ಲೋಕಲ್ ಫೈಟ್’ನಲ್ಲಿ ಜೆಡಿಎಸ್ ಜೊತೆ ಮೈತ್ರಿ ಇಲ್ಲ : ಡಿಸಿಎಂ ಪರಂ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-and-Parameshwar
ಮಂಗಳೂರು, ಆ.10-ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಯಾವುದೇ ಅಧಿಕೃತ ಮೈತ್ರಿ ಇಲ್ಲ. ಆದರೆ ಅಗತ್ಯವಿರುವೆಡೆ ಪರಸ್ಪರ ಸಹಕಾರವಿರುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳದಿದ್ದರೂ ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಸಹಕಾರದಲ್ಲಿ ತೊಡಗಿಕೊಳ್ಳಬಹುದು ಎಂದು ಹೇಳಿದರು.

ಉತ್ತಮ ಆಡಳಿತ ನೀಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ಅದರಲ್ಲಿ ನಾವು ಯಶಸ್ವಿಯಾಗುತ್ತೇವೆ. ಭಾರತೀಯ ಜನತಾ ಪಕ್ಷದಂತಹ ಭ್ರಷ್ಟ ಆಡಳಿತ ನಮ್ಮದಲ್ಲ, ಬಿಜೆಪಿ ಕಾಲದ ಭ್ರಷ್ಟಾಚಾರ ಪುನರಾವರ್ತನೆಯಾಗಬಾರದು ಎಂದು ಪರಮೇಶ್ವರ್ ತಿಳಿಸಿದರು.

ಹಿಂದಿನ ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ಮುಂದುವರಿಕೆಯಾಗಿವೆ. ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಸರ್ಕಾರ ರೈತ ಸಾಲ ಮನ್ನಾ ಮಾಡಿದೆ. 2017-18ರಲ್ಲಿ 12 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆತ್ಮಹತ್ಯೆ ಪ್ರಕರಣಗಳಿಗೆ ಸರ್ಕಾರ ಸ್ಪಂದಿಸಬೇಕಿದೆ. ಅದಕ್ಕಾಗಿಯೇ ನಾವು 46 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ರೈತರ ಹಿತ ಬೇಕಾಗಿಲ್ಲ. ಅವರು ಕೃಷಿಕರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು. ಹಿಂದೂಗಳನ್ನು ಕಡೆಗಣಿಸಿದ್ದರಿಂದ ಕಾಂಗ್ರೆಸ್‍ಗೆ ಸೋಲುಂಟಾಯಿತು ಎಂದು ಜೆಡಿಎಸ್ ಮುಖಂಡ ಬೋಜೇಗೌಡ ನೀಡಿರುವ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ನಾವೇಕೆ ಒಪ್ಪಬೇಕು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪರಮೇಶ್ವರ್ ಉತ್ತರಿಸಿದರು. ನಮ್ಮ ಪಕ್ಷ ಏಕೆ ಸೋತಿದೆ ಎಂಬುದನ್ನು ನಾವು ವಿಶ್ಲೇಷಣೆ ಮಾಡುತ್ತೇವೆ. ಬೋಜೇಗೌಡರ ಹೇಳಿಕೆಯನ್ನು ನಾವು ಒಪ್ಪಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳಿದರು.

Facebook Comments

Sri Raghav

Admin