ಲೋಕಲ್ ಚುನಾವಣೆ ಪ್ರಚಾರಕ್ಕೆ ಜೆಡಿಎಸ್ ಎರಡು ಪ್ರತ್ಯೇಕ ತಂಡ ರಚನೆ..?

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-And-JDS-Devegow

ಬೆಂಗಳೂರು,ಆ.12- ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ಜೆಡಿಎಸ್‍ನಿಂದ ಎರಡು ಪ್ರತ್ಯೇಕ ತಂಡಗಳನ್ನು ರಚಿಸುವ ಸಾಧ್ಯತೆಗಳಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ನೇತೃತ್ವದಲ್ಲಿ ತಲಾ ಒಂದೊಂದು ತಂಡವನ್ನು ರಚನೆ ಮಾಡಲು ಉದ್ದೇಶಿಸಲಾಗಿದೆ.

ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿರುವ ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ಚುನಾವಣಾ ಪ್ರಚಾರವನ್ನು ನಡೆಸಲಾಗುತ್ತದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇರುವುದರಿಂದ ಎರಡೂ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿಯಿಂದ ದೂರ ಉಳಿದಿವೆ. ಏಕಾಂಗಿಯಾಗಿ ಸ್ಪರ್ಧೆ ಮಾಡುವುದರಿಂದ ಸ್ಥಳೀಯವಾಗಿ ಸ್ನೇಹಮಯಿ ಹೋರಾಟವನ್ನು ಮಾಡಲು ನಿರ್ಧರಿಸಲಾಗಿದೆ.

ಚುನಾವಣೆ ನಡೆಯುವ ಸ್ಥಳೀಯ ಸಂಸ್ಥೆಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಜೆಡಿಎಸ್ ನಾಯಕರ ತಂಡಗಳನ್ನು ರಚಿಸಲಿದೆ. ದೇವೇಗೌಡರ ನೇತೃತ್ವದ ಒಂದು ತಂಡ ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡರೆ, ವಿಶ್ವನಾಥ್ ನೇತೃತ್ವದ ತಂಡ ಉಳಿದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಾವ ತಂಡ ಯಾವ ಯಾವ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಬೇಕು ಎಂಬುದನ್ನು ಸದಸ್ಯದಲ್ಲೇ ನಿರ್ಧರಿಸಲಾಗುತ್ತದೆ. ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್ ಬಳಸುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಚುನಾವಣಾ ಜವಾಬ್ದಾರಿಯನ್ನು ನೀಡಲು ನಿರ್ಧರಿಸಲಾಗಿದ್ದು, ಸದ್ಯದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಎರಡುಮೂರು ಜಿಲ್ಲೆಗಳ ಚುನಾವಣಾ ಹೊಣೆಗಾರಿಕೆಯನ್ನು ನೀಡಲಾಗುತ್ತದೆ.

ಸರ್ಕಾರದ ಜೊತೆಯಲ್ಲಿರುವ ಕಾಂಗ್ರೆಸ್ ವಿರುದ್ದವೇ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಬೇಕಾಗುತ್ತದೆ. ಜೊತೆಗೆ ಬಿಜೆಪಿ ವಿರುದ್ಧ ತೀವ್ರ ಪೈಪೋಟಿ ನಡೆಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾಗಿದೆ.   ಮುಂಬರುವ ಲೋಕಸಭೆ ಚುನಾವಣೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವೇ ನಿರ್ಣಾಯಕವೆಂದೇ ಪರಿಗಣಿಸಲಾಗುತ್ತಿದೆ. ಹೀಗಾಗಿ ಹೆಚ್ಚಿನ ಅಭ್ಯರ್ಥಿಗಳನ್ನು ಚುನಾಯಿಸುವ ಹೊಣೆಗಾರಿಕೆಯನ್ನು ಶಾಸಕರು, ಸಚಿವರಿಗೆ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ.  ಆಯಾ ಜಿಲ್ಲಾಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರು ಸಮಾಲೋಚನೆ ನಡೆಸಿ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ರಾಜ್ಯ ಸಮಿತಿಯ ಒಪ್ಪಿಗೆ ಪಡೆಯಬೇಕೆಂದು ಸೂಚಿಸಲಾಗಿದೆ.

Facebook Comments

Sri Raghav

Admin