ಎನ್‌ಆರ್‌ಸಿ : ರಾಷ್ಟ್ರಪತಿಗೆ ದೇವೇಗೌಡರೂ ಸೇರಿ 12 ಸಂಸದರ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

NRC--01

ನವದೆಹಲಿ, ಆ.9-ಈಶಾನ್ಯ ರಾಜ್ಯ ಅಸ್ಸಾಂನಲ್ಲಿನ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ಆರ್‍ಸಿ) ಪಟ್ಟಿಯಲ್ಲಿ ಯಾವೊಬ್ಬ ಭಾರತೀಯನ ಹೆಸರೂ ಕೂಡ ಬಿಟ್ಟು ಹೋಗಬಾರದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸೇರಿದಂತೆ ವಿವಿಧ ಪಕ್ಷಗಳ 12 ಸಂಸದರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಲ್ಲಿ ಮನವಿ ಮಾಡಿದ್ದಾರೆ.

ಎನ್‍ಆರ್‍ಸಿಯಲ್ಲಿ ಅಸ್ಸಾಂನ 40 ಲಕ್ಷಕ್ಕೂ ಹೆಚ್ಚು ಜನರ ಹೆಸರು ಕೈಬಿಟ್ಟು ಹೋಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ದೇವೇಗೌಡರು, ನ್ಯಾಷನಲ್ ಕಾನ್ಫರೆನ್ಸ್‍ನ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್‍ನ ಆನಂದ್ ಶರ್ಮ, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ತೆಲುಗು ದೇಶಂ ಪಾರ್ಟಿಯ ವೈ.ಎಸ್.ಚೌಧರಿ, ರಾಷ್ಟ್ರೀಯ ಜನತಾ ದಳದ ಮಿಸಾ ಭಾರತಿ, ಎನ್‍ಸಿಪಿಯ ಸುಪ್ರಿಯಾ ಸುಲೆ, ಡಿಎಂಕೆಯ ತಿರುಚಿ ಶಿವ, ಬಿಎಸ್‍ಪಿಯ ಸತೀಶ್ ಚಂದ್ರ ಮಿಶ್ರಾ, ಎಎಪಿಯ ಸಂಜಯ್ ಸಿಂಗ್, ಎಐಟಿಸಿಯ ಸುದೀಪ್ ಬಂಡೋಪಾಧ್ಯಾಯ ಹಾಗೂ ಟಿಎಂಸಿಯ ಡೆರೆಕ್ ಓಬ್ರಿಯಾನ್ ಅವರು ರಾಷ್ಟ್ರಪತಿ ಅವರಿಗೆ ಮನವಿ ಪತ್ರವೊಂದನ್ನು ಬರೆದಿದ್ದಾರೆ.

ಎನ್‍ಆರ್‍ಸಿ ಪಟ್ಟಿಯಲ್ಲಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ನಿವಾಸಿಗಳೂ ಸೇರಿದಂತೆ ಅಸ್ಸಾಂನಲ್ಲಿ ನೆಲೆಸಿರುವ ವಿವಿಧ ಪ್ರಾಂತ್ಯಗಳ ಜನರ ಹೆಸರುಗಳು ಬಿಟ್ಟು ಹೋಗಿವೆ. ವೀರ ಯೋಧರು, ಮಾಜಿ ರಾಷ್ಟ್ರಪತಿ ಅವರ ಹತ್ತಿರದ ಸಂಬಂಧಿಕರು, ಒಬ್ಬರು ಮಾಜಿ ಮುಖ್ಯಮಂತ್ರಿ, ಚುನಾಯಿತ ಪ್ರತಿನಿಧಿಗಳು, ವಿವಿಧ ವರ್ಗಗಳ ಖ್ಯಾತನಾಮರು ಹಾಗೂ ಬಡವರು ಮತ್ತು ಸಮಾಜದ ಸೂಕ್ಷ್ಮ ವರ್ಗದವರ ಹೆಸರುಗಳೂ ನಾಪತ್ತೆಯಾಗಿವೆ. ಈ ಬಗ್ಗೆ ಸುಪ್ರೀಂಕೋರ್ಟ್ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು 12 ಸಂಸದರು ತಿಳಿಸಿದ್ದಾರೆ.  ಇದು ಕೇಂದ್ರ ಸರ್ಕಾರದಿಂದ ದೇಶದ ಸಂವಿಧಾನ, ಸಂಸತ್, ನ್ಯಾಯಾಂಗ ಮತ್ತು ಮಾಧ್ಯಮ ಪಾವಿತ್ರ್ಯತೆಗೆ ಭಂಗ ತರುವ ಯತ್ನವಾಗಿದೆ ಎಂದು ಆವರು ಆರೋಪಿಸಿದ್ದಾರೆ.

Facebook Comments

Sri Raghav

Admin