ಚಿಕ್ಕಮಗಳೂರು-ಮಂಗಳೂರಿನಲ್ಲಿ ಮುಂದುವರೆದ ವರ್ಷಧಾರೆ, ಜನಜೀವನ ಅಸ್ತವ್ಯಸ್ತ

ಈ ಸುದ್ದಿಯನ್ನು ಶೇರ್ ಮಾಡಿ

Heavy Rain

ಚಿಕ್ಕಮಗಳೂರು/ಮಂಗಳೂರು, ಆ.11-ಆಶ್ಲೇಷ ಅಬ್ಬರದ ಮಳೆ ಚಿಕ್ಕಮಗಳೂರು, ಮಡಿಕೇರಿ, ಮಂಗಳೂರು ಮುಂತಾದ ಕಡೆ ಜೋರಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರಕ್ಕೆ ನದಿ, ಹಳ್ಳಕೊಳ್ಳಗಳು ಉಕ್ಕಿ ಹರಿದಿವೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮನೆಗಳ ಗೋಡೆಗಳು ಕುಸಿದಿವೆ. ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಕೊಪ್ಪ ತಾಲೂಕಿನ ಜಯಪುರ ಬಳಿ ಮನೆ ಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿದೆ. ಮಲೆನಾಡಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕಳಸಾ, ಕುದುರೆಮುಖ, ಚಾರ್ಮಡಿ, ಕೊಟ್ಟಿಗೆಹಾರ, ಶೃಂಗೇರಿ, ಕೊಪ್ಪ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಮದಗದ ಕೆರೆ ತುಂಬಿದ್ದು, ರೈತರ ಜಮೀನು ಮುಳುಗಡೆಯಾಗಿದೆ. ಚಂದ್ರದ್ರೋಣ ಪರ್ವತ ಸಾಲಿನಲ್ಲಿ ತೀವ್ರ ಮಳೆಯಾಗಿದೆ.

ತುಂಗಭದ್ರ, ಹೇಮಾವತಿ ನದಿಗಳು, ಕಲ್ಲತ್ತಿ ಹೊಳೆ ಉಕ್ಕಿ ಹರಿಯುತ್ತಿವೆ. ಈ ಹೊಳೆಯಲ್ಲಿ ಯುವಕರು ಸೆಲ್ಫೀ ಕ್ಲಿಕ್ಕಿಸುವ ದುಸ್ಸಾಹಸದಲ್ಲಿ ತೊಡಗಿದ್ದು ಕಂಡುಬಂತು. ಜಿಲ್ಲಾಡಳಿತ ಮತ್ತು ಸ್ಥಳೀಯರ ವಿರೋಧದ ನಡುವೆಯೂ ಸೆಲ್ಫೀ ಕ್ರೇಜ್‍ಗಾಗಿ ಯುವಕರು, ಪ್ರವಾಸಿಗರು ಹಳ್ಳ ದಾಟುವ ಪ್ರಯತ್ನ ನಡೆಸಿದರು. ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಮುಂದುವರೆದಿದೆ. ನೇತ್ರಾವತಿ, ಕುಮಾರಧಾರ, ಸ್ವರ್ಣಧಾರ ತುಂಬಿ ಹರಿಯುತ್ತಿದ್ದು, ಸಮುದ್ರ ಮಟ್ಟದಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂದಿಲ್ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಇತ್ತ ಮಡಿಕೇರಿಯಲ್ಲೂ ಮಳೆಯ ಆರ್ಭಟ ಮುಂದುವರೆದಿದೆ. ಕೇರಳದ ವೈನಾಡಿನಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಕಪಿಲಾ ನದಿ ಉಕ್ಕಿ ಹರಿದು ಮೈಸೂರು, ನಂಜನಗೂಡು ಮುಂತಾದೆಡೆ ಅಪಾರ ಹಾನಿ ಸಂಭವಿಸಿದೆ.

Facebook Comments

Sri Raghav

Admin