ಅನ್ವೇಷಣೆ, ಹೊಸ ತಂತ್ರಜ್ಞಾನದಿಂದ ದೇಶದ ಪ್ರಗತಿ ಸಾಧ್ಯ : ಪ್ರಧಾನಿ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

Modi-Live--01
ಮುಂಬೈ, ಆ.11-ಅನ್ವೇಷಣೆ ಮತ್ತು ಹೊಸ ತಂತ್ರಜ್ಞಾನಗಳು ದೇಶದ ಪ್ರಗತಿಯ ಭವಿಷ್ಯದ ಪಥವನ್ನು ನಿರ್ಧರಿಸಲಿದೆ ಎಂದು ಹೇಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಅವಿಷ್ಕಾರ ಮತ್ತು ಉದ್ಯಮವು ಭಾರತ ಅಭಿವೃದ್ದಿ ಹೊಂದಿದ ದೇಶವಾಗಲು ಭದ್ರ ಬುನಾದಿಯಾಗಲಿದೆ ಎಂದು ಬಣ್ಣಿಸಿದ್ದಾರೆ.
ಮುಂಬೈನಲ್ಲಿ ಇಂದು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಸಂಸ್ಥೆಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಸದೃಢ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯನ್ನು ದೇಶದ ಐಐಟಿಗಳು ಸಾಕಾರಗೊಳಿಸಿವೆ ಎಂದು ಮೆಚ್ಚುಗೆ ಸೂಚಿಸಿದರು.

ಐಐಟಿಗಳ ಸಾಧನೆ ಮತ್ತು ಸಾಮಥ್ರ್ಯದ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ. ದೇಶದಲ್ಲಿ ಹಲವಾರು ಎಂಜಿನಿಯರಿಂಗ್ ಕಾಲೇಜುಗಳು ಮತ್ತು ತಾಂತ್ರಿಕ ಸಂಸ್ಥೆಗಳನ್ನು ಸ್ಥಾಪಿಸಲು ಐಐಟಿಗಳು ಪ್ರೋತ್ಸಾಹ ನೀಡುತ್ತಿದ್ದು, ಗ್ಲೋಬಲ್ ಬ್ರಾಂಡ್ ಆಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಹೇಳಿದರು.

ಅನ್ವೇಷಣೆ ಮತ್ತು ಉದ್ಯಮವು ಭಾರತ ಅಭಿವೃದ್ದಿ ಹೊಂದಿದ ದೇಶವಾಗಲು ಭದ್ರ ಬುನಾದಿಯಾಗಲಿವೆ. ಅದೇ ರೀತಿ ಹೊಸ ತಂತ್ರಜ್ಞಾನಗಳು ದೇಶದ ಪ್ರಗತಿಯ ಭವಿಷ್ಯದ ಪಥವನ್ನು ನಿರ್ಧರಿಸಲಿದೆ. ಐಐಟಿಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮೋದಿ ತಿಳಿಸಿದರು. ಸಮರ್ಥ ತಯಾರಿಕೆ ಮತ್ತು ಸಮರ್ಥ ನಗರಗಳ ನಿರ್ಮಾಣದಲ್ಲಿ 5ಜಿ ಬ್ರಾಡ್‍ಬ್ಯಾಂಡ್, ಕೃತಕ ಬುದ್ಧಿಮತ್ತೆ(ಎಐ) ಹಾಗೂ ಬ್ಲಾಕ್ ಚೈನ್‍ಗಳು ಪ್ರಮುಖ ಪಾತ್ರ ವಹಿಸುತ್ತವೆ. ಅತ್ಯುತ್ತಮ ಆಲೋಚನೆಗಳು ವಿಶ್ವವಿದ್ಯಾಲಯಗಳ ಕ್ಯಾಂಪಸ್‍ನಿಂದ ಬರುತ್ತವೆಯೇ ಹೊರತು ಸರ್ಕಾರಿ ಕಟ್ಟಡಗಳು ಅಥವಾ ಪ್ಯಾನ್ಸಿ ಕಚೇರಿಗಳಿಂದಲ್ಲ ಎಂದು ಅವರು ಹೇಳಿದರು.

Facebook Comments

Sri Raghav

Admin