ಕನಕಪುರ ನಿವಾಸಿಗಳಿಗೆ ಡಿ.ಕೆ.ಬ್ರದರ್ಸ್’ರಿಂದ ಭರ್ಜರಿ ಬಾಡೂಟ..!

ಈ ಸುದ್ದಿಯನ್ನು ಶೇರ್ ಮಾಡಿ

Dk-brothrs

ಆಹ್ಹಾಹ… ಭೋಜನವಿದು… ವಿಶಿಷ್ಟ ಭಕ್ಷ್ಯಗಳಿವು… ಬಾಯಲ್ಲಿ ನೀರೂರಿಹುದು… ಇದೇನಪ್ಪಾ ಇದು ಈಗ್ಯಾಕೆ ಭೂರಿ ಭೋಜನದ ವಿಚಾರ ಅಂತೀರಾ…
ಇಲ್ಲೇ ಇರೋದು ಇಂಟರೆಸ್ಟಿಂಗ್ ವಿಚಾರ. ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಅವರು ಕನಕಪುರ ವಿಧಾನಸಭಾ ಕ್ಷೇತ್ರದ ಖಾಯಂ ನಿವಾಸಿಗಳಿಗೆ ಇಂತಹದೊಂದು ಭೂರಿ ಭೋಜನದ ವ್ಯವಸ್ಥೆ ಮಾಡಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯಿತ್ರಿ ವಿಹಾರದಲ್ಲಿ ಕನಕಪುರ ನಿವಾಸಿಗಳಿಗಾಗಿ ಔತಣಕೂಟ ಏರ್ಪಡಿಸಿದ್ದಾರೆ.  ಈಗಾಗಲೇ ಕನಕಪುರ ವಿಧಾನಸಭಾ ಕ್ಷೇತ್ರದ ಸಮಸ್ತ ಜನತೆಗೆ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಕನಕಪುರದ ಖಾಯಂ ನಿವಾಸಿಗಳಿಗೂ ಆಹ್ವಾನ ಪತ್ರಿಕೆ ತಲುಪಿದೆ.

ಔತಣ ಕೂಟಕ್ಕಾಗಿ ನಗರದ ಪ್ರಖ್ಯಾತ ಬಾಣಸಿಗರು ವಿಶಿಷ್ಟ ಖಾದ್ಯ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಟನ್‍ಗಟ್ಟಲೆ ಮಾಂಸ, ಕೆಜಿಗಟ್ಟಲೆ ಕೋಳಿ ಮಾಂಸದ ಬಾಡೂಟ ಸಿದ್ಧವಾಗುತ್ತಿದೆ. ನಾನ್ ವೆಜ್ ತಿನ್ನದವರಿಗಾಗಿ ವಿಶಿಷ್ಟ ಸಿಹಿಯೂಟವು ತಯಾರಾಗಿದೆ. ಸಾಮಾನ್ಯವಾಗಿ ಶಾಸಕರಾಗಿ ಆರಿಸಿ ಬಂದ ನಂತರ ಇಲ್ಲವೆ ಸಚಿವ ಪದವಿ ದೊರೆತಾಗ ಔತಣಕೂಟ ಏರ್ಪಡಿಸುವುದು ಮಾಮೂಲು. ಆದರೆ ಡಿ.ಕೆ.ಬ್ರದರ್ಸ್ ದಿಢೀರನೆ ಕನಕಪುರ ಮೂಲ ನಿವಾಸಿಗಳನ್ನು ನೆನಪು ಮಾಡಿಕೊಂಡು ಔತಣಕೂಟ ಏರ್ಪಡಿಸಿರುವುದರ ಮರ್ಮ ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲವೆ ಮುಂದಿನ ತಮ್ಮ ರಾಜಕೀಯ ಸ್ಥಿತಿಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಭೂರಿ ಭೋಜನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಅದೇನೇ ಇರಲಿ ನಾಳೆ ಬೆಂಗಳೂರಿನಲ್ಲಿ ನೆಲೆಸಿರುವ ಕನಕಪುರ ನಿವಾಸಿಗಳಿಗಂತೂ ಭರ್ಜರಿ ಬಾಡೂಟವೇ ಕಾದಿದೆ.

Facebook Comments

Sri Raghav

Admin