ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿಸಿದ ಅಪರೂಪದ ವೈದ್ಯ

ಈ ಸುದ್ದಿಯನ್ನು ಶೇರ್ ಮಾಡಿ

School-2

ಜೀವನದಲ್ಲಿ ನಾನು, ನನ್ನದು ಎಂಬುದು ಏನೂ ಇಲ್ಲ. ಶಾಶ್ವತವಾಗಿ ಉಳಿಯುವುದು ನಮ್ಮ ಹೆಸರು ಮಾತ್ರ. ನಾವು ಮಾಡಿದ ಸೇವೆ ಹಾಗೂ ದಾನವೇ ಅತ್ಯಂತ ಶ್ರೇಷ್ಟ. ನಮ್ಮ ದೇಹ ಮಣ್ಣಾದರೂ ಇತರರ ಬಾಯಲ್ಲಿ ಅವರ ಹೆಸರು ಹರಿದಾಡುತ್ತಿರುತ್ತದೆ.  ಇಂತಹ ಸೇವಾ ಮನೋಧರ್ಮವನ್ನು ತಮ್ಮಲ್ಲಿ ರೂಢಿಸಿಕೊಂಡು ಬರಪೀಡಿತ ಪ್ರದೇಶದಲ್ಲಿ ಬಡ ಸಮುದಾಯದ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಎಲ್ಲರಿಗೂ ಮಾದರಿಯಾಗಿ ಕಾಣುವ ಅಪರೂಪದಲ್ಲಿ ಅಪರೂಪ ವೈದ್ಯ ಡಾ.ಗಿರೀಶ್ ಮೂಡ್. ಚಿತ್ರದುರ್ಗದ ಸಣ್ಣಗ್ರಾಮವೊಂದರಲ್ಲಿ ಜನಿಸಿ ಇಂದು ವಿಶ್ವದ ನಾನಾ ಕಡೆ ಸೇವೆ ಸಲ್ಲಿಸುತ್ತಿರುವ ಹೃದ್ರೋಗ ತಜ್ಞ ಡಾ.ಗಿರೀಶ್ ಅವರು ಬೆಂಗಳೂರಿಗೆ ಬಂದಾಗ ತಮ್ಮ ಅನಿಸಿಕೆಗಳನ್ನು ಈ ಸಂಜೆಯೊಂದಿಗೆ ಹಂಚಿಕೊಂಡಿದ್ದು ಹೀಗೆ.

School

ಸುಮಾರು 15 ವರ್ಷ ಲಂಡನ್‍ನಲ್ಲಿ, ಪ್ರಸ್ತುತ ಕಳೆದ 10 ವರ್ಷದಿಂದ ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞ ವೈದ್ಯರಾಗಿರುವ ಡಾ.ಗಿರೀಶ್ ಅವರದು ಸರಳ ಜೀವನ, ಕುಟುಂಬದೊಂದಿಗೆ ಸಂತೋಷಮಯ ಸಮಯವನ್ನು ಕಾಲ ಕಳೆಯುವುದು, ತಮ್ಮ ಕೈಲಾದಷ್ಟು ನೆರವನ್ನು ಸಮಾಜಕ್ಕೆ ಅರ್ಪಿಸುತ್ತಾ ಹೋದರೆ ಅದರಲ್ಲಿ ಸಿಗುವ ತೃಪ್ತಿಯೇ ಬೇರೆ ಎನ್ನುತ್ತಾರೆ. ವಿದೇಶದಲ್ಲಿ ಬಹುಕಾಲ ನೆಲೆಸಿದ್ದೆ. ಈಗ ನನ್ನ ದೇಶ, ನನ್ನ ಊರಿನಲ್ಲಿ ಒಂದಿಷ್ಟು ಸಾರ್ಥಕ ಸೇವೆಯನ್ನು ಮಾಡುವ ಬಯಕೆ ಹೊಂದಿದ್ದೆ. ಈಗ ಅದು ಸ್ವಲ್ಪ ಮಟ್ಟಿಗೆ ಸಾಕಾರಗೊಂಡಿದೆ. ಕಳೆದ 10 ವರ್ಷಗಳ ಹಿಂದೆ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದು ನನ್ನ ಪತ್ನಿ, ಸಹೋದರ ಸೇರಿದಂತೆ ಇತರರು ಈ ಕಾರ್ಯದಲ್ಲಿ ನನ್ನೊಂದಿಗೆ ಕೈಜೋಡಿಸಿದ್ದಾರೆ. ಒಂದು ಉತ್ತಮವಾದ ವಾತಾವರಣ ಸೃಷ್ಟಿಸಿದ್ದೇವೆ ಎಂದು ಹೇಳಿದಾಗ ಅವರ ಮುಖದಲ್ಲಿ ಸಾರ್ಥಕ ಭಾವ ಎದ್ದುಕಾಣುತ್ತಿತ್ತು. ಈ ಬದಲಾವಣೆ ತಂದಿದ್ದ ಸ್ಥಳ ಯಾವುದು ಎಂದು ಕೇಳಿದಾಗ, ಮೆಲುದನಿಯಲ್ಲಿ ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕು, ನರಸಿಂಹರಾಜಪುರದ ಸರ್ಕಾರಿ ಮಾದರಿ ಪಾಠಶಾಲೆ ಎಂದು ಮಾಹಿತಿ ನೀಡಿದರು.

School-1

ಕಾನ್ವೆಂಟ್‍ಗಳಿಗೆ ಸರಿಸಾಟಿ
ಕಳೆದ ಹತ್ತು ವರ್ಷಗಳ ಹಿಂದೆ ದೃಢ ಸಂಕಲ್ಪ ಮಾಡಿ ಈ ಶಾಲೆಯನ್ನು ದತ್ತು ಪಡೆದುಕೊಂಡಿದ್ದೆ. ಈಗ ಇಲ್ಲಿ ಯಾವುದೇ ಕಾನ್ವೆಂಟ್‍ಗೂ ಕಡಿಮೆ ಇಲ್ಲವೆಂಬಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮೊದಲಿಗೆ ಶಾಲೆ ದುರಸ್ತಿಗೊಳಿಸಲಾಯಿತು. ಬೆರಳೆಣಿಕೆಯಷ್ಟಿದ್ದ ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರಿಗೂ ತಿಳಿಹೇಳಿ ಅವರ ಮನವೊಲಿಸಿ ಶಾಲೆಯತ್ತ ಒಲವು ಮೂಡಿಸಲಾಯಿತು. ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಬಾಬು ಕುಮಾರ್ ಅತ್ಯಂತ ಉತ್ಸಾಹ ತೋರಿದರು. ಇದೂ ಕೂಡ ನಮಗೆ ಪ್ರೇರಣೆಯಾಯಿತು.

ಶಾಲೆ ಅಂದವಾಗಿ ನಿರ್ಮಿಸಿದ ನಂತರ ಅಲ್ಲಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಯಿತು. ಬದಲಾಗುತ್ತಿರುವ ಪರಿಸ್ಥಿತಿಯನ್ನು ಅವಲೋಕಿಸಿ ಕಂಪ್ಯೂಟರ್ ಶಿಕ್ಷಣದ ಜೊತೆಗೆ ವೃತ್ತಿ ಕೌಶಲ್ಯದ ಕುರಿತು ಬೆಳಕು ಚೆಲ್ಲಲಾಯಿತು. ಈಗ ಪ್ರಾಥಮಿಕ ಪೂರ್ವ (ಎಲ್‍ಕೆಜಿ-ಯುಕೆಜಿ) ತರಗತಿಗಳು ಆರಂಭಿಸಲಾಗಿದೆ. ಕಿನ್ನರ ಮನೆ ಹೆಸರಿನಲ್ಲಿ ಇದೇ ಪ್ರಥಮ ಬಾರಿಗೆ ಎಲ್‍ಕೆಜಿ, ಯುಕೆಜಿ ಪ್ರಾರಂಭವಾಗಿದ್ದು, 16 ಮಕ್ಕಳು ದಾಖಲಾಗಿದ್ದಾರೆ. ಈ ಮಕ್ಕಳಿಗೆ ಅತ್ಯಾಧುನಿಕ ಡೆಸ್ಕ್, ಛೇರ್, ಬೋರ್ಡ್ ಒದಗಿಸಲಾಗಿದೆ. ಡಾ.ಗಿರೀಶ್ ಮೂಡ್ ಅವರ ಪತ್ನಿ ಈ ಮಕ್ಕಳಿಗಾಗಿಯೇ ವಿಶೇಷ ಪುಸ್ತಕವನ್ನು ಸಿದ್ಧಪಡಿಸಿ ಮುದ್ರಿಸಿಕೊಟ್ಟಿದ್ದಾರೆ. ಚಿಕ್ಕ ಮಕ್ಕಳಿಗೆ ಬೇಕಾದ ಆಟಿಕೆಗಳು, ಓದಲು ಆಹ್ಲಾದಕರವಾದ ಪರಿಸರವನ್ನು ಈಗ ಸೃಷ್ಟಿಸಲಾಗಿದೆ.

School-3

ನಮ್ಮ ಕಾಳಜಿಗೆ ಗ್ರಾಮಸ್ಥರು ಕೈ ಜೋಡಿಸಿದ್ದಾರೆ. ಈಗ ಮಕ್ಕಳ ಹಾಜರಾತಿ ಸಂಖ್ಯೆಯೂ ಹೆಚ್ಚಾಗಿದ್ದು, ಬೌದ್ಧಿಕ ಶಕ್ತಿಯೂ ವೃದ್ಧಿಸಿದೆ. ಕಲಿಕೆ ಜೊತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವರನ್ನು ಸಜ್ಜುಗೊಳಿಸಿದ್ದು ಈಗಾಗಲೇ ತಾಲೂಕು ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಬಹುಮಾನ ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಇತ್ತೀಚೆಗೆ ಶಾಲೆಯ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದ್ದು, ಕ್ರೀಡಾ ಉಪಕರಣಗಳನ್ನು ಅಳವಡಿಸಲಾಗಿದೆ. ಇತ್ತೀಚೆಗೆ ವನಮಹೋತ್ಸವವನ್ನು ಆಚರಿಸಿ ಸುಮಾರು 300ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು, ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿದ್ದಾರೆ. ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಹಾಗೂ ಶಿಕ್ಷಣದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಹಲವು ರೀತಿಯ ಯೋಜನೆಗಳನ್ನು ರೂಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹುರುಪಿನಿಂದ ಇಂತಹ ಕಾರ್ಯಗಳಲ್ಲಿ ತೊಡಗಲು ಉತ್ಸುಕನಾಗಿದ್ದೇನೆ ಎಂದು ಡಾ.ಗಿರೀಶ್ ಮೂಡ್ ಹೇಳಿದರು.

ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡರೆ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕಾರಿಯಾಗುತ್ತದೆ. ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ ಎಂಬ ಬಲವಾದ ನಂಬಿಕೆ ನನ್ನದು. ಪ್ರಸ್ತುತ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಒಂದು ರೀತಿಯಲ್ಲಿ ಬೇಸರ ಮೂಡಿಸಿದೆ. ಆದರೂ ಚುನಾಯಿತ ಸರ್ಕಾರಗಳು ಶಿಕ್ಷಣ ರಾಷ್ಟ್ರೀಕರಣಗೊಳಿಸಿ ಸಮಾನ ಶಿಕ್ಷಣದತ್ತ ಕ್ರಾಂತಿಕಾರಿ ಹೆಜ್ಜೆ ಇಟ್ಟರೆ ಹಲವಾರು ಕುಟುಂಬಗಳು ಕೂಡ ನೆಮ್ಮದಿ ಜೀವನ ನಡೆಸಲಿವೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯರ ಅನಿಸಿಕೆ
ಶಾಲೆಯ ಮುಖ್ಯೋಪಾಧ್ಯಾಯ ಬಾಬುಕುಮಾರ್ ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ಕಳೆದ ಹತ್ತು ವರ್ಷದಿಂದ ಈ ಶಾಲೆಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ನರಸಿಂಹರಾಜಪುರ ಡಾ.ಗಿರೀಶ್ ಮೂಡ್ ಅವರ ಅಜ್ಜಿಯ ಊರು. ಹಾಗಾಗಿ ನಮ್ಮ ಶಾಲೆ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡಿದ್ದಾರೆ. ಈ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. 2008ರಿಂದ ಡಾ.ಗಿರೀಶ್ ಅವರು ನೆರವು ನೀಡುತ್ತಿದ್ದಾರೆ. ಕಾನ್ವೆಂಟ್‍ಗೆ ಹೋಗುತ್ತಿದ್ದ ಮಕ್ಕಳೂ ಸಹ ಈಗ ನಮ್ಮ ಶಾಲೆಗೆ ಬರುತ್ತಿದ್ದಾರೆ. ಪ್ರತಿವರ್ಷ ಏನಾದರೂ ಒಂದನ್ನು ದಾನ ಮಾಡುತ್ತಾರೆ. ಸರ್ಕಾರ ಸಮವಸ್ತ್ರ ಕೊಟ್ಟಿದ್ದರೂ ಇವರೂ ಕೂಡ ಪ್ರತ್ಯೇಕವಾಗಿ ಎರಡು-ಮೂರು ಜೊತೆ ಸಮವಸ್ತ್ರ ವಿತರಿಸುತ್ತಾರೆ. ಜೊತೆಗೆ ಕಾನ್ವೆಂಟ್ ಮಕ್ಕಳಿಗೆ ಸಮನಾಗಿ ಶೂ, ಸಾಕ್ಸ್, ಟೈ ಕೊಡುತ್ತಾರೆ.
ಶಾಲೆಯ ಸುತ್ತ ಸ್ವಚ್ಛ ಪರಿಸರ ನಿರ್ಮಿಸಲಾಗಿದೆ. ಆವರಣದಲ್ಲಿ ಗಿಡಮರಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದಿದ್ದು, ಮಕ್ಕಳ ಉತ್ಸಾಹದಿಂದ ಶಾಲೆಗÉ ಬರುತ್ತಾರೆ. ಪ್ರತಿವರ್ಷ ಪ್ರತಿಭಾಕಾರಂಜಿ, ಆಟೋಟಗಳಲ್ಲಿ ನಮ್ಮ ಮಕ್ಕಳು ಭಾಗವಹಿಸಿ ಬಹುಮಾನ ತರುತ್ತಾರೆ. ಈಗ ನಮ್ಮ ಶಾಲೆ ಜಿಲ್ಲೆಯಲ್ಲೇ ಮೂರನೇ ಮಾದರಿ ಶಾಲೆಯಾಗಿ ರೂಪುಗೊಂಡಿದ್ದು, ಇದಕ್ಕೆ ಡಾ.ಗಿರೀಶ್ ಮೂಡ್ ಅವರ ಶ್ರಮ ಕಾರಣ ಎಂದರು.

dr-Girish

ಪೋಷಕರ ಮೆಚ್ಚುಗೆ
ಪೋಷಕರಾದ ಸಂತೋಷ್ ನಾಯ್ಕ, ಲೀಲಾವತಿ, ಹನುಮಂತ ನಾಯ್ಕ ಮತ್ತಿತರರು ಡಾ.ಗಿರೀಶ್ ಅವರ ಸಹಕಾರವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ನಮ್ಮ ಮಕ್ಕಳಿಗೆ ಬಹಳ ಉಪಕಾರ ಮಾಡಿದ್ದಾರೆ. ಅವರ ಶ್ರಮದ ಫಲವಾಗಿ ಬಹಳಷ್ಟು ಮಂದಿ ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಇಂತಹ ಉತ್ತಮ ಮಟ್ಟದ ವಿದ್ಯಾಭ್ಯಾಸ ಸಿಗುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ಹೇಳಿದರು. ಶಾಲೆಯ ಶಿಕ್ಷಕರಾದ ವೀಣಮ್ಮ, ಮಮತಾ, ನಾಗರತ್ನ ಅವರು ಡಾ.ಗಿರೀಶ್ ಮೂಡ್ ಅವರ ಕಾಳಜಿ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

Facebook Comments

Sri Raghav

Admin