ಕಾರ್ಪೊರೇಟರ್ ಗಾಯತ್ರಿ ಸದಸ್ಯತ್ವಕ್ಕೆ ಕುತ್ತು ತಂದ ನಕಲಿ ಜಾತಿ ಪ್ರಮಾಣ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

Gayatri--01

ಬೆಂಗಳೂರು, ಆ.10-ಕೆ.ಪಿ.ಅಗ್ರಹಾರ ಕಾರ್ಪೊರೇಟರ್ ಗಾಯತ್ರಿ ಸಲ್ಲಿಸಿರುವ ಜಾತಿ ಪ್ರಮಾಣ ಪತ್ರ ನಕಲಿ ಎಂದು ಜಿಲ್ಲಾಧಿಕಾರಿಗಳು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅವರ ಸದಸ್ಯತ್ವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ. ಜಿಲ್ಲಾ ಜಾತಿ ಪ್ರಮಾಣ ಪತ್ರ ಪರಿಶೀಲನಾ ಸಮಿತಿಯಿಂದ ಕೂಲಂಕಷವಾಗಿ ಪರಿಶೀಲನೆ ನಡೆಸಿ ಅವರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಹೊರಬಿದ್ದಿದ್ದು, ಎಂ.ಗಾಯತ್ರಿ ಅವರ ಬಿಬಿಎಂಪಿ ಸದಸ್ಯತ್ವದ ನೆತ್ತಿಯ ಮೇಲೆ ತೂಗುಗತ್ತಿಯಾಡತೊಡಗಿದೆ.

ನಾಯಕ ಎಂಬ ನಕಲಿ ಜಾತಿಪ್ರಮಾಣ ಪತ್ರ ಬಳಸಿ ಗಾಯತ್ರಿ ಅವರು ಬಿಬಿಎಂಪಿ ಚುನಾವಣೆಯಲ್ಲಿ ಜಯಗಳಿಸಿದ್ದರು ಎಂದು ಆರೋಪಿಸಲಾಗಿತ್ತು. ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡದಿದ್ದರೂ ದಾಖಲೆ ತಿದ್ದಲಾಗಿದೆ.5ನೇ ತರಗತಿ ಡಿಸ್ ಕಂಟಿನ್ಯೂ ಎಂದು ಶಾಲಾ ದಾಖಲಾತಿಯಲ್ಲಿದೆ. ಆದರೆ ವರ್ಗಾವಣೆ ಪತ್ರ ನೀಡುವಾಗ 5ನೇ ತರಗತಿ ಉತ್ತೀರ್ಣ ಎಂದು ನಮೂದಿಸಲಾಗಿದೆ. ಈ ವಿದ್ಯಾಸಂಸ್ಥೆ ನಾಯಕ ಪ್ರಮಾಣಪತ್ರ ಪಡೆಯಲು ಕೂಡ ಸಹಕರಿಸಿದೆ ಎಂದು ಪರಿಶೀಲನೆ ವೇಳೆಯಲ್ಲಿ ತಿಳಿದುಬಂದಿದೆ.

ಶಾಲಾ ದಾಖಲೆಯಲ್ಲಿ ತಂದೆ ಹೆಸರು ನಾಗರಾಜ್ ಎಂದು ನಮೂದಿಸಲಾಗಿದೆ. ಆದರೆ ವರ್ಗಾವಣೆ ಪತ್ರ ನೀಡುವಾಗ ಪೋಷಕರು ನಾಗರಾಜ್ ಎಂದು ನೀಡಲಾಗಿದೆ. ಗಾಯತ್ರಿಯವರ ವರ್ಷವಾರು ಶೈಕ್ಷಣಿಕ ಪ್ರಗತಿ ಬಗ್ಗೆ ಯಾವುದೇ ದಾಖಲೆ ಇಲ್ಲ. ದಾಖಲಾತಿಯಲ್ಲಿ ಇತ್ತೀಚೆಗೆ ಗಾಯತ್ರಿ ಹೆಸರು ಸೇರ್ಪಡೆಗೊಳಿಸಿರುವುದು ಶಾಯಿ ಬದಲಾವಣೆಯಿಂದ ತಿಳಿದುಬಂದಿದೆ ಎಂದು ಬಿಇಒ ಅವರು ವರದಿ ನೀಡಿದ್ದಾರೆ.  ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐ ಕೂಲಂಕಷವಾಗಿ ಪರಿಶೀಲಿಸಿದ ವೇಳೆ ಈ ಎಲ್ಲಾ ಅಕ್ರಮಗಳು ಪತ್ತೆಯಾಗಿವೆ. ಈ ಎಲ್ಲಾ ವರದಿಗಳನ್ನು ಗಮನಿಸಿ ಜಿಲ್ಲಾಧಿಕಾರಿ ಅವರು ಎಂ.ಗಾಯತ್ರಿ ಅವರು ನೀಡಿರುವ ನಾಯಕ ಜಾತಿ ಪ್ರಮಾಣ ಪತ್ರ ನಕಲಿ ಎಂದು ಪರಿಗಣಿಸಿ ಅದನ್ನು ರದ್ದುಗೊಳಿಸಿದ್ದಾರೆ.

ಮೇಲ್ಮನವಿ ಸಲ್ಲಿಕೆ:
ಜಿಲ್ಲಾಧಿಕಾರಿಯವರ ಆದೇಶ ಪ್ರಶ್ನಿಸಿ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಪಾಲಿಕೆ ಸದಸ್ಯರಾದ ಗಾಯತ್ರಿ ತಿಳಿಸಿದ್ದಾರೆ. ನನ್ನ ಅಜ್ಜಿ ನನ್ನನ್ನು ಸಾಕಿದ್ದು, ನನ್ನ ಅಪ್ಪ-ಅಮ್ಮ ಯಾರು ಎಂಬುದು ಗೊತ್ತಿಲ್ಲ. ನಾವು ನಾಯಕ ಜನಾಂಗದವರೆಂದೇ ಅಜ್ಜಿ ಶಾಲೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ನನ್ನ ಪತಿ ನಾಯ್ಡು. ಆದರೆ ನನ್ನ ತವರು ಜಾತಿ ಹೋಗಲ್ಲ. ನಾವೇನು ಸುಳ್ಳು ಹೇಳಿಲ್ಲ. ಕಾಂಗ್ರೆಸ್ ಸ್ಥಳೀಯ ಮುಖಂಡರ ಕುತಂತ್ರದಿಂದ ಈ ಆರೋಪ ಕೇಳಿ ಬರುತ್ತಿದೆ. ಶಾಲೆಯಲ್ಲಿ ಪೋಷಕರು ನೀಡಿರುವ ದಾಖಲೆ ಅನ್ವಯ ಜಾತಿ ಪ್ರಮಾಣ ಪತ್ರ ನೀಡಿರುತ್ತಾರೆ. ನಾನು ಮೂರು ವರ್ಷದಿಂದ ಕೋರ್ಟ್‍ಗೆ ಅಲೆಯುತ್ತಿದ್ದೇನೆ. ರಾಜಕೀಯ ದ್ವೇಷದಿಂದ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ನಗರ ಜಿಲ್ಲಾಧಿಕಾರಿಗಳ ಆದೇಶ, ರಾಜಕೀಯ ಒತ್ತಡದಿಂದ ಆಗಿರುವ ಆದೇಶ ಎಂದು ಗಾಯತ್ರಿ ದೂರಿದ್ದಾರೆ.

Facebook Comments

Sri Raghav

Admin