ರಾಜಕೀಯ ಲಾಭಕ್ಕಾಗಿ ಬೆಂಗಳೂರಿನಿಂದ ಲಕ್ನೋಗೆ ಏರ್ ಷೋ ಶಿಫ್ಟ್ : ಸಿಎಂ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

CM-Kumaraswamy--01

ಹುಬ್ಬಳ್ಳಿ, ಜ.12-ಪ್ರತಿ ಎರಡು ವರ್ಷಗಳಿಗೊಮ್ಮೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ಏರ್ ಷೋ ಅನ್ನು ಉತ್ತರ ಪ್ರದೇಶ ಲಕ್ನೋಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ನ್ಯಾಯಾಲಯ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಗರದ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಮುಖ್ಯಮಂತ್ರಿಯವರು, ಸುದ್ದಿಗಾರರೊಂದಿಗೆ ಮಾತನಾಡಿ, ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳು ಉತ್ತರ ಪ್ರದೇಶ ರಾಜ್ಯದಲ್ಲಿದೆ. ಆದ್ದರಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರೋ ಶೋ ಅನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ದೂರಿದರು.

ಏರೋ ಶೋ ನಡೆಸಲು ಬೆಂಗಳೂರು ಅತ್ಯಂತ ಸುಸಜ್ಜಿತ ನಗರವಾಗಿತ್ತು. ಈ ಹಿಂದಿನ ಸರ್ಕಾರಗಳು ಕೂಡ ಬೆಂಗಳೂರು ನಗರವನ್ನೇ ಆಯ್ಕೆ ಮಾಡಿಕೊಂಡಿದ್ದವು. ಆದರೆ ಎನ್‍ಡಿಎ ಸರ್ಕಾರ ಕರ್ನಾಟಕವನ್ನು ಕಡೆಗಣಿಸಿ ಉತ್ತರ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುವುದು ಸರಿಯಲ್ಲ ಎಂದು ಹೇಳಿದರು.  ಕೆ.ಶಿಫ್ ಕಚೇರಿಯನ್ನು ಹಾಸನ ಜಿಲ್ಲೆಗೆ ಸ್ಥಳಾಂತರ ವಿಚಾರ ಮಾಡಿರುವುದು ಆಯಾ ಇಲಾಖೆಗೆ ಬಿಟ್ಟಿದ್ದು. ಇದರಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಆದ ಮೇಲೆ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ಸ್ಥಳೀಯ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ನಾನು ಇಲ್ಲಿ ಇರಲು ಆಗುವುದಿಲ್ಲ. ಇಲ್ಲವಾದಲ್ಲಿ ನಾನು ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಪ್ರವಾಸ ಇಟ್ಟುಕೊಳ್ಳುವವನಿದ್ದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ನಂತರ ನಾನು ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.

Facebook Comments

Sri Raghav

Admin