ಸಾರಿಗೆ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ, ಜನಜೀವನ ಯಥಾಸ್ಥಿತಿ

ಈ ಸುದ್ದಿಯನ್ನು ಶೇರ್ ಮಾಡಿ

transpotr-protest-3

ಬೆಂಗಳೂರು, ಆ.7-ಮೋಟಾರ್ ವಾಹನ ತಿದ್ದುಪಡಿ ಮಸೂದೆ (2017)ಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಸಾರ್ವಜನಿಕ ಸಾರಿಗೆ ರಕ್ಷಿಸಲು ಒತ್ತಾಯಿಸಿ ಕರೆ ನೀಡಿದ್ದ ಸಾರಿಗೆ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟ(ಸಿಐಟಿಯು), ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳ, ಆಟೋ ರಿಕ್ಷಾ ಸಂಘಟನೆಗಳು, ಟ್ಯಾಕ್ಸಿ ಸಂಘಟನೆಗಳು ಕರೆ ನೀಡಿದ್ದ ಬಂದ್‍ಗೆ ನಿರೀಕ್ಷಿತ ಪ್ರತಿಕ್ರಿಯೆ ಕಂಡುಬರಲಿಲ್ಲ. ಸಿಐಟಿಯು ಸಂಘಟನೆಗಳ ಮುಖಂಡರು ಟೌನ್‍ಹಾಲ್ ಬಳಿ ಪ್ರತಿಭಟನೆ ನಡೆಸಿದರು.

transpotr-protest

ಟೌನ್‍ಹಾಲ್‍ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಜಾಥಾ ನಡೆಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ನಮ್ಮ ಪ್ರತಿಭಟನೆಯ ದಾರಿ ತಪ್ಪಿಸಲಾಗುತ್ತಿದೆ ಎಂದು ಮುಖಂಡರು ಆರೋಪಿಸಿದರು. ಎಲ್ಲೆಡೆ ಸಾರಿಗೆ ಸಂಚಾರ ಎಂದಿನಂತೆ ಇತ್ತು. ರಾಜಧಾನಿ ಬೆಂಗಳೂರಿನಲ್ಲಿ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ಬೆಳಗ್ಗೆಯಿಂದಲೇ ಎಂದಿನಂತೆ ಸಂಚರಿಸಿದವು. ಆಟೋ, ಟ್ಯಾಕ್ಸಿಗಳು ಮಾಮೂಲಿಯಂತೆ ಗ್ರಾಹಕರಿಗೆ ಸೇವೆ ಒದಗಿಸಿದವು.  ಎಪಿಎಂಸಿ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆಯಲ್ಲಿ ಮುಷ್ಕರದ ಪರಿಣಾಮ ಬೀರಲಿಲ್ಲ. ಸಾರಿಗೆ ನಿಗಮಗಳ ಸಂಘಟನೆಯವರು, ಚಾಲಕರು ಮುಷ್ಕರದ ಬಗ್ಗೆ ಪೂರ್ವಭಾವಿ ಮಾಹಿತಿ ಇರಲಿಲ್ಲ. ಹೀಗಾಗಿ ನೈತಿಕವಾಗಿ ಮುಷ್ಕರವನ್ನು ಬೆಂಬಲಿಸುತ್ತೇವೆ. ಆದರೆ ರಸ್ತೆಗಿಳಿದು ಪ್ರತಿಭಟನೆ ನಡೆಸುವುದಿಲ್ಲ ಎಂಬ ಹೇಳಿಕೆ ನೀಡಿದರು.

ಹುಬ್ಬಳ್ಳಿಯಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಿಬ್ಬಂದಿ ಬಂದ್‍ನಿಂದ ದೂರ ಉಳಿದರು. ಎಐಟಿಯುಸಿ ಸಂಘಟನೆ ಬಂದ್‍ಗೆ ಬೆಂಬಲ ವ್ಯಕ್ತಪಡಿಸಲಿಲ್ಲ. ಆಟೋ ಚಾಲಕರ ಸಂಘದಿಂದಲೂ ಬಂದ್‍ಗೆ ಸೂಕ್ತ ಬೆಂಬಲ ಸಿಗಲಿಲ್ಲ. ಹುಬ್ಬಳ್ಳಿ-ಧಾರವಾಡದಲ್ಲಿ ಎಂದಿನಂತೆ ಸಾರಿಗೆ ಸಂಸ್ಥೆ ಬಸ್‍ಗಳು ಸಂಚರಿಸಿದವು. ಸಿಐಟಿಯು ಸಂಘಟನೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಬಂದ್ ನಡೆಸುತ್ತಿದೆ. ಇದಕ್ಕೆ ನಾವು ಬೆಂಬಲ ನೀಡುವುದಿಲ್ಲ ಎಂದು ಹಲವು ಸಂಘಟನೆಗಳು ಆರೋಪಿಸಿದವು.
ಇತ್ತ ವಿಜಯಪುರದಲ್ಲೂ ಕೂಡ ಎಂದಿನಂತೆ ವಾಹನ ಸಂಚಾರ ಕಂಡು ಬಂತು. ಸರ್ಕಾರಿ ಬಸ್‍ಗಳು, ಆಟೋ, ಖಾಸಗಿ ಬಸ್‍ಗಳ ಓಡಾಟ ಮಾಮೂಲಿಯಾಗಿತ್ತು.
ಬಾಗಲಕೋಟೆಯಲ್ಲಿ ಬಂದ್‍ಗೆ ಬೆಂಬಲ ಸಿಗಲಿಲ್ಲ. ಆಟೋ, ಮ್ಯಾಕ್ಸಿಕ್ಯಾಬ್, ಸಾರಿಗೆ ಸೇವೆಗಳು ಎಂದಿನಂತೆ ಸುಗಮವಾಗಿತ್ತು. ದಾವಣಗೆರೆಯಲ್ಲಿ ಬಂದ್ ಬಿಸಿ ತಟ್ಟಲಿಲ್ಲ. ಸರ್ಕಾರಿ, ಖಾಸಗಿ ಬಸ್ ಸಂಚಾರ ಯಥಾಸ್ಥಿತಿಯಾಗಿತ್ತು.

transpotr-protest-1

ಮೈಸೂರಿನಲ್ಲಿ ಬಂದ್‍ಗೆ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ. ಎಂದಿನಂತೆ ವಾಹನಗಳ ಸಂಚಾರವಿತ್ತು. ಬೆಳಿಗ್ಗೆಯಿಂದಲೇ ಬಸ್‍ಗಳು ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಗೆ ಸಂಚರಿಸುತ್ತಿದ್ದವು. ಹೊರರಾಜ್ಯಗಳಿಗೆ ತೆರಳುವ ಮತ್ತು ಬರುವ ಬಸ್‍ಗಳ ಸಂಚಾರದಲ್ಲೂ ಯಾವುದೇ ವ್ಯತ್ಯಯ ಕಂಡುಬರಲಿಲ್ಲ.
ಮುಂಜಾಗ್ರತಾ ಕ್ರಮವಾಗಿ ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ತುಮಕೂರಿನಲ್ಲೂ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ಕಂಡುಬಂತು. ಜನಜೀವನ ಯಥಾಸ್ಥಿತಿಯಾಗಿತ್ತು. ಪ್ರತಿಭಟನೆ ನಡೆಸಲು ಮುಂದಾದ ಸಿಬ್ಬಂದಿಗಳನ್ನು ಡಿಪೋ ಮ್ಯಾನೇಜರ್ ಹಾಗೂ ಪೊಲೀಸರು ಮನವೊಲಿಸುವಲ್ಲಿ ಯಶಸ್ವಿಯಾದರು.

transpotr-protest-2

ಚಿತ್ರದುರ್ಗ, ಬಳ್ಳಾರಿ, ಚಾಮರಾಜನಗರ, ಕೋಲಾರ,ಬೆಳಗಾವಿ, ಮಂಗಳೂರು ಸೇರಿದಂತೆ ಬಹುತೇಕ ಎಲ್ಲಾ ಕಡೆ ಬಂದ್‍ಗೆ ಬೆಂಬಲ ಸಿಗಲಿಲ್ಲ.
ಹುಬ್ಬಳ್ಳಿಯಲ್ಲಿ ಎಐಟಿಯುಸಿ ಅಧ್ಯಕ್ಷ ರಮೇಶ್ ಪಡತರೆ ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನ ಬಂದ್‍ಗೆ ನಾವು ಬೆಂಬಲ ನೀಡುವುದಿಲ್ಲ. ಸಿಐಟಿಯು ಸಂಘಟನೆ ಏಕಪಕ್ಷೀಯವಾಗಿ ಬಂದ್ ನಿರ್ಧಾರವನ್ನು ಕೈಗೊಂಡಿದೆ. ರಾಷ್ಟ್ರಮಟ್ಟದ ಸಮನ್ವಯ ಸಮಿತಿ ಗಮನಕ್ಕೆ ತರದೆ ಬಂದ್‍ಗೆ ಕರೆ ನೀಡಿದೆ. ಏಕಾಏಕಿ ಸಾರಿಗೆ ಬಂದ್ ಮಾಡಿದ್ದಾರೆ. ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ. ಸಾರಿಗೆ ಸಂಸ್ಥೆಗೆ ನಷ್ಟವುಂಟಾಗುತ್ತದೆ. ಕೇಂದ್ರ ಸರ್ಕಾರದ ನೂತನ ಮೋಟಾರ್ ವಾಹನ ಮಸೂದೆಗೆ ನಮ್ಮ ವಿರೋಧವಿದೆ. ಆ.9 ರಂದು ಎಐಟಿಯುಸಿ ನೇತೃತ್ವದಲ್ಲಿ ಈ ಕುರಿತು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin