ಶ್ರಾವಣ ಮಾಸ ಶುರುವಾಯ್ತು, ಏನೇನು ಮಾಡಿದರೆ ನಿಮಗೆ ಒಳಿತಾಗುತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

Shravana--01

ಶ್ರಾವಣವೆಂದರೆ ಪ್ರಸನ್ನ ಚಿತ್ತದ ಭಕ್ತಿಯ, ಸಾತ್ವಿಕ ಮಾತುಗಳ ಸಂಭ್ರಮದ ಮಾಸ. ಭೀಮನ ಅಮಾವಾಸ್ಯೆ ಮುಗಿಯುತ್ತಿದ್ದಂತೆ ಹಬ್ಬಗಳ ಸರಮಾಲೆ ಶುರುವಾಗುತ್ತದೆ. ಹಿಂದೂಗಳಿಗೆ ಶ್ರಾವಣ ಮಾಸ ಪವಿತ್ರವಾದುದು. ವರ್ಷಪೂರ್ತಿ ಇರುವ ಹಲವು ಹಬ್ಬಗಳಲ್ಲಿ ಹೆಚ್ಚಿನ ಹಬ್ಬಗಳು ಈ ತಿಂಗಳಲ್ಲೇ ಆಚರಿಸಲ್ಪಡುತ್ತದೆ. ಏನೇ ಮಾಡು, ಶ್ರಾವಣ ಮಾಸದಲ್ಲಿ ಮಾಡು ಒಳ್ಳೆಯದಾಗುತ್ತದೆ ಎಂದು ಹೇಳುವುದುಂಟು. ಮನುಷ್ಯರಷ್ಟೇ ಅಲ್ಲ, ಪ್ರಕೃತಿ ಮಾತೆ ಕೂಡ ಹಬ್ಬದ ಸಂಭ್ರಮಕ್ಕೆ ಅಣಿಯಾಗುತ್ತಾಳೆ. ಹಾಗಾಗಿ ಶ್ರಾವಣ ಮಾಸ ಎಂದರೆ ಎಲ್ಲೆಡೆ ಒಂದು ರೀತಿಯ ಸಂಭ್ರಮ.

Shavana-2

ದ.ರಾ.ಬೇಂದ್ರೆ ಅವರು ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ…. ಎಂದು ಶ್ರಾವಣ ಮಾಸದ ವೈಭವವನ್ನು ತಮ್ಮ ಕವನದ ಮೂಲಕ ಬಣ್ಣಿಸುತ್ತಾರೆ. ಶ್ರಾವಣ ಮಾಸದಲ್ಲಿ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳನ್ನು ಹಾಗೂ ಅವುಗಳ ಚೆಲುವನ್ನು ಈ ಕವನ ವರ್ಣಿಸುತ್ತದೆ. ಮಳೆಗಾಲದಲ್ಲಿ ಗದ್ದೆಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ವೈಶಾಖದ ಬಿಸಿಲ ಧಗೆಯಿಂದ ಬೇಸತ್ತ ರೈತ, ಮಳೆ ಬಿದ್ದೊಡನೆ ಬೀಜ ಬಿತ್ತುತ್ತಾನೆ. ಒಣಗಿ ಹೋಗಿದ್ದ ಗಿಡ-ಮರ, ಹುಲ್ಲು ಚಿಗುರಿ ಭೂರಮೆ ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸುತ್ತಿರುತ್ತಾಳೆ.

Shavana

ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆ ರಾಘಪ್ಪ ಎಂಬ ನಾಣ್ಣುಡಿ ನಾಡಿನೊಳಗುಂಟು. ಶ್ರೀನಿವಾಸ ದೇವರ ಹಾಗೂ ಶ್ರೀ ಗುರುರಾಘವೇಂದ್ರರ ವಿಶೇಷ ಪೂಜಾ ಆರಾಧನೆಗಳನ್ನು ದೇಶಾದ್ಯಂತ ಆಚರಿಸುವುದು ಶ್ರಾವಣ ಮಾಸದ ವೈಶಿಷ್ಟ್ಯ. ಬೇಂದ್ರೆಯವರಂತೂ ಈ ಶ್ರಾವಣವನ್ನು ಜಗದ್ಗುರು ಹುಟ್ಟಿದ ಮಾಸ ಎಂದೇ ಕರೆದಿದ್ದಾರೆ. ಈ ತಿಂಗಳಲ್ಲೇ ಬರುವ ಕೃಷ್ಣ ಜನ್ಮಾಷ್ಠಮಿ, ರಾಘವೇಂದ್ರ ತೀರ್ಥರ ಆರಾಧನೆ, ಅರವಿಂದರಂಥವರ ಜನ್ಮ ದಿನ ಇವೆಲ್ಲವೂ ವಿಶೇಷವಾದ ಸಂಕೇತಗಳನ್ನು ಧ್ವನಿಸುತ್ತವೆ.

ಈ ತಿಂಗಳಲ್ಲಿ ಪ್ರತಿದಿನವೂ ಪುಣ್ಯದಿನ, ವ್ರತ, ಪೂಜೆ, ನಾಡಹಬ್ಬ.. ಹೀಗೆ ಹಬ್ಬದ ಸಂಭ್ರಮ. ಈ ತಿಂಗಳು ಪೂರ್ತಿ ಮನೆಯ ಮುಂಬಾಗಿಲಿನಲ್ಲಿ ಹಸಿರ ತೋರಣ ಕಂಗೊಳಿಸುತ್ತಿರುತ್ತದೆ. ಮಹಿಳೆಯರು ಹಬ್ಬದ ಸಂಭ್ರಮ, ಹಬ್ಬದೂಟದ ತಯಾರಿಯಲ್ಲಿ ಮೈಮರೆಯುತ್ತಾರೆ. ಮಂಗಳಗೌರಿ ವ್ರತ, ನಾಗಚತುರ್ಥಿ, ನಾಗರಪಂಚಮಿ, ಬಸವ ಪಂಚಮಿ, ಶುಕ್ರಗೌರಿ ಪೂಜೆ, ಶ್ರಾವಣ ಶನಿವಾರದ ಪೂಜೆ, ಶ್ರೀ ವರಮಹಾಲಕ್ಷ್ಮೀ ವ್ರತ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಶ್ರೀ ಕೃಷ್ಣಜನ್ಮಾಷ್ಟಮಿ, ರಕ್ಷಾಬಂಧನ… ಹೀಗೆ ಶ್ರಾವಣ ಮಾಸದಲ್ಲಿ ಹಬ್ಬಗಳು ಸಾಲು ಸಾಲು. ಹಾಗಾಗಿ ಒಂದು ರೀತಿಯಲ್ಲಿ ಶ್ರಾವಣ ಅಂದರೆ ಸಂಭ್ರಮವೇ ಹೌದು. ಒಂದೆಡೆ ಮನೆಮನೆಗಳಲ್ಲಿ ಹಬ್ಬದ ಸಂಭ್ರಮವಿದ್ದರೆ, ಮತ್ತೊಂದೆಡೆ ಪ್ರಕೃತಿ ಮಾತೆಗೂ ಹಬ್ಬದ ಸಂಭ್ರಮ. ಎಲ್ಲೆಡೆ ಹಸಿರ ಹೊದಿಕೆಯನ್ನೇ ಹಾಸಿಕೊಂಡಂತೆ ಕಾಣುವ ಪ್ರಕೃತಿ ತನ್ನೊಳಗೆ ಸಂಭ್ರಮಿಸುತ್ತಾಳೆ.

Shavana-1

ಶ್ರಾವಣ ಮಾಸದಲ್ಲಿ ಹೂಗಳು ಜಾಸ್ತಿಯಾಗುವುದರಿಂದ ಈ ಮಾಸದಲ್ಲಿಯೇ ಚೂಡಿಪೂಜೆ (ಹೂವಿನ ಪೂಜೆ) ನಡೆಯುತ್ತದೆ. ಚೂಡಿ ಪೂಜೆಗೆ 11 ಬಗೆಯ ಹೂಗಳನ್ನು ಬಳಸುತ್ತಾರೆ. ಶ್ರಾವಣ ಮಾಸದಲ್ಲಿ ಈ ಚೂಡಿಯ ತುಳಸಿಗೆ ಪೂಜೆ ಮಾಡುವುದರಿಂದ ಸರ್ವ ಕಷ್ಟವೂ ದೂರವಾಗುತ್ತದೆ, ಸರ್ವರೋಗ ನಿವಾರಣೆಯಾಗುತ್ತದೆ ಅನ್ನೋ ನಂಬಿಕೆ. ಆಷಾಢ ಮಾಸದಲ್ಲಿ ಸಂಪ್ರದಾಯದ ಪ್ರಕಾರ ದೂರ ಆಗಿರುವ ದಂಪತಿ ಒಂದಾಗುತ್ತಾರೆ. ಆಷಾಢದ ನಂತರ ಬರುವ ಶ್ರಾವಣದಲ್ಲಿ ಸೂರ್ಯ ಪ್ರಖರತೆ ಹೊಂದದೆ ನವಿರಾದ ಹೂಬಿಸಿಲಿನೊಂದಿಗೆ ನೆರಳಿನಾಟನಾಡುವನು, ಆಗಾಗ ತುಂತುರು ಮಳೆಯ ತುಷಾರ ಸಿಂಚನ, ತುಂಬಿ ಹರಿಯುವ ನದಿ ತೊರೆಗಳ ಜುಳು ಜುಳು ನಿನಾದ, ಸಂಪಿಗೆ-ಕೇದಿಗೆ ಸೇವಂತಿಗೆ, ಸುಮಧುರ ವಾಸನೆಯೊಂದಿಗೆ ಭೂದೇವಿಯು ಹೊಸ ಉಡುಗೆ ಉಟ್ಟು ನಲಿಯುವಂತೆ ಭಾಸವಾಗುವ ಕಾಲ ಧಾರ್ಮಿಕವಾಗಿಯೂ ಬಹಳ ಮಹತ್ವದ್ದು. ಹಿಂದೂ ಪಂಚಾಂಗದ ಪ್ರಕಾರ ಇದು ಐದನೆ ಮಾಸ.

ಭಾರತ ದೇಶಕ್ಕೆ ಪ್ರಕೃತಿಯೇ ಒದಗಿಸಿರುವ ವರ ಎಂದರೆ ಋತುಗಳ ವೈವಿಧ್ಯ. ನಮ್ಮ ದೇಶದಲ್ಲಿ ಆರು ಋತುಗಳ ಕಾಲಚಕ್ರ ಜನರ ಜೀವನಶೈಲಿಯನ್ನು ರೂಪಿಸಿದೆ. ಶ್ರೀಮಂತವಾದ ಸಾಂಸ್ಕøತಿಕ, ಧಾರ್ಮಿಕ ವಾತಾವರಣವನ್ನು ಒದಗಿಸಿವೆ. ನಮ್ಮಲ್ಲಿ ಒಂದು ವರ್ಷಕ್ಕೆ ಹನ್ನೆರಡು ಮಾಸಗಳ ಎಣಿಕೆಯಿದೆ. ಹನ್ನೆರಡು ಮಾಸಗಳನ್ನು ಆರು ಋತುಗಳು ಆವರಿಸಿದೆ. ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ ಮತ್ತು ಶಿಶಿರ. ಒಂದೊಂದು ಋತುವಿಗೂ ಎರಡು ತಿಂಗಳು. ವಸಂತ ಎಂದರೆ, ಚೈತ್ರ-ವೈಶಾಖ, ಗ್ರೀಷ್ಮ ಎಂದರೆ ಜ್ಯೇಷ್ಠ-ಆಷಾಢ. ವರ್ಷ ಎಂದರೆ ಶ್ರಾವಣ-ಭಾದ್ರಪದ. ಶರದ್ ಎಂದರೆ ಆಶ್ವಿನಿ-ಕಾರ್ತಿಕ, ಹೇಮಂತ ಎಂದರೆ ಮಾರ್ಗಶಿರ್ಷ-ಪುಷ್ಯ. ಶಿಶಿರ ಎಂದರೆ ಮಾಘ-ಫಾಲ್ಗುಣ.

Shavana-Krishna

ವರ್ಷಋತು ಎಂದರೆ ಮಳೆಗಾಲ. ಶ್ರಾವಣ ಮಾಸ ಎಂದರೆ ಮಳೆಯ ಆರಂಭದ ಕಾಲ ಎನ್ನಲೂಬಹುದು. ಆಷಾಢ ಮಾಸದಲ್ಲಿ ಇಳೆಗೆ ಮಳೆಯ ಸೂಚನೆ ಸಿಕ್ಕಿರುತ್ತದೆ. ಮಳೆಯಿಂದ ಭೂಮಿ ತಣಿಯುವುದು ಶ್ರಾವಣದಲ್ಲಿಯೇ.  ಶ್ರವಣ ನಕ್ಷತ್ರದ ಯೋಗದಿಂದ ಶ್ರಾವಣ ಶಬ್ದ ಬಂದಿದೆ. ಆ ನಕ್ಷತ್ರ ವಿಷ್ಣು ದೇವತಾತ್ಮಕವಾದುದು. ವಿಷ್ಣು ಎಂದರೆ ಸರ್ವವ್ಯಾಪಿ-ಎಲ್ಲೆಲ್ಲೂ ಇರುವ-ಪರಮಾತ್ಮ. ಈ ಮಾಸದಲ್ಲಿ ವಿಷ್ಣುವನ್ನೂ ಶಿವನನ್ನೂ ವಿಶೇಷವಾಗಿ ಆರಾಧಿಸಲಾಗುತ್ತದೆ. ಶ್ರಾವಣ ಸೋಮವಾರಗಳಂದು ರುದ್ರಾಭಿಷೇಕ ಮಾಡಿ, ಶಿವನನ್ನು ಬಿಲ್ವಪತ್ರೆಯಿಂದ ಅರ್ಚಿಸಿದರೆ ಪುಣ್ಯಪ್ರದ.

ಕೈಲಾಸ ಯಂತ್ರವನ್ನು ಪೂಜಿಸುವುದು ಈ ದಿನದ ವಿಶೇಷತೆ. ಹೀಗೆಯೇ ಮಂಗಳವಾರಗಳಂದು ಶ್ರೀ ಮಂಗಳಗೌರಿ ಯನ್ನು ವಿಶೇಷವಾಗಿ ಕನ್ಯೆಯರು ಪೂಜಿಸು ತ್ತಾರೆ. ಶ್ರಾವಣ ಶನಿವಾರಗಳಂದು ಶ್ರೀ ವೆಂಕಟೇಶ್ವರ-ತಿರುಪತಿ ತಿಮ್ಮಪ್ಪನ್ನು ಪೂಜಿಸಲಾಗುವುದು. ಅಂದು ಮಧುಕರಿ ವೃತ್ತಿಯನ್ನು ಮಾಡುವ ಸಂಪ್ರದಾಯವೂ ಕೆಲವರಲ್ಲಿದೆ. ಆಷಾಢ ಮಾಸವನ್ನು ಸಾಮಾನ್ಯ ವಾಗಿ ಅಶುಭ ಎಂದು ಭಾವಿಸಲಾಗುತ್ತದೆ. ಶ್ರಾವಣ ಎಂದರೆ ಶ್ರೇಷ್ಠತೆಗೂ ಶುಭಕ್ಕೂ ಪರ್ಯಾಯ ಎಂಬ ನಂಬಿಕೆಯಿದೆ.

ನಿಸರ್ಗದಲ್ಲಿ ಭಗವಂತನ ಕೃಪೆ ಕಂಡ ನಮ್ಮ ಭಾರತೀಯರ ದಾರ್ಶನಿಕತೆಗೆ ಒಂದೆರಡು ಮುಖಗಳೇ? ಗಾಳಿ ಬೀಸಿದರೆ ಪವನಾನುಗ್ರಹ, ಮಳೆ ಸುರಿದರೆ ಅಭಿಷೇಕ, ಹಸಿರು ಚಿಗುರಿದರೆ ಭೂರಮೆಯ ಮುಗುಳ್ನಗೆ, ಫಸಲು ಮೊಳೆತರೆ ವಸುಂಧರೆಯ ಒಡಲು ತುಂಬಿದ ಸಾರ್ಥಕ್ಯ. ಸೂರ್ಯೋದಯ, ಚಂದ್ರೋದಯಗಳು ದೇವರ ದಯೆ ಕಾಣೋ ಎಂದು ಹಾಡಿದವರು ನಮ್ಮ ಕವಿಗಳು. ಪ್ರಾಕೃತಿಕ ವಿಕೋಪಗಳಾದರೂ ದೈವ ಮುನಿದಿದೆ ಶಾಂತವಾಗಿಸಿ ಎಂಬ ಹಾರೈಕೆ ನಮ್ಮದು.  ಬಿರು ಬೇಸಿಗೆಗೆ ತತ್ತರಿಸಿ ಮನೆಯೊಳಗೆ ಕೂತು ಧಗೆಯಾರಿಸಿಕೊಳ್ಳುವ ನಗರವಾಸಿ ಬಿಡುವು ಹಳ್ಳಿಗರಿಗಿಲ್ಲ. ಬೇಸಿಗೆಯ ಕೆಲಸ ಪೂರೈಸಲೇಬೇಕು. ಹೊಲಕ್ಕಿಳಿಯಲೇಬೇಕು. ವರುಣದೇವನ ಕೃಪೆಗಾಗಿ ಪ್ರಾರ್ಥಿಸುತ್ತಲೇ ನೊಗವೆತ್ತಿ ಮುಗಿಲು ನೋಡುತ್ತಲೇ ಬೇಸಾಯದ ಪರಿಕರ ಜೋಡಿಸಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕು.

ಶ್ರವಣ ನಕ್ಷತ್ರ ವಿಷ್ಣುವಿನ ಜನ್ಮನಕ್ಷತ್ರವಂತೆ, ಶ್ರಾವಣ ಹುಣ್ಣಿಮೆಯಂದು ಶ್ರವಣ ನಕ್ಷತ್ರ ಬರುವುದರಿಂದ ಇಡೀ ಮಾಸಕ್ಕೆ ಪಾವಿತ್ರ್ಯ ಬಂತು ಎನ್ನುತ್ತಾರೆ. ಕೇರಳದಲ್ಲಿ ಅದರಲ್ಲಿನ ಶ್ರ ಕಳೆದು ವಣಂ ಮಾತ್ರ ಉಳಿಯಿತು.ಅದು ಅನಂತಶಯನನಾದ ಶ್ರೀ ವಿಷ್ಣುವಿನ ನಕ್ಷತ್ರವಾಗಿ ತಿರು(ಶ್ರೀ) ವೋಣಂ ಆಯ್ತು. ಬಲಿ ಚಕ್ರವರ್ತಿ ಮತ್ತು ವಿಷ್ಣುವಿನ ವಾಮನಾವತಾರದ ನಡುವಿನ ಕತೆಯೂ ಇದರೊಂದಿಗೆ ಹೊಂದುಕೊಂಡಿದೆ.  ವಾಲ್ಮಿಕಿಯ ಅವತಾರವೆನ್ನುವ ಹನುಮಾನ್ ಚಾಲೀಸ ರಚಿಸಿದ ತುಲಸೀದಾಸರು ಕೂಡ ಹುಟ್ಟಿದ ತಿಂಗಳು ಇದುವೇ. ಕಾರ್ತೀಕದಲ್ಲಿ ಸೋಮವಾರ, ಮಾರ್ಗಶಿರದಲ್ಲಿ ಗುರುವಾರ ಮತ್ತು ಮಾಘದಲ್ಲಿ ಭಾನುವಾರ ಶ್ರೇಷ್ಟವಾದರೆ ಶ್ರಾವಣದಲ್ಲಿ ಮಾತ್ರ ಶುಕ್ರವಾರ, ಶನಿವಾರ, ಮಂಗಳವಾರ ಶ್ರೇಷ್ಠ. ನಮ್ಮ ಬಹುತೇಕ ಜನರು ಪೂಜÁಮನಸ್ಕರು ಮತ್ತು ಪುರಾಣವತ್ಸಲರು,ಶ್ರಾವಣ ದಲ್ಲಿ ಇದರ ನೆಪ ಮಾಡಿ ಪುಣ್ಯ ಸಂಚಯಕ್ಕೆ ವೇದಿಕೆಯಾಗಿಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ಶ್ರಾವಣ ಮಾಸಕ್ಕೆ ಪ್ರತಿಸ್ಪರ್ಧೆಯೇ ಇಲ್ಲ ,ಹಾಗೆಯೆ ನಾವು ಬರಿ ವ್ರತ ಅನುಷ್ಠಾನಕ್ಕೆ ಮೀಸಲಾಗಿರಿಸದೆ ಸಾಧನಾಮಾಸವನ್ನಾಗಿ ಪರಿವರ್ತಿಸಬೇಕು.

ಆಧ್ಯಾತ್ಮಿಕ ಪರ್ವಗಳಷ್ಟೆ ಅಲ್ಲದೆ ಹೋರಾಟ- ತ್ಯಾಗ ಬಲಿದಾನಗಳ ನೆನಪಿಸುವ ಸ್ವಾತಂತ್ರದಿನವೂ ಶ್ರಾವಣದಲ್ಲೆ , ಇಂದು ನಾವೆಲ್ಲರೂ ನಿರಮ್ಮಳವಾಗಿರುವಂತೆ ಅನುಕೂಲ ಮಾಡಿಕೊಟ್ಟವರ ಸ್ಮರಣೆ. ಮೇಲು-ಕೀಳು ಎನ್ನುವ ಭೇದಗಳಿಗೆ ಬೇಕಾದಷ್ಟು ಕಾರಣಗಳು ದೊರೆಯುವ ಕಾಲವಿದು .ಇಂತಹ ಕಾಲದಲ್ಲಿ ಸಾಮಾಜಿಕ ಜೀವನದ ಸೊಬಗಿನಲ್ಲಿ ಮಾನವೀಯತೆ ಪ್ರಧಾನವಾಗಬೇಕು ಎನ್ನುವ ಆಶಯ ಬಿತ್ತಿದ ಮಹರ್ಷಿ ಅರವಿಂದರ ಜನ್ಮದಿನ ಈ ಮಾಸದಲ್ಲೆ. ಹಾಗಾಗಿ ಶ್ರಾವಣ ಮಾಸ ಅತ್ಯಂತ ಶ್ರೇಷ್ಠ.

Facebook Comments

Sri Raghav

Admin