ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಮಾಸ್ಟರ್ ಮೈಂಡ್ ನಿಹಾಲ್’ಗಾಗಿ ಪೊಲೀಸರ ಹುಡುಕಾಟ

ಈ ಸುದ್ದಿಯನ್ನು ಶೇರ್ ಮಾಡಿ

Gauru-Lankesh-Dead
ಬೆಂಗಳೂರು, ಆ.12-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಸಿಟ್) ಅಧಿಕಾರಿಗಳು, ಪ್ರಕರಣದ ಸೂತ್ರಧಾರಿ ಎನ್ನಲಾದ ನಿಹಾಲ್ ಅಲಿಯಾಸ್ ದಾದಾ ಎಂಬಾತನ ಬಂಧನಕ್ಕಾಗಿ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ಅಮೋಲ್ ಕಾಳೆಯ ಗುರು ಎಂದು ಶಂಕಿಸಲಾಗಿರುವ ನಿಹಾಲ್ ಎಂಬವನೇ ಗೌರಿ ಹತ್ಯೆಯ ಮಾಸ್ಟರ್ ಮೈಂಡ್ ಎಂಬ ನಿರ್ಧಾರಕ್ಕೆ ಬಂಧಿರುವ ತನಿಖಾಧಿಕಾರಿಗಳು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ. ಮಹಾರಾಷ್ಟ್ರ ಮೂಲದ ನಿಹಾಲ್ ಒಬ್ಬ ಸರ್ಕಾರಿ ನೌಕರನಾಗಿದ್ದಾನೆ. ಆತನ ನಿಜವಾದ ಹೆಸರು ನಿಹಾಲ್ ಅಲ್ಲ. ಬೇರೆ ಬೇರೆ ಹೆಸರುಗಳಿಂದ ಆತನ ಗುರುತಿಸಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆಯ ಆರೋಪದಲ್ಲಿ ಬಂಧಿತರಾಗಿರುವ ಪರಶುರಾಮ್ ವಾಗ್ಮೋರೆ ಹಾಗೂ ಅಮೋಳ್ ಕಾಳೆ ಅವರು ಈಗಾಗಲೇ ನಿಹಾಲ್ ಹೆಸರನ್ನು ಹೇಳಿದ್ದಾರೆ. ನಿಹಾಲ್ ಮಾರ್ಗದರ್ಶನದಲ್ಲೇ ನಾವು ಗೌರಿ ಅವರಿಗೆ ಗುಂಡಿಕ್ಕಿದ್ದೇವೆ ಎಂದು ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹತ್ಯೆ ಬಳಿಕ ನನ್ನನ್ನು ಊರಿನಲ್ಲಿ ಇಬ್ಬರು ಭೇಟಿಯಾಗಿ 10 ಸಾವಿರ ರೂ. ನೀಡಿದ್ದರು. ಯಾರಿಗೂ ಸಿಗಬೇಡ. ಯಾರಾದರೂ ಕೇಳಿದರೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳು. ನಿನ್ನ ಹಾಗೂ ಕುಟುಂಬವನ್ನು ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದರು. ಹಣ ಕೊಟ್ಟ ವ್ಯಕ್ತಿ ಎತ್ತರವಾಗಿದ್ದು, ವಕೀಲನಂತೆ ಇದ್ದ. ಹಣ ಕೊಟ್ಟ ವ್ಯಕ್ತಿಯನ್ನು ಆತನ ಜತೆಗಿದ್ದವ ದಾದಾ ಎಂದು ಕರೆಯುತ್ತಿದ್ದ ಎಂದು ಪರಶುರಾಮ್ ವಾಗ್ಮೋರೆ ವಿಚಾರಣೆಯ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಗೊತ್ತಾಗಿದೆ.

ಈ ಹೇಳಿಕೆಯನ್ನು ದಾಖಲಿಸಿಕೊಂಡ ತನಿಖಾಧಿಕಾರಿಗಳು, ದಾದಾ ಎನ್ನುವ ವ್ಯಕ್ತಿಯೇ ನಿಹಾಲ್ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ನಿಹಾಲ್‍ಗಾಗಿ ತನಿಖಾಧಿಕಾರಿಗಳ ತಂಡ ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿದ್ದು, ಆತನ ಬಂಧನವಾದರೆ ಪ್ರಕರಣ ಒಂದು ತಾರ್ಕಿಕ ಅಂತ್ಯಕ್ಕೆ ಬರಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ತನಿಖಾಧಿಖಾಧಿಕಾರಿಗಳು.

Facebook Comments

Sri Raghav

Admin