ಸ್ಥಳೀಯ ಸಂಸ್ಥೆ ಚುನಾವಣೆ : ಅಭ್ಯರ್ಥಿಗಳ ವೆಚ್ಚ ಭರಿಸಲು`ಕೈ’ಮುಖಂಡರ ಹಿಂದೇಟು

ಈ ಸುದ್ದಿಯನ್ನು ಶೇರ್ ಮಾಡಿ

Congress--01
ಬೆಂಗಳೂರು, ಆ.12-ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ವೆಚ್ಚ ಭರಿಸಲು ಕಾಂಗ್ರೆಸ್‍ನ ಪ್ರಮುಖ ಮುಖಂಡರು ಹಿಂದೇಟು ಹಾಕುತ್ತಿರುವುದು ಹೊಸ ತಲೆನೋವನ್ನು ತಂದಿಟ್ಟಿದೆ.ನಗರಸಭೆ, ಪಟ್ಟಣಪಂಚಾಯ್ತಿ, ಪುರಸಭೆಯ ಸದಸ್ಯರ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ. ಮೈತ್ರಿ ಸರ್ಕಾರದ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿವೆ. ಬಿಜೆಪಿ ಕೂಡ ಎರಡೂ ಪಕ್ಷಗಳಿಗೆ ಸೆಡ್ಡು ಹೊಡೆಯಲು ತಯಾರಿ ನಡೆಸಿಕೊಂಡಿದೆ.

ತಳಮಟ್ಟದ ನಾಯಕರನ್ನು ಬೆಳೆಸುವ ಸ್ಥಳೀಯ ಸಂಸ್ಥೆ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಬಹಳ ಪ್ರಮುಖವಾಗಿದೆ. ಅದರಲ್ಲೂ ಈಗಾಗಲೇ ದೇಶಾದ್ಯಂತ ಸೋತು, ಸೊರಗಿರುವ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳಲ್ಲಿ ಬಲಿಷ್ಠವಾಗಿ ನೆಲೆಯೂರದಿದ್ದರೆ ಮುಂದಿನ ದಿನಗಳಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದೆ. ಹೀಗಾಗಿ ಈ ಚುನಾವಣೆ ರಾಜ್ಯದ ಕಾಂಗ್ರೆಸ್ ಪಾಲಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪ್ರಮುಖ ನಾಯಕರು ಸ್ಥಳೀಯವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಆರ್ಥಿಕ ಸಂಪನ್ಮೂಲ ಒದಗಿಸಿ ಗೆಲ್ಲಿಸಿಕೊಂಡು ಬರುವಂತೆ ಶಾಸಕರಿಗೆ ಹಾಗೂ ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರಿಗೆ ಸೂಚನೆ ನೀಡಿದ್ದಾರೆ.
ಆದರೆ ಇದಕ್ಕೆ ಕಾಂಗ್ರೆಸ್‍ನಲ್ಲಿ ನಿರುತ್ಸಾಹದ ಪ್ರತಿಕ್ರಿಯೆ ದೊರೆತಿದೆ. ಕಾಂಗ್ರೆಸ್ ಪಾಲಿಗೆ ಸಂಪನ್ಮೂಲಭರಿತರಾದ ಮುಖಂಡರು ಈ ಬಾರಿ ಚುನಾವಣಾ ವೆಚ್ಚ ನೀಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್‍ನಲ್ಲಿ ತಳಮಳ ಶುರುವಾಗಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ದಿಢೀರ್ ಸಭೆ ಕರೆದಿದ್ದರು. ಆದರೆ ಸಭೆಗೆ ಬಹಳಷ್ಟು ಸಚಿವರು ಗೈರು ಹಾಜರಾಗಿದ್ದು, ಉಪಮುಖ್ಯಮಂತ್ರಿ ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ದೇಶಪಾಂಡೆ ಮಾತ್ರ ಭಾಗವಹಿಸಿದ್ದರು. ಉಳಿದಂತೆ ಬೆಂಗಳೂರಿನಲ್ಲೇ ಇದ್ದ ಕೆ.ಜೆ.ಜಾರ್ಜ್ ಸೇರಿದಂತೆ ಇನ್ನೂ ಕೆಲವು ಸಚಿವರು ಸಭೆಯಿಂದ ಹೊರಗುಳಿದಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆ ಪ್ರವಾಸದಲ್ಲಿರುವುದರಿಂದ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಅವರ ಆಪ್ತರಾದ ಕೆ.ಜೆ.ಜಾರ್ಜ್ ಕೂಡ ಸಭೆಯಿಂದ ದೂರ ಉಳಿದಿದ್ದರು. ಚುನಾವಣೆಯ ವೆಚ್ಚ ಭರಿಸಲು ಶಾಸಕರಿಗೆ, ಸಂಸದರಿಗೆ ಮತ್ತು ಕಳೆದ ಚುಣಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಸೂಚನೆ ನೀಡಿದರೆ ಯಾರೂ ಪಾಲಿಸುತ್ತಿಲ್ಲ. ಅಧಿಕಾರ ಅನುಭವಿಸಲು ನೀವು ಬೇಕು, ಹಣ ಖರ್ಚು ಮಾಡಲು ನಾವೇಕೆ ಎಂಬ ಉತ್ತರಗಳು ಬರುತ್ತಿವೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಹಕಾರ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಸಭೆಯಲ್ಲಿ ಮನವಿ ಮಾಡಿದ್ದಾರೆ.

ಕೆಲವು ಶಾಸಕರು ಸಚಿವ ಸಂಪುಟ ವಿಸ್ತರಣೆ ಮಾಡಿ ನಮಗೆ ಅವಕಾಶ ಕೊಡಿ, ಇಲ್ಲದೆ ಹೋದರೆ ಪಕ್ಷದ ಯಾವುದೇ ಜವಾಬ್ದಾರಿಗಳನ್ನು ನಾವು ನಿಭಾಯಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆಂದು ಹೇಳಲಾಗುತ್ತಿದೆ. ಚುನಾವಣೆ ಹತ್ತಿರ ಇದೆ. ಈ ಸಂದರ್ಭದಲ್ಲಿ ನಾವು ಕೆಳಹಂತದ ಕಾರ್ಯಕರ್ತರಿಗೆ ಸ್ಪಂದಿಸದೆ ಹೋದರೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಪೆಟ್ಟು ಬೀಳಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಕೆಳಹಂತದ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ. ಹೀಗಾಗಿ ಯಾರೂ ಹಣಕಾಸಿನ ನೆರವು ನೀಡಲು ಮುಂದೆ ಬರುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿರುವುದಾಗಿ ತಿಳಿದುಬಂದಿದೆ.  ಚುನಾವಣೆ ಸಂದರ್ಭದಲ್ಲಿ ಹಣಕಾಸು ಸೌಲಭ್ಯ ಒದಗಿಸುವುದು ಕಾಂಗ್ರೆಸ್ ನಾಯಕರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

Facebook Comments

Sri Raghav

Admin