ವಿವಾದ ಸೃಷ್ಟಿಸುವಂತ ಹೇಳಿಕೆಯನ್ನು ಯಾವೊಬ್ಬ ನಾಯಕರೂ ನೀಡಬಾರದು : ಯಡಿಯೂರಪ್ಪ ತಾಕೀತು

ಈ ಸುದ್ದಿಯನ್ನು ಶೇರ್ ಮಾಡಿ

BS-Yadiyurappa
ಬೆಂಗಳೂರು, ಆ.5- ಲೋಕಸಭೆ ಚುನಾವಣೆ ಸಂಬಂಧ ಯಾವುದೇ ವಿವಾದದ ಹೇಳಿಕೆಯನ್ನು ಯಾವೊಬ್ಬ ನಾಯಕರೂ ನೀಡಬಾರದು ಎಂಬ ಆದೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊರಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ, ಕ್ಷೇತ್ರ ಬದಲಿಸುವ, ಅಸಮಾಧಾನ ವ್ಯಕ್ತಪಡಿಸುವ ಅಥವಾ ತಮ್ಮ ಆಕಾಂಕ್ಷೆ ಹೇಳಿಕೊಳ್ಳದಂತೆ ಬಿಜೆಪಿ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧೆ ನಿರಾಕರಿಸುವ ವಿಚಾರವನ್ನು ಬಹಿರಂಗಗೊಳಿಸುವುದರಿಂದ ಬೇರೊಬ್ಬರಿಗೆ ಆಸಕ್ತಿ ಹುಟ್ಟುವ ಸಾಧ್ಯತೆ ಇದೆ. ಹಾಗಾಗಿ ಇಂತಹ ವಿಚಾರಗಳನ್ನು ಬಹಿರಂಗವಾಗಿ ವ್ಯಕ್ತಪಡಿಸದಂತೆ ಸೂಚಿಸಿರುವ ಅವರು, ಪಕ್ಷದ ಆಂತರಿಕ ಚರ್ಚೆಯಲ್ಲಿ ಎಲ್ಲಾ ವಿವರ ಪ್ರಸ್ತಾಪಿಸಿ ಎಂದು ತಾಕೀತು ಮಾಡಿದ್ದಾರೆ.
ಟಿಕೆಟ್ ವಿಚಾರದಲ್ಲಿ ಈಗ ಯಾವುದೇ ಚರ್ಚೆ ಆಗಿಲ್ಲ. ಹೈಕಮಾಂಡ್ ಯಾವಾಗ ಪಟ್ಟಿ ಕೇಳುತ್ತದೆಯೋ ಆಗ ಮಾತ್ರ ನಾವು ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ ಕಳುಹಿಸುತ್ತೇವೆ. ಅದಕ್ಕಾಗಿ ಈಗಿಂದಲೇ ಲಾಬಿ ಆರಂಭಿಸುವುದು ಬೇಡ ಎಂದು ಕಾರ್ಯಕರ್ತರು ಹಾಗೂ ಆಕಾಂಕ್ಷಿಗಳಿಗೆ ಸೂಚ್ಯವಾಗಿ ತಿಳಿಸಿದರು.  ನಾವು ಪಟ್ಟಿಮಾತ್ರ ಕಳುಹಿಸುತ್ತೇವೆ. ಇದರ ಎಲ್ಲಾ ನಿರ್ಧಾರ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಸದ್ಯ ನಾವು ಲೋಕಸಭೆ ಟಿಕೆಟ್ ಹಂಚಿಕೆ ವಿಚಾರವನ್ನು ಚರ್ಚಿಸುತ್ತಿಲ್ಲ. ಪ್ರಸ್ತುತ ಪಕ್ಷ ಸಂಘಟನೆಯ ಚರ್ಚೆ ನಡೆಯುತ್ತಿದೆ. ಟಿಕೆಟ್ ಹಂಚಿಕೆ ವಿಚಾರ ಬಂದಾಗ ಅದನ್ನು ಪರಾಮರ್ಶಿಸೋಣ. ಅರ್ಹರಿಗೆ ಅವಕಾಶ ಸಿಗುತ್ತದೆ. ಅಲ್ಲಿಯವರೆಗೂ ಪ್ರತಿಯೊಬ್ಬರೂ ಸುಮ್ಮನಿರಿ. ಟಿಕೆಟ್ ಬಯಸುವ, ಕ್ಷೇತ್ರ ಬದಲಿಸುವ ಹಾಗೂ ಟಿಕೆಟ್ ನಿರಾಕರಿಸುವ ಮಾತನ್ನು ಎಲ್ಲಿಯೂ ಆಡಬೇಡಿ ಎಂದು ಆದೇಶಿಸಿದ್ದಾರೆ.

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಡಿ.ವಿ. ಸದಾನಂದಗೌಡ ಹಾಗೂ ಶೋಭಾ ಕರಂದ್ಲಾಜೆ ಅವರು ಕ್ಷೇತ್ರ ಬದಲಿಸಲಿದ್ದಾರೆ ಎಂಬ ಮಾತು ಕೇಳಿ ಬಂದಾಗ ಆ ಸಂದರ್ಭ ಸಭೈಯಲ್ಲಿದ್ದವರಿಗೆ ಬಿಎಸ್‍ವೈ ಈ ಮಾತು ತಿಳಿಸಿದ್ದಾರೆ ಎನ್ನಲಾಗಿದೆ.  ಒಟ್ಟಾರೆ ಪಕ್ಷಕ್ಕೆ ಟಿಕೆಟ್ ವಿಚಾರದಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಅಥವಾ ಮುಜುಗರ ಆಗದಂತೆ ತಡೆಯಲು ಬಿಎಸ್‍ವೈ ಮೊದಲೇ ಮುನ್ನೆಚ್ಚರಿಕೆ ವಹಿಸಿದ್ದು ಒಂದೆಡೆಯಾದರೆ ಮುಂದಿನ ಲೋಕಸಭೆ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಪಣತೊಟ್ಟಿರುವ ರಾಜ್ಯ ಬಿಜೆಪಿ ನಾಯಕರು ಪಕ್ಷದಲ್ಲಿ ಯಾವ ಮಾದರಿಯ ತಂತ್ರಗಾರಿಕೆ ಹೆಣೆದಿದೆ ಎನ್ನುವುದನ್ನು ಕೂಡ ಯಾರಿಗೂ ಬಿಟ್ಟುಕೊಡದಂತೆ ಕಾರ್ಯನಿರ್ವಹಿಸಲು ಸ್ವತಃ ಬಿಎಸ್‍ವೈ ಇದೇ ಸಂದರ್ಭ ಸೂಚಿಸಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin