ಮಳೆಗಾಗಿ ಬಾಲಕಿಯರಿಬ್ಬರಿಗೆ ಗಂಡು-ಹೆಣ್ಣಿನ ವೇಷ ಹಾಕಿ ವಿಶಿಷ್ಟವಾಗಿ ಮದುವೆ ಮಾಡಿದ ಗ್ರಾಮಸ್ಥರು..!

ಈ ಸುದ್ದಿಯನ್ನು ಶೇರ್ ಮಾಡಿ

child-marriage-two-gilrs
ಚಿಕ್ಕಬಳ್ಳಾಪುರ, ಆ.4-ಮಳೆಗಾಗಿ ವಿಶಿಷ್ಟ ಆಚರಣೆಗಳು ಬಳಕೆಯಲ್ಲಿರುವುದು ಕೇಳಿದ್ದೇವೆ. ಆದರೆ ಇಲ್ಲಿ ಬಾಲಕಿಯರಿಗೆ ಗಂಡು ಹಾಗೂ ಹೆಣ್ಣಿನ ವೇಷ ಹಾಕಿ ಸಂಪ್ರದಾಯ ಬದ್ಧವಾಗಿ ಊರಿನವರೆಲ್ಲ ಸೇರಿ ಮದುವೆ ಮಾಡಿರುವ ಆಚರಣೆ ಅಚ್ಚರಿ ಮೂಡಿಸಿದೆ. ಜಿಲ್ಲೆಯಲ್ಲಿ ಮಳೆಯಿಲ್ಲದೆ ಪರಿತಪಿಸುತ್ತಿರುವ ರೈತರು ಜೋಡಿ ಬಾಲಕಿಯರಿಗೆ ಮದುವೆ ಮಾಡಿಸುವ ಮೂಲಕ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.

ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯಲ್ಲಿ ಮಳೆಗಾಗಿ ಈ ಅಪರೂಪದ ಆಚರಣೆಯನ್ನು ಕೈಗೊಳ್ಳಲಾಗಿದೆ. ಊರಿನವರಲ್ಲಿ ಕೆಲವರು ಗಂಡಿನ ಕಡೆಯವರಾಗಿ, ಮತ್ತೆ ಕೆಲವರು ಹೆಣ್ಣಿನ ಕಡೆಯವರಾಗಿ ನಿಂತು ಎಲ್ಲಾ ಮದುವೆ ಶಾಸ್ತ್ರಗಳನ್ನು ಸಂಪ್ರದಾಯಬದ್ಧವಾಗಿ ಮಾಡಿದ್ದಾರೆ. ಇಂದಿನ ಬೆಳಗಿನ ಮುಹೂರ್ತದಲ್ಲಿ ಈ ಮದುವೆ ನೆರವೇರಿದೆ. ಬಾಲಕಿಯರಿಬ್ಬರು ಗಂಡು-ಹೆಣ್ಣಿನ ವೇಷಧಾರಿಗಳಾಗಿ ಹಸೆಮಣೆ ತುಳಿದರೆ ಊರಿನವರೆಲ್ಲ ಬಂಧು-ಬಾಂಧವರು-ಸ್ನೇಹಿತರಾಗಿ ಬಂದು ಶುಭ ಕೋರಿದ್ದಾರೆ.

ನಂಬಿಕೆ ಆಧರಿಸಿ ಹಲವೆಡೆ ಇಂತಹ ಆಚರಣೆಗಳು ನಡೆಯುತ್ತಿವೆಯಾದರೂ ಕೆಲವೆಡೆ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ ಮಾಡುವುದು, ಮಳೆರಾಯನನ್ನು ಆಹ್ವಾನಿಸುವ ರೀತಿಯಲ್ಲಿ ಹುಯ್ಯೋ, ಹುಯ್ಯೋ ಮಳೆರಾಯ ಎನ್ನುತ್ತ ಮಣ್ಣಿನಿಂದ ಮಾಡಿದ ಮಳೆರಾಯನನ್ನು ಹೊತ್ತು ಊರೆಲ್ಲ ಸುತ್ತುವ ವಾಡಿಕೆ, ಜಾತ್ರಾ ಮಹೋತ್ಸವ ಸೇರಿದಂತೆ ದೇವರ ಮೊರೆ ಹೋಗಲು ಮಾಡುವ ಆಚರಣೆಗಳು ಬಹಳಷ್ಟಿದೆ. ಆದರೆ ಇವೆಲ್ಲದರ ನಡುವೆ ಇಡೀ ಹಳ್ಳಿಯೇ ನಿಂತು ಸಂಭ್ರಮದಿಂದ ನಡೆಸಿರುವ ಮದುವೆ ಅಪರೂಪದಲ್ಲಿ ಅಪರೂಪ.

Facebook Comments

Sri Raghav

Admin