ಉಕ್ಕಿ ಹರಿಯುತ್ತಿರುವ ಕಪಿಲಾ ನದಿ । ಸೇತುವೆಗಳು ಮುಳುಗಡೆ । ಮೈಸೂರು-ಊಟಿ ರಸ್ತೆ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

Ooty--01
ನಂಜನಗೂಡು, ಆ.10- ಕೇರಳದ ವೈನಾಡಿನಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕಬಿನಿ ಜಲಾಶಯ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ತಲುಪುತ್ತಿದ್ದಂತೆ ಸುಮಾರು 75 ಸಾವಿರದಿಂದ 1 ಲಕ್ಷ ಕ್ಯೂಸೆಕ್‍ನೀರನ್ನು ಕಪಿಲಾ ನದಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ಕಪಿಲಾ ನದಿಯೂ ಉಕ್ಕಿ ಹರಿಯುತ್ತಿದ್ದು , ನದಿ ಪಾತ್ರದ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ.ಊಟಿ-ಮೈಸೂರು ರಸ್ತೆ ಬಂದ್ ಆಗಿದೆ. ಮೈಸೂರು-ಸುತ್ತೂರು ಸಂಪರ್ಕ ತಾತ್ಕಾಲಿಕ ಸ್ಥಗಿತಗೊಂಡಿದೆ. ನಗರ್ಲೆ ಸೇರಿದಂತೆ ಹಲವು ಸೇತುವೆಗಳು ಮುಳುಗಡೆಯಾಗಿವೆ. ಆದ್ದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಕಪಿಲಾ ನದಿಯೂ ಉಕ್ಕಿ ಹರಿಯುತ್ತಿರುವುದರಿಂದ ಇಲ್ಲಿನ ತಗ್ಗು ಪ್ರದೇಶಗಳಾದ ಮುಡಿಕಟ್ಟೆ, ಪರಶುರಾಮರ ದೇವಸ್ಥಾನ, ಹಳ್ಳದ ಕೇರಿಯ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು ಕಪಿಲಾ ನದಿಯ ಆಜುಬಾಜು ಮತ್ತು ತಗ್ಗು ಪ್ರದೇಶಗಳ ಸಮೀಪ ಸಾರ್ವಜನಿಕರು ಯಾರೂ ಪ್ರವೇಶಿಸದಂತೆ ಹೈ ಅಲರ್ಟ್ ಘೋಷಿಸಲಾಗಿದೆ. ಇಲ್ಲಿನ ಗಿರಿಜಾ ಕಲ್ಯಾಣ ಮಂದಿರದಲ್ಲಿ ತಾತ್ಕಾಲಿಕ ಗಂಜಿ ಕೇಂದ್ರಗಳನ್ನು ತೆರೆದಿದ್ದು, ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ದಯಾನಂದ್ ತಿಳಿಸಿದ್ದಾರೆ.

ಶಾಸಕ ಬಿ.ಹರ್ಷವರ್ಧನ್ ತುಂಬಿ ಹರಿಯುತ್ತಿರುವ ಕಪಿಲಾ ನದಿಗೆ ಭೇಟಿ ನೀಡಿ ಇದೇ ಸಂದರ್ಭದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿ ಕೈಗೊಳ್ಳಬೇಕಾದ ರಕ್ಷಣೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಗತ್ಯ ಬಿದ್ದರೆ ರಾಜ್ಯದಿಂದ ಸುಮಾರು 35 ಮಂದಿ ಈಜು ಪರಿಣಿತರನ್ನು ಹಾಗೂ ಸಲಕರಣೆಗಳನ್ನು ತಂದು ಇಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.  ಸುಮಾರು 15 ವರ್ಷಗಳ ಹಿಂದೆ ಈ ಪ್ರಮಾಣದ ತುಂಬಿರುವ ಕಪಿಲಾ ನದಿಯನ್ನು ಕಾಣಬಹುದಾಗಿತ್ತೆಂದು ಇಲ್ಲಿನ ಹಿರಿಯರ ಅಭಿಪ್ರಾಯವಾಗಿದೆ.

Facebook Comments

Sri Raghav

Admin