ಸಂಪುಟ ವಿಸ್ತರಣೆ ಹಿನ್ನೆಲೆ ದೆಹಲಿಯಲ್ಲಿ ಬೀಡು ಬಿಟ್ಟ ಸಚಿವಾಕಾಂಕ್ಷಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Congress-high-command

ಬೆಂಗಳೂರು, ಆ.7-ಆಷಾಢ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡುವ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಹಲವು ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಿ ಸಚಿವ ಸ್ಥಾನ ಪಡೆಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇದೇ ತಿಂಗಳ 13 ಅಥವಾ 15 ರಂದು ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳು ದೆಹಲಿಗೆ ದೌಡಾಯಿಸಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರ ಭೇಟಿ ಮಾಡುವ ಕಸರತ್ತು ನಡೆಸಿದ್ದಾರೆ.

ಸಚಿವ ರಮೇಶ್ ಜಾರಕಿ ಹೊಳಿ, ಶಾಸಕರಾದ ರಾಜೇಂದ್ರ, ಪ್ರತಾಪ್‍ಗೌಡ ಪಾಟೀಲ್, ರಹೀಮ್‍ಖಾನ್ ಸೇರಿದಂತೆ 8 ಜನ ಶಾಸಕರ ತಂಡ ಈಗಾಗಲೇ ದೆಹಲಿಯಲ್ಲಿದ್ದು, ಉತ್ತರ ಕರ್ನಾಟಕ ಭಾಗಕ್ಕೆ ಎರಡು ಸಚಿವ ಸ್ಥಾನವನ್ನು ನೀಡಲೇಬೇಕು. ಅದರಲ್ಲೂ ನಮ್ಮ ಬೆಂಬಲಿಗರಿಗೆ ಇಬ್ಬರಿಗೆ ಅವಕಾಶ ಕಲ್ಪಿಸಬೇಕೆಂದು ರಮೇಶ್ ಜಾರಕಿ ಹೊಳಿ ಪಟ್ಟುಹಿಡಿದಿದ್ದಾರೆ.

ರಾಹುಲ್‍ಗಾಂಧಿ, ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಪ್ರಯತ್ನ ಇನ್ನೂ ಫಲ ನೀಡಿಲ್ಲ. ಇತ್ತ ಮಾಜಿ ಸಚಿವ ಎಂ.ಬಿ.ಪಾಟೀಲ್ ಈ ಬಾರಿ ಶತಾಯಗತಾಯ ಸಂಪುಟಕ್ಕೆ ಸೇರಲೇಬೇಕೆಂದು ತಮ್ಮ ಪ್ರಯತ್ನ ಮುಂದುವರೆಸಿ ದೆಹಲಿಗೆ ತೆರಳಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಈವರೆಗೆ ಯಾವುದೇ ಆಕಾಂಕ್ಷಿಗಳನ್ನು ಕರೆದು ಮಾತುಕತೆ ನಡೆಸಿಲ್ಲ. ಉತ್ತರ ಕರ್ನಾಟಕ ಭಾಗದವರಿಗೆ ಅನ್ಯಾಯವಾಗಿದ್ದು, ಈ ಬಾರಿ ಅವರಿಗೇ ಹೆಚ್ಚು ಆದ್ಯತೆ ನೀಡಬೇಕೆಂಬ ಒತ್ತಾಯ ಹೆಚ್ಚಾಗಿದೆ. ಹಾಗಾಗಿ ಆ ಭಾಗದ ಶಾಸಕರು ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಇತ್ತ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್ ಸೇರಿದಂತೆ ಅನೇಕರು ಮೊಗಮ್ ಆಗಿದ್ದು, ಪಕ್ಷದ ಆದೇಶಕ್ಕೆ ಕಾಯುತ್ತಿದ್ದಾರೆ. ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ, ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬುದನ್ನು ಕಾದುನೋಡಬೇಕು.

Facebook Comments

Sri Raghav

Admin