ಭತ್ತ ನಾಟಿ ಮಾಡುವ ಹಿಂದೆ ರಾಜಕೀಯ ಉದ್ದೇಶವಿಲ್ಲ : ಸಿಎಂ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--0001

ಮೈಸೂರು, ಆ.11- ರಾಜಕೀಯ ಉದ್ದೇಶದಿಂದ ಮಂಡ್ಯದಲ್ಲಿ ಭತ್ತ ನಾಟಿ ಮಾಡುತ್ತಿಲ್ಲ. ರಾಜ್ಯದ ರೈತರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದು, ಬಿಜೆಪಿಯವರ ಯಾವುದೇ ಟೀಕೆಗೆ ಉತ್ತರ ಕೊಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಟೀಕೆಗೆ ಜನರೇ ಉತ್ತರ ಕೊಡುತ್ತಾರೆ. ಮಂಡ್ಯದಲ್ಲಿ ಭತ್ತ ನಾಟಿ ಮಾಡುವ ವಿಚಾರದ ಬಗ್ಗೆ ಬಿಜೆಪಿಯವರು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ತಾವು ರೈತ ಕುಟುಂಬದಲ್ಲಿ ಜನಿಸಿದ್ದು, ರೈತರೊಂದಿಗೆ ಬೆಳೆದಿದ್ದೇನೆ. ಭತ್ತ ನಾಟಿ ಮಾಡುವುದು ನನಗೆ ಹೊಸದಲ್ಲ ಎಂದು ಸ್ಪಷ್ಟಪಡಿಸಿದರು.

ಆಂಧ್ರಕ್ಕೆ ಭೇಟಿ:
ನೆರೆಯ ಆಂಧ್ರಪ್ರದೇಶದಲ್ಲಿ ಅಜಿಂಪ್ರೇಮ್‍ಜಿ ಪ್ರತಿಷ್ಟಾನದಿಂದ ಶೂನ್ಯ ವೆಚ್ಚದಲ್ಲಿ ನೈಸಗಿರ್ಕ ಬೇಸಾಯವನ್ನು ಆರಂಭಿಸಿದ್ದಾರೆ. ವೀಕ್ಷಣೆಗೆ ಆಗಮಿಸುವಂತೆ ಪ್ರತಿಷ್ಠಾನದಿಂದ ಆಹ್ವಾನ ಬಂದಿದ್ದು, ಸದ್ಯದಲ್ಲೇ ಅಲ್ಲಿಗೆ ಭೇಟಿ ನೀಡಿ ನೈಸರ್ಗಿಕ ಕೃಷಿಯನ್ನು ಪರಿಶೀಲಿಸುವುದಾಗಿ ಹೇಳಿದರು.

ಮಳೆ ಅಭಾವದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮೂರ್ನಾಲ್ಕು ವರ್ಷಗಳಿಂದ ಭತ್ತ ನಾಟಿ ಮಾಡಿರಲಿಲ್ಲ. ಈ ಬಾರಿ ಉತ್ತಮವಾದ ಮಳೆಯಾಗಿರುವುದರಿಂದ ರೈತರಲ್ಲಿ ಭತ್ತ ನಾಟಿ ಮಾಡುವ ಉತ್ಸಾಹ ತುಂಬಲು ಖುದ್ದಾಗಿ ನಾನೇ ನಾಟಿ ಮಾಡುತ್ತಿರುವುದಾಗಿ ಹೇಳಿದರು. ರಾಜ್ಯಾದ್ಯಂತ ಹೆಚ್ಚಿನ ಮಳೆಯಾಗಿದ್ದು, ಕೆಲವೆಡೆ ಪ್ರವಾಹದಿಂದ ಉಂಟಾಗಿರುವ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ವೆಚ್ಚದ ಬಗ್ಗೆ ಚಿಂತಿಸದೆ ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಾಡಿದ ಖರ್ಚು, ವೆಚ್ಚದ ಬಗ್ಗೆ ನಂತರ ಸರ್ಕಾರಕ್ಕೆ ವರದಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಮಸ್ಯೆಗೆ ಸಿಲುಕಿದವರನ್ನು ರಕ್ಷಿಸುವ ಕೆಲಸವನ್ನು ಮೊದಲು ಮಾಡಬೇಕು. ಪ್ರತಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಐದು ಕೋಟಿರೂ.ಗೂ ಅಧಿಕ ಹಣವಿದೆ. ಪ್ರಕೃತಿ ವಿಕೋಪದಿಂದ ಉಂಟಾಗುವ ತೊಂದರೆ ನಿವಾರಣೆಗೆ ಅಗತ್ಯ ಹಣ ಖರ್ಚು ಮಾಡಿ ಸಂಕಷ್ಟದಿಂದ ಜನರನ್ನು ಪಾರುಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಮಳೆ ಹಾನಿ ಸಮಸ್ಯೆ ಪರಿಹಾರಕ್ಕೆ ಹಣದ ಕೊರತೆ ಉಂಟಾಗುತ್ತಿಲ್ಲ. ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಮಾರೋಪಾದಿಯಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಕೊಡಗು ಜಿಲ್ಲೆಗೆ 100ಕೋಟಿ ರೂ. ನೀಡುವುದಾಗಿ ಘೋಷಿಸಲಾಗಿತ್ತು. ಮೊದಲ ಹಂತದಲ್ಲೇ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮಳೆ ಮುಂದುವರೆದಿರುವುದರಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಸೇರಿದಂತೆ ಮತ್ತಿತರ ಮುಖಂಡರು ಹಾಜರಿದ್ದರು.

Facebook Comments

Sri Raghav

Admin