ಸ್ಥೂಲಕಾಯ ವಿರಳವಾಗಿದ್ದು, ಇದು ತಾಯಿ ತನ್ನ ಸಾಮಾನ್ಯ ದೇಹ ಸೌಷ್ಠವ ಹೊಂದಲು ನೆರವಾಗುತ್ತದೆ. ಇದು ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕ್ಯಾನ್ಸರ್‍ನಿಂದ ರಕ್ಷಣೆ ನೀಡುತ್ತದೆ. ಮಗುವಿಗೆ ಚೆನ್ನಾಗಿ ಎದೆ ಹಾಲು ಕುಡಿಸುವುದರಿಂದ ಮೊದಲ ಆರು ತಿಂಗಳ ಬಾಣಂತನದ ವೇಳೆ ಪರಿಣಾಮಕಾರಿಯಾಗಿ ಗರ್ಭ ಧರಿಸುವಿಕೆಯನ್ನು ತಡೆಗಟ್ಟುತ್ತದೆ. ಚೆನ್ನಾಗಿ ಎದೆಹಾಲು ಕುಡಿಸುವ ತಾಯಂದಿರು ನಡವಳಿಕೆ ಮತ್ತು ವರ್ತನೆ ಹೊಂದಾಣಿಕೆಗಳಿಗೆ ಸಂಬಂಧಿಸಿದಂತೆ ತಮ್ಮ ಶಿಶುಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ. ಎದೆಹಾಲು ಕುಡಿದ ಮಕ್ಕಳಲ್ಲಿ ಅನಾರೋಗ್ಯದ ಪ್ರಮಾಣ ಇಳಿಮುಖವಾಗುವುದರಿಂದ ಆರೋಗ್ಯ ಆರೈಕೆ ವೆಚ್ಚ ಕಡಿಮೆಯಾಗುತ್ತದೆ. ಇದರಿಂದಾಗಿ ಕುಟುಂಬದ ಮೇಲೆ ಆರ್ಥಿಕ ಹೊರೆ ತಗ್ಗುತ್ತದೆ. ಸ್ತನಪಾನದಿಂದ ಮಕ್ಕಳಲ್ಲಿ ಅನಾರೋಗ್ಯ ಕಡಿಮೆಯಾಗುವುದರಿಂದ ಮಾತೆಯರು ತಮ್ಮ ಕೆಲಸ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿಕೊಂಡು ಹೋಗಲು ಸಹಾಯವಾಗುತ್ತದೆ. ಆದ್ದರಿಂದ ಮಾತೆಯ ಮಮತೆಯ ನಿಷ್ಕಲ್ಮಶ ಪ್ರೀತಿಯಂತೆ ತಾಯಿಯ ಹಾಲಿಗೆ ಪರ್ಯಾಯವಾದುದು ಯಾವುದೂ ಇಲ್ಲ.

Facebook Comments

Sri Raghav

Admin