ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಎನ್‍ಡಿಎಗೆ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Venkaiah-Naidu--01

ನವದೆಹಲಿ, ಆ.9-ಎನ್‍ಡಿಎ ಅಭ್ಯರ್ಥಿ ಹಾಗೂ ಸಂಯುಕ್ತ ಜನತಾದಳ (ಜೆಡಿಯು)ದ ಹಿರಿಯ ನಾಯಕ ಹರಿವಂಶ ನಾರಾಯಣ್‍ಸಿಂಗ್ ರಾಜ್ಯಸಭೆಯ ಉಪಸಭಾಪತಿಯಾಗಿ ಇಂದು ಜಯ ಸಾಧಿಸಿದ್ದಾರೆ.  ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಹರಿವಂಶ ನಾರಾಯಣ್‍ಸಿಂಗ್, ಯುಪಿಎ ಅಭ್ಯರ್ಥಿ, ಕನ್ನಡಿಗ ಬಿ.ಕೆ.ಹರಿಪ್ರಸಾದ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

ಒಟ್ಟು ಹಾಜರಿದ್ದ ಸದಸ್ಯರ ಪೈಕಿ 125 ಮತಗಳನ್ನು ಪಡೆದು ಹರಿವಂಶ್ ನಾರಾಯಣಸಿಂಗ್ ಆಯ್ಕೆಯಾದರೆ, ಹರಿಪ್ರಸಾದ್ ಅವರಿಗೆ 105 ಮತಗಳು ಲಭಿಸಿತು. ಇಂದು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿಯಾಗಿರುವ ವೆಂಕಯ್ಯನಾಯ್ಡು ಅವರ ನೇತೃತ್ವದಲ್ಲಿ ನಡೆದ ಮತದಾನದಲ್ಲಿ ಆಡಳಿತಾರೂಢ ಎನ್‍ಡಿಎ ಜಯ ಸಾಧಿಸಿದೆ. ಈ ಮೂಲಕ ಮತ್ತೆ ಕಾಂಗ್ರೆಸ್‍ಗೆ ಹಿನ್ನಡೆಯಾಗಿದ್ದು, ಮೈತ್ರಿ ಕೂಟ ರಚನೆ ಮೇಲೆ ಕರಾಳ ಛಾಯೆ ಆವರಿಸಿದೆ.

ಸಂಸತ್‍ನ ಮೇಲ್ಮನೆಯ 232 ಸದಸ್ಯರಲ್ಲಿ ಇಬ್ಬರು ಇಂದು ಮತದಾನಕ್ಕೆ ಗೈರು ಹಾಜರಾಗಿದ್ದರು. ಇಂದು ಬೆಳಗ್ಗೆ 11.30ರಲ್ಲಿ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ ವೆಂಕಯ್ಯನಾಯ್ಡು ಅವರು, ಮತದಾನ ಮಾಡುವಂತೆ ಸದಸ್ಯರಿಗೆ ಸೂಚಿಸಿದರು. ನಂತರ ಸದಸ್ಯರು ಧ್ವನಿ ಮತದ ಮೂಲಕ ತಮ್ಮ ಹಕ್ಕುಗಳನ್ನು ಚಲಾಯಿಸಿದರು. ಹರಿವಂಶ್ ನಾರಾಯಣ್‍ಸಿಂಗ್ ಅವರಿಗೆ 125 ಹಾಗೂ ಬಿ.ಕೆ.ಹರಿಪ್ರಸಾದ್ ಅವರಿಗೆ 105 ಮತಗಳು ಲಭಿಸಿದವು.

ಎನ್‍ಡಿಎ ಅಭ್ಯರ್ಥಿ ಪರವಾಗಿ ಬಿಜೆಪಿ ಸೇರಿದಂತೆ ಶಿವಸೇನೆ, ಅಕಾಲಿ ದಳ, ಎಐಎಡಿಎಂಕೆ, ಟಿಆರ್‍ಎಸ್ ಹಾಗೂ ಇನ್ನಿತರ ಮಿತ್ರ ಪಕ್ಷಗಳು ಮತ ಚಲಾಯಿಸಿದವು. ಕಾಂಗ್ರೆಸ್ ಸೇರಿದಂತೆ ಟಿಎಂಸಿ, ಟಿಎಂಕೆ, ಎನ್‍ಸಿಪಿ, ಎಸ್‍ಪಿ, ಬಿಎಸ್‍ಪಿ, ಟಿಡಿಪಿ ಎಡಪಕ್ಷಗಳು ಮತ್ತಿತರ ಸಮಾನ ಮನಸ್ಕ ಪಕ್ಷಗಳು ಹರಿಪ್ರಸಾದ್ ಪರ ಮತದಾನ ಮಾಡಿದರು.

ಬಳಿಕ ಸಭಾಪತಿ ಹರಿವಂಶ್ ನಾರಾಯಣ್‍ಸಿಂಗ್ ಅವರು ಉಪಸಭಾಪತಿಯಾಗಿ ವಿಜಯಿ ಆಗಿದ್ದಾರೆಂದು ಅಧಿಕೃತವಾಗಿ ಘೋಷಿಸಿದರು. ನೂತನ ಸಭಾಪತಿ ಹರಿವಂಶ್ ನಾರಾಯಣ್‍ಸಿಂಗ್ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ,ಸಭಾಪತಿ ವೆಂಕಯ್ಯ ನಾಯ್ಡು ಸೇರಿದಂತೆ ಬಿಜೆಪಿ ಮಿತ್ರ ಪಕ್ಷದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಜು.1 ರಂದು ಪಿ.ಜೆ.ಕುರಿಯನ್ ನಿವೃತ್ತರಾದಾಗಿನಿಂದ ಉಪಸಭಾಪತಿ ಹುದ್ದೆ ಖಾಲಿಯಿತ್ತು.

Facebook Comments

Sri Raghav

Admin