ಕಳ್ಳನೆಂದು ಶಂಕಿಸಿ ವ್ಯಕ್ತಿಯನ್ನು ಹೊಡೆದು ಕೊಂದ ಉದ್ರಿಕ್ತ ಗ್ರಾಮಸ್ಥರ ಗುಂಪು
ಮುಜಾಫರ್ನಗರ್, ಆ.11-ಕಳ್ಳನೆಂದು ಶಂಕಿಸಿದ ಗ್ರಾಮಸ್ಥರ ಉದ್ರಿಕ್ತ ಗುಂಪೊಂದು ವ್ಯಕ್ತಿಯೊಬ್ಬನನ್ನು ಮನಸೋಇಚ್ಚೆ ಬಡಿದು ಕೊಂದಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರ್ ಜಿಲ್ಲೆಯ ಬಿಜೋಪುರ್ ಗ್ರಾಮದಲ್ಲಿ ನಡೆದಿದೆ. ಉದ್ರಿಕ್ತ ಗುಂಪಿನಿಂದ ಸಾಮೂಹಿಕ ಹಲ್ಲೆ ಮತ್ತು ಹತ್ಯೆ ಬಗ್ಗೆ ಸುಪ್ರೀಂಕೋರ್ಟ್ ಗಂಭೀರ ಎಚ್ಚರಿಕೆ ನೀಡಿದ್ದರೂ ಹಾಗೂ ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸುವ ಕಾನೂನು ಜಾರಿ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದ್ದರೂ, ಗುಂಪಿನ ಥಳಿತದ ಹತ್ಯೆ ಪ್ರಕರಣಗಳು ಮುಂದುವರಿದಿದೆ.
ಗುಂಪಿನ ಕ್ರೌರ್ಯಕ್ಕೆ ಬಲಿಯಾದ ವ್ಯಕ್ತಿಯನ್ನು ಕಪಿಲ್ ತ್ಯಾಗಿ ಎಂದು ಗುರುತಿಸಲಾಗಿದೆ. ಈತನನ್ನು ಕಳ್ಳನೆಂದು ಶಂಕಿಸಿ ನಿನ್ನೆ ಸಂಜೆ ಗ್ರಾಮಸ್ಥರು ಹೊಡೆದು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಹಲವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಚಪರ್ ಪೊಲೀಸ್ ಠಾಣೆ ಅಧಿಕಾರಿ ಸುಭಾಷ್ ರಾಥೋಡ್ ತಿಳಿಸಿದ್ದಾರೆ. ಈ ಘಟನೆಯಿಂದ ಕುಪಿತರಾದ ಮೃತ ಕಪಿಲ್ ಕುಟುಂಬದ ಸದಸ್ಯರು ಹಾಗೂ ಬಂಧು ಮಿತ್ರರು ಚಪರ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಪಿಲ್ ತ್ಯಾಗಿ ಅಮಾಯಾಕನಾಗಿದ್ದು, ಬಿಜೋಪುರ್ನಲ್ಲಿ ಕೆಲಸಕ್ಕಾಗಿ ಬಂದಿದ್ದಾಗ ಆತನನ್ನು ಗ್ರಾಮಸ್ಥರು ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಆತನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ಮುಂದುವರಿದಿದ್ದು, ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.
.