ಫ್ಲೆಕ್ಸ್ ತೆರವಿಗೆ ಹೈಕೋರ್ಟ್ ನಿರ್ದೇಶನ, ಪಾಲಿಕೆ ಆಯುಕ್ತರ ತುರ್ತು ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Flax-court
ಬೆಂಗಳೂರು, ಆ.3- ಬೆಂಗಳೂರು ಮಹಾನಗರದ ಅಂದವನ್ನು ಹಾಳುಗೆಡವುತ್ತಿರುವ ಅನಧಿಕೃತ ಫ್ಲೆಕ್ಸ್, ಜಾಹೀರಾತು ಫಲಕಗಳನ್ನು ತೆರವುಗೊಳಿಸಿ ನೂತನ ಜಾಹೀರಾತು ನೀತಿಯನ್ನು ಜಾರಿಗೊಳಿಸಬೇಕೆಂಬ ಹೈಕೋರ್ಟ್ ಕಟ್ಟಪ್ಪಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು ತುರ್ತು ಸಭೆ ನಡೆಸಲು ಮುಂದಾಗಿದ್ದಾರೆ.
ಅನಧಿಕೃತ ಜಾಹೀರಾತು ಫಲಕಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಮಾಡಿ ವರದಿ ನೀಡಬೇಕೆಂಬ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರ ವಿಭಾಗೀಯ ಪೀಠದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಜಾಹೀರಾತು ನೀತಿ ಜಾರಿಗೊಳಿಸಲು ಕಾಲಾವಕಾಶ ಕೇಳಿದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಗರಂ ಆದ ನ್ಯಾಯಾಧೀಶರು ತಕ್ಷಣವೇ ನೀತಿ ಜಾರಿಗೊಳಿಸಿ ಅನಧಿಕೃತ ಜಾಹೀರಾತು ಫಲಕ, ಫ್ಲೆಕ್ಸ್‍ಗಳನ್ನು ತೆರವುಗೊಳಿಸಿ ಎಂದು ಆದೇಶಿಸಿದರು.

ನಗರದಲ್ಲಿ ಮಿತಿಮೀರುತ್ತಿರುವ ಫ್ಲೆಕ್ಸ್, ಬ್ಯಾನರ್‍ಗಳನ್ನು ತೆರವುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಿನ್ನೆ ಮಧ್ಯಾಹ್ನ 3 ಗಂಟೆಯೊಳಗೆ ನಗರದಲ್ಲಿರುವ ಎಲ್ಲಾ ಫ್ಲೆಕ್ಸ್, ಬ್ಯಾನರ್‍ಗಳನ್ನು ತೆರವುಗೊಳಿಸಿ ವರದಿ ನೀಡಬೇಕೆಂದು ಆದೇಶಿಸಿದ್ದ ಹಿನ್ನೆಲೆಯಲ್ಲಿ ಎಲ್ಲ ಎಂಟೂ ವಲಯಗಳ ಪಾಲಿಕೆ ಅಧಿಕಾರಿಗಳು ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದ್ದರು.

ಇಂದು ಕೂಡ ಮುಂದುವರಿದ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನೂತನ ಜಾಹೀರಾತು ನೀತಿ ಜಾರಿಗೊಳಿಸುವಂತೆ ನ್ಯಾಯಾಧೀಶರು ನೀಡಿದ ಸೂಚನೆಗೆ ಆಯುಕ್ತರು ಇದೇ 8ರಂದು ಕೆಂಪೇಗೌಡ ದಿನಾಚರಣೆ ಇದ್ದು, ಕಾಲಾವಕಾಶ ನೀಡಬೇಕೆಂದು ಕೋರಿದ ಮನವಿಯನ್ನು ತಿರಸ್ಕರಿಸಿದ ಅವರು, ತುರ್ತು ಸಭೆ ನಡೆಸಿ ಹೊಸ ನೀತಿಯನ್ನು ಜಾರಿಗೊಳಿಸಬೇಕೆಂದು ಕಟ್ಟಪ್ಪಣೆ ಮಾಡಿದರು. ಅಲ್ಲದೆ, ಫ್ಲೆಕ್ಸ್ ತೆರವುಗೊಳಿಸುವ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಆಯುಕ್ತರು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು ಇಂದೇ ಮೇಯರ್, ಉಪಮೇಯರ್, ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರೊಂದಿಗೆ ಸಭೆ ನಡೆಸಿ 6 ಅಥವಾ 7ರಂದು ಹೊಸ ನೀತಿ ಜಾರಿಗೊಳಿಸಿ ವಿಶೇಷ ಪಾಲಿಕೆ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.  ನಗರದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್, ಬ್ಯಾನರ್‍ಗಳು, ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ಮಿತಿಮೀರಿದೆ. ಸಾರ್ವಜನಿಕರಿಗೆ ಇದು ಸಾಕಷ್ಟು ಕಿರಿಕಿರಿಯಾಗಿದೆ. ದೂರುಗಳು ಬಂದರೂ ಪಾಲಿಕೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಈಗ ಎಚ್ಚೆತ್ತುಕೊಂಡಿದೆ.

Facebook Comments

Sri Raghav

Admin