ಫ್ರೆಂಡ್‍ಶಿಪ್ ದಿನದಂದು ಸ್ನೇಹಿತರಿಗೆ 60 ಲಕ್ಷ ರೂ. ದಾನ ಮಾಡಿದ ‘ಬೆಸ್ಟ್ ಫ್ರೆಂಡ್’..!

ಈ ಸುದ್ದಿಯನ್ನು ಶೇರ್ ಮಾಡಿ

Fridship-Day

ಜಬಲ್‍ಪುರ್(ಮ.ಪ್ರ.), ಆ.12-ಇದು ಮಧ್ಯಪ್ರದೇಶದ ಅಭಿನವ ದಾನ ಶೂರ ಕರ್ಣನ ವೃತ್ತಾಂತ. ಜಬಲ್‍ಪುರ್‍ನ ಬಿಲ್ಡರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಹದಿಹರೆಯ ಮಗನೊಬ್ಬ ತನ್ನ ತಂದೆಯ 60 ಲಕ್ಷ ರೂ.ಗಳನ್ನು ಸ್ನೇಹಿತರಿಗೆ ದಾನವಾಗಿ ಹಂಚುವ ಮೂಲಕ ಫ್ರೆಂಡ್‍ಶಿಪ್ ಡೇನನ್ನು ವಿಶಿಷ್ಟವಾಗಿ ಆಚರಿಸಿದ್ದಾನೆ.

10ನೇ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿಯ ಮಹಾದಾನ ಈಗ ಸುದ್ದಿಯಾಗಿದೆ. ಈತನ ತಂದೆ ಕಟ್ಡಡ ಮಾರಾಟ ಮಾಡಿ ಕಪಾಟಿನಲ್ಲಿಟ್ಟಿದ್ದ 60 ಲಕ್ಷ ರೂ.ಗಳ ಹಣವನ್ನು ಈತ ತನ್ನ ಸ್ನೇಹಿತರಿಗಾಗಿ ಧಾರಾಳವಾಗಿ ಖರ್ಚು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಹಾದಾನಿಯ ಹೆಸರನ್ನು ಪೊಲೀಸರು ಬಹಿರಂಗಗೊಳಿಸಿಲ್ಲ.

ಈ ಬಾಲಕ ದಾನ ಮಾಡಿರುವ ಪಟ್ಟು ಬಹು ದೊಡ್ಡದು. ದಿನಗೂಲಿಯೊಬ್ಬನ ಮಗನಿಗೆ ಈತ 15 ಲಕ್ಷ ರೂ.ಗಳನ್ನು ದಾನ ಮಾಡಿದ್ದಾನೆ. ತನ್ನ ಹೋಂವರ್ಕ್ ಪೂರ್ಣಗೊಳಿಸಿದ ಸಹಪಾಠಿಗೆ ಈತ ನೀಡಿದ ಇನಾಮು 3 ಲಕ್ಷ ರೂ.ಗಳು. ಈತನ ಒಬ್ಬ ಸ್ನೇಹಿತ ದಾನ ಪಡೆದ ಹಣದಲ್ಲಿ ಕಾರು ಖರೀದಿಸಿದ್ಧಾನೆ.
ತನ್ನ ಗೆಳೆಯರಲ್ಲಿ ಈತ ಯಾರೊಬ್ಬರನ್ನೂ ನಿರಾಸೆಗೊಳಿಸಿಲ್ಲ. ತನ್ನ ಶಾಲೆ ಮತ್ತು ಟ್ಯೂಷನ್ ಸಹಪಾಠಿಗಳಿಗೆ 35 ದುಬಾರಿ ಸ್ಮಾರ್ಟ್ ಫೋನ್ ಉಡುಗೊರೆ ನೀಡಿದ್ದಾನೆ. ಕೆಲವರಿಗೆ ಬೆಳ್ಳಿ ಬ್ರಾಸ್ಲೆಟ್ ಗಿಫ್ಟ್ ನೀಡಿದ್ದಾರೆ.

ಅಲ್ಮೇರಾ(ತಿಜೋರಿ)ದಲ್ಲಿದ್ದ 60 ಲಕ್ಷ ರೂ.ಗಳು ಮಂಗಮಾಯವಾದ ಬಗ್ಗೆ ಆತಂಕಗೊಂಡು ತಂದೆ ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ದರೋಡೆ ಅಥವಾ ಕಳ್ಳತನದ ಕುರುಹು ಕಂಡುಬರಲಿಲ್ಲ. ಅನುಮಾನಗೊಂಡ ಪೊಲೀಸರು ಮಗನನ್ನು ವಿಚಾರಣೆಗೆ ಒಳಪಡಿಸಿದಾಗ ಮಹಾದಾನದ ವೃತ್ತಾಂತ ಬೆಳಕಿಗೆ ಬಂದು ತಬ್ಬಿಬ್ಬಾದರು.

Facebook Comments

Sri Raghav

Admin