ಸರ್ಕಾರಿ ಹುದ್ದೆಗಳ ನೇಮಕಾತಿ ವಯೋಮಿತಿ ಹೆಚ್ಚಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Govt-Job--01

ಬೆಂಗಳೂರು, ಆ.8- ಸರ್ಕಾರಿ ಹುದ್ದೆಗಳ ನೇಮಕಾತಿ ವಯೋಮಿತಿಯನ್ನು ಹೆಚ್ಚಳ ಮಾಡುವಂತೆ ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಹಿತರಕ್ಷಣಾ ವೇದಿಕೆ ಮನವಿ ಮಾಡಿಕೊಂಡಿದೆ. ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಹರಿಯಾಣದಲ್ಲಿ ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ ವಯೋಮಾನ 42 ರಿಂದ 44 ವರ್ಷಗಳಾಗಿದ್ದು, ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ವಯೋಮಾನ ಹೆಚ್ಚಳ ಮಾಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ವೇದಿಕೆ ಅಧ್ಯಕ್ಷ ಸಂತೋಷ್‍ಕುಮಾರ್ ತಿಳಿಸಿದ್ದಾರೆ.

ಈ ಹಿಂದೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಮತ್ತೆ ಹೋರಾಟ ಅನಿವಾರ್ಯವಾಗಿದೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು. ನಮ್ಮ ನ್ಯಾಯಯುತ ಬೇಡಿಕೆಗೆ ಈ ಸರ್ಕಾರದಲ್ಲೂ ನ್ಯಾಯ ಸಿಗದಿದ್ದರೆ ಉಗ್ರ ಹೋರಾಟಕ್ಕಿಳಿಯುವುದು ಅನಿವಾರ್ಯ ಎನ್ನುತ್ತಾರೆ ಅವರು.

ಹಿಂದುಳಿದ ಪ್ರದೇಶವಾಗಿರುವ ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಿಗೆ ಸಂವಿಧಾನ ತಿದ್ದುಪಡಿ ತರುವ ಮೂಲಕ ವಿದ್ಯಾಭ್ಯಾಸ ಮತ್ತು ಸರ್ಕಾರಿ ಹುದ್ದೆಯಲ್ಲಿ ಮೀಸಲಾತಿ ಕಲ್ಪಿಸಲು ಮತ್ತು ಕಾರ್ಯರೂಪಕ್ಕೆ ತರಲು 2012ರಿಂದ 2015ರ ವರೆಗೆ ರಾಜ್ಯ ಸರ್ಕಾರ ಯಾವುದೇ ನೇಮಕಾತಿ ಆದೇಶ ಹೊರಡಿಸಿರಲಿಲ್ಲ.

ಈ ಮೂರು ವರ್ಷಗಳಲ್ಲಿ ಯಾವುದೇ ನೇಮಕಾತಿಯಾಗದಿರುವ ಹಿನ್ನೆಲೆಯಲ್ಲಿ ಹಲವಾರು ಯುವಕರಿಗೆ ಅನ್ಯಾಯವಾಗಿದೆ. ಹೀಗಾಗಿ ವಯೋಮಿತಿ ಮೀರಿರುವ ನಿರುದ್ಯೋಗಿ ಯುವಕರಿಗೆ ನ್ಯಾಯ ಒದಗಿಸಲು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮಾದರಿಯಲ್ಲಿ ಗರಿಷ್ಠ ವಯೋಮಿತಿಯನ್ನು 43 ರಿಂದ 44ಕ್ಕೆ ಹೆಚ್ಚಳ ಮಾಡಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ ಎಂದರು.

ನಿರುದ್ಯೋಗ ಯುವಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ವಯೋಮಾನವನ್ನು 44 ವರ್ಷಗಳಿಗೆ ಹೆಚ್ಚಳ ಮಾಡಿದರೆ ಇದರಿಂದ ಸುಮಾರು 7 ರಿಂದ 8 ಲಕ್ಷ ನಿರುದ್ಯೋಗಿಗಳಿಗೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ. ಹೀಗಾಗಿ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವತ್ತ ಗಮನ ಹರಿಸಬೇಕು ಎಂದು ವೇದಿಕೆ ಪದಾಧಿಕಾರಿಗಳಾದ ಹರೀಶ್, ರಘು, ರಾಕೇಶ್, ಮಹದೇವ್, ಜೀವನ್‍ಕುಮಾರ್, ಕೃಷ್ಣ ಮತ್ತಿತರರು ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin