ದೆಹಲಿಯ ‘ಸ್ವಾಟ್’ ಪೊಲೀಸ್ ಟೀಮ್ ಸೇರಿದ 36 ‘ಹೆಣ್ಣು ಹುಲಿಗಳು’, ದೇಶದಲ್ಲೇ ಇದೇ ಮೊದಲು..!

ಈ ಸುದ್ದಿಯನ್ನು ಶೇರ್ ಮಾಡಿ

Delhi-Police--01
ನವದೆಹಲಿ, ಆ.11-ರಾಜಧಾನಿ ದೆಹಲಿ ಪೊಲೀಸ್ ಇಲಾಖೆ ಭಯೋತ್ಪಾದಕರ ವಿರುದ್ಧ ಸೆಣಸುವ ವಿಶೇಷ ಶಸ್ತ್ರಾಸ್ತ್ರಗಳು ಮತ್ತು ಕಾರ್ಯತಂತ್ರಗಳ(ಸ್ವಾಟ್) ತಂಡಕ್ಕೆ 36 ಮಹಿಳಾ ಕಮಾಂಡೋಗಳನ್ನು ಸೇರಿಸಿಕೊಂಡಿದೆ. ಇದರೊಂದಿಗೆ ಸರ್ವ ಮಹಿಳಾ ತಂಡ ಹೊಂದಿರುವ ದೇಶದ ಪ್ರಥಮ ಸ್ವಾಟ್ ಪಡೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಸ್ವಾಟ್‍ಗೆ 36 ಮಹಿಳೆಯರ ಸೇರ್ಪಡೆ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು. ಈ ತಂಡವು ಭಯೋತ್ಪಾದನೆ ನಿಗ್ರಹದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸ್ವಾತಂತ್ರ ದಿನಾಚರಣೆಗೆ ಮುನ್ನ ರಾಜಧಾನಿ ದೆಹಲಿ ಸೂಕ್ಷ್ಮ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಈ ತಂಡವನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

ಈ 36 ಮಹಿಳಾ ಸ್ವಾಟ್ ಕಮಾಂಡೋಗಳು 15 ತಿಂಗಳ ಕಾಲ ಕಠಿಣ ತರಬೇತಿ ಪಡೆದಿದ್ದಾರೆ. ರಾಷ್ಟ್ರೀಯ ಭದ್ರತಾ ಗಾರ್ಡ್‍ಗಳ(ಎನ್‍ಎಸ್‍ಜಿ) ನುರಿತ ತರಬೇತುದಾರರೊಂದಿಗೆ ಭಯೋತ್ಪಾದನೆ ದಮನ ಕಾರ್ಯಾಚರಣೆಯಲ್ಲಿ ವಿಶೇಷ ತರಬೇತಿ ಹೊಂದಿದ್ದಾರೆ. ವಿಶೇಷ ಕೋಶ ಘಟಕದ ಅಧಿ ಉಗ್ರಗಾಮಿ ನಿಗ್ರಹ ಕರ್ತವ್ಯದಲ್ಲಿ ತೊಡಗಲು ಈ ಕಮಾಂಡೋಗಳನ್ನು ದೆಹಲಿ ಪೊಲೀಸ್ ನೇಮಕ ಮಾಡಿಕೊಂಡಿದೆ. ದೆಹಲಿ ಪೊಲೀಸ್ ಇಲಾಖೆಯ 4,000 ಸಿಬ್ಬಂದಿಯನ್ನೂ ಕಮಾಂಡೋ ತರಬೇತಿಗೆ ಪರಿಗಣಿಸಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲೂ ಸ್ವಾಟ್ ಕಮಾಂಡೋಗಳನ್ನು ನಿಯೋಜಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

Facebook Comments

Sri Raghav

Admin