ಸರ್ಕಾರದ ವಿರುದ್ಧ ಯಡಿಯೂರಪ್ಪ ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

Yaddyurappa--01
ಬೆಂಗಳೂರು, ಆ.12-ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಅತಿವೃಷ್ಠಿ, ಅನಾವೃಷ್ಠಿ ಕಾಡುತ್ತಿದೆ. ಕಾಂಗ್ರೆಸ್-ಜೆಡಿಎಸ್ ಅವ್ಯವಹಾರ ಬಯಲು ಮಾಡಲು ಸಿದ್ಧರಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇವೆರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸುತ್ತಿವೆ. ಇವರ ವಿರುದ್ಧ ನಾವೇನಾದರೂ ದೊಡ್ಡ ಮಟ್ಟದ ಹೋರಾಟ ಕೈಗೊಂಡರೆ ಸರ್ಕಾರವೇ ಉಳಿಯುವುದಿಲ್ಲ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಗುಡುಗಿದರು.

ನಗರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನ ಅವ್ಯವಹಾರ ಬಯಲು ಮಾಡಲು ಜೆಡಿಎಸ್ ಸಿದ್ಧವಿಲ್ಲ. ಅದೇ ರೀತಿ ಜೆಡಿಎಸ್‍ನ ಅವ್ಯವಹಾರ ಬಯಲು ಮಾಡಲು ಕಾಂಗ್ರೆಸ್ ರೆಡಿಯಿಲ್ಲ. ಇವೆರಡೂ ಪಕ್ಷಗಳು ಹೊಂದಾಣಿಕೆ ನಾಟಕದ ಮೂಲಕ ಮುಂದಿನ ಚುನಾವಣೆಯಲ್ಲಿ ಅಧಿಕ ಸ್ಥಾನ ಪಡೆಯಲು ಮುಂದಾಗಿವೆ ಎಂದು ಟೀಕಿಸಿದರು.

ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಂದೇಶ ನೀಡಿದಂತಾಗುತ್ತದೆ. ನಾವು ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಹೋರಾಟಕ್ಕಿಳಿದರೆ ಯಾವ ಸಮಯದಲ್ಲಿ ಬೇಕಾದರೂ ಈ ಸರ್ಕಾರ ಬಿದ್ದುಹೋಗಬಹುದು ಎಂದು ಭವಿಷ್ಯ ನುಡಿದರು.
ನಾವು ಹೋರಾಟ ಮಾಡಿ ಷಡ್ಯಂತ್ರ ರೂಪಿಸಿ ಸರ್ಕಾರ ಬೀಳಿಸಲು ಮುಂದಾಗುವುದಿಲ್ಲ. ಅವರವರೇ ಬಡಿದಾಡಿಕೊಂಡು ಮನೆಗೆ ಹೋಗುತ್ತಾರೆ ಎಂದು ಗೇಲಿ ಮಾಡಿದರು.

ರೈತನ ಗದ್ದೆಯಲ್ಲಿ ಭತ್ತ ನಾಟಿ ಮಾಡಿಬಿಟ್ಟರೆ ರೈತರ ಸಮಸ್ಯೆಯೇನೂ ಪರಿಹಾರವಾಗಲ್ಲ. ಬೀದರ್, ಕಲಬುರಗಿ, ರಾಯಚೂರು ಸೇರಿದಂತೆ 14 ಜಿಲ್ಲೆಗಳಲ್ಲಿ ಸರಿಯಾಗಿ ಮಳೆಯೇ ಆಗಿಲ್ಲ. ನೀರಿಗಾಗಿ ಹಾಹಾಕಾರ ಎದುರಾಗಿದೆ.ಆದರೆ ಆ ಭಾಗಗಳಿಗೆ ಸಚಿವರು ಭೇಟಿ ನೀಡಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರದ ಆಡಳಿತದ ಬಗ್ಗೆ ಜನ ಬೇಸತ್ತು ಹೋಗಿದ್ದಾರೆ. ಯಾವಾಗ ಸರ್ಕಾರ ಬೀಳುತ್ತೋ ಎಂದು ಹಾದಿಬೀದಿಯಲ್ಲಿ ಹೋಗುವ ಜನರೆಲ್ಲ ಇವರ ಬಗ್ಗೆ ಮಾತನಾಡುತ್ತಾರೆ. ಎಂದಿಗೆ ಈ ಸರ್ಕಾರ ಬಿದ್ದುಹೋಗುತ್ತೋ ಎಂದುಕೊಳ್ಳುತ್ತಿದ್ದಾರೆ ಎಂದರು. ಬದಾಮಿಗೆ ಒಂದು ದಿನ ಹೆಚ್ಚಿನ ಸಮಯ ನೀಡಿದ್ರೆ ಸಿದ್ದರಾಮಯ್ಯಗೆ ದಯನೀಯ ಸೋಲಾಗುತ್ತಿತ್ತು. ಸಿದ್ದರಾಮಯ್ಯ ಅವರನ್ನು ಸೋಲಿಸಲೆಂದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಜಿ.ಟಿ.ದೇವೇಗೌಡರನ್ನು ಕಣಕ್ಕಿಳಿಸಿತ್ತು ಎಂದು ಹೇಳಿದರು.
ನಾವು 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿತ್ತು. ನಾನಾ ಕಾರಣಗಳಿಂದ ಕಡಿಮೆ ಅಂತರದಲ್ಲಿ 30ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಸೋಲಾಯಿತು. ಬೆಂಗಳೂರಲ್ಲೂ ನಮಗೆ ನಿರೀಕ್ಷಿತ ಗೆಲುವು ಸಿಗಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಈಗಿನಿಂದಲೇ ಶ್ರಮಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

Facebook Comments

Sri Raghav

Admin