ಶಾಂತಿ, ಏಕತೆಗಾಗಿ ಶ್ರಮಿಸುವಂತೆ ವಿಪಕ್ಷಗಳಿಗೆ ಮೋದಿ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Modi-CSC

ನವದೆಹಲಿ, ಆ.12-ದೇಶದಲ್ಲಿ ಶಾಂತಿ ಮತ್ತು ಏಕತೆ ನೆಲೆಸಲು ಶ್ರಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳಿಗೆ ಕರೆ ನೀಡಿದ್ದಾರೆ. ದೇಶದಲ್ಲಿ ಹೆಚ್ಚಾಗುತ್ತಿರುವ ಸಾಮೂಹಿಕ ಹಲ್ಲೆ ಮತ್ತು ಹತ್ಯೆ ಪ್ರಕರಣಗಳನ್ನು ಉಲ್ಲೇಖಿಸಿರುವ ಅವರು ಪ್ರತಿಪಕ್ಷಗಳು ಇಂಥ ವಿಚಾರಗಳಲ್ಲಿ ರಾಜಕೀಯ ಮಾಡಬಾರದು. ದೇಶದ ಶಾಂತಿ, ಸುವ್ಯವಸ್ಥೆ ಮತ್ತು ಏಕತೆ ನೆಲೆಸಲು ಶ್ರಮಿಸಬೇಕು. ದೇಶದಲ್ಲಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಅವರು ಸಾಮೂಹಿಕ ಹಲ್ಲೆ-ಹತ್ಯೆ, ರಾಷ್ಟ್ರೀಯ ಪೌರತ್ವ ನೋಂದಣಿ, ಮೀಸಲಾತಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಭಾರತ-ಪಾಕಿಸ್ತಾನ ಸಂಬಂಧ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಮಾತನಾಡಿದರು.

ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ಆರ್‍ಸಿ) ಪಟ್ಟಿಯಲ್ಲಿ 40 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳು ಬಿಟ್ಟು ಹೋಗಿರುವ ವಿಚಾರ ಕುರಿತು ಪ್ರಸ್ತಾಪಿಸಿದ ಅವರು, ಈ ಬಗ್ಗೆ ಯಾರೂ ಗೊಂದಲ-ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇದರಲ್ಲಿ ತಲೆದೋರಿರುವ ಸಮಸ್ಯೆಯನ್ನು ನಿವಾರಿಸಲಾಗುತ್ತದೆ. ಯಾವೊಬ್ಬ ಭಾರತೀಯರೂ ದೇಶ ಬಿಟ್ಟು ಹೋಗುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಎನ್‍ಆರ್‍ಸಿ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಇದರ ವಿರುದ್ಧ ರಕ್ತಪಾತ ನಡೆಯಲಿದೆ ಎಂದು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, ತಮ್ಮ ಬಗ್ಗೆಯೇ ನಂಬಿಕೆ ಕಳೆದುಕೊಂಡವರು, ಸಹಕಾರ-ಬೆಂಬಲ ಕೈತಪ್ಪಿ ಹೋಗುವ ಆತಂಕದಲ್ಲಿರುವವರು ಹಾಗೂ ನಮ್ಮ ದೇಶದ ಸಂಸ್ಥೆಗಳ ಮೇಲೆ ವಿಶ್ವಾಸ ಇಲ್ಲದವರು ಇಂಥ ನಾಗರಿಕ ದಂಗೆ, ರಕ್ತಪಾತ ಮತ್ತು ದೇಶ ವಿಭಜನೆಯಂಥ ಪದಗಳನ್ನು ಬಳಸುತ್ತಾರೆ. ವಾಸ್ತವವಾಗಿ ಇಂಥ ಮಂದಿ ದೇಶ ನಾಡಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಮಹಿಳೆಯರ ಮೇಲೆ ಇತ್ತೀಚೆಗೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹಿಂಸಾಚಾರ ಪ್ರಕರಣಗಳನ್ನು ಪ್ರಸ್ತಾಪಿಸಿದ ಅವರು, ಇಂಥ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಎಲ್ಲರೂ ರಾಜಕೀಯವನ್ನು ಮರೆತು ಇದರ ವಿರುದ್ಧ ಧ್ವನಿ ಎತ್ತಬೇಕು. ಸಮಾಜ ಮತ್ತು ದೇಶದಲ್ಲಿ ಶಾಂತಿ ಮತ್ತು ಏಕತೆ ನೆಲೆಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಜಾತಿ ಆಧಾರಿತ ಮೀಸಲಾತಿ ಮುಂದುವರಿಯುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಸಮಾಜದ ದುರ್ಬಲ ವರ್ಗದವರ ರಕ್ಷಣೆ ಸರ್ಕಾರದ ಮೊದಲ ಆದ್ಯತೆ ಎಂದು ಪ್ರಧಾನಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಕೇಂದ್ರ ಸರ್ಕಾರವನ್ನು ಪ್ರತಿಪಕ್ಷಗಳು ಎಲ್ಲ ವಿಷಯಗಳಲ್ಲೂ ಕಟುವಾಗಿ ಟೀಕಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕಾಮ್‍ದಾರ್(ಕೆಲಸ ಮಾಡುವವರು). ಅವರು ನಾಮದಾರ್(ಕೆಲಸ ಮಾಡದೇ ಹೆಸರು ಪಡೆಯಲು ಇಚ್ಚಿಸುವವರು) ಎಂದು ಬಣ್ಣಿಸಿದರಲ್ಲದೇ ನಮ್ಮ ಮತ್ತು ಅವರ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ನಾನು ಹೆಚ್ಚಿಗೆ ಹೇಳಲು ಇಚ್ಚಿಸುವುದಿಲ್ಲ. ಯಾರನ್ನು ಪ್ರೀತಿಸಬೇಕು ಎಂಬುದು ಜನರಿಗೆ ಗೊತ್ತಿದೆ. ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

ಜನ ನಮ್ಮೊಂದಿಗಿದ್ದಾರೆ. ಯಾವ ಮೈತ್ರಿಕೂಟಗಳ ಭಯ-ಆತಂಕ ನಮಗಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲೂ ಗೆಲುವು ನಮ್ಮದೇ. ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ನಾವು ಗೆದ್ದು ಬರುತ್ತೇವೆ ಎಂದು ಅವರು ದೃಢ ವಿಶ್ವಾಸದಿಂದ ನುಡಿದರು. ಭಾರತ-ಪಾಕಿಸ್ತಾನ ಸಂಬಂಧ ಕುರಿತು ಮಾತನಾಡಿದ ಮೋದಿ, ಏಷ್ಯಾ ಪ್ರಾಂತ್ಯದಲ್ಲಿ ಸುರಕ್ಷತೆ, ಭದ್ರತೆ, ಸ್ಥಿರತೆ ಮತ್ತು ಶಾಂತಿ ಸ್ಥಾಪನೆಗಾಗಿ ಹೊಸ ಸರ್ಕಾರ (ಇಮ್ರಾನ್ ಖಾನ್ ನೇತೃತ್ವದ) ಶ್ರಮಿಸುತ್ತದೆ ಎಂಬ ಭರವಸೆ ಇದೆ. ಈ ಖಂಡವನ್ನು ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಕಾರ್ಯನಿರ್ವಹಿಸುತ್ತದೆ ಎಂಬ ಆಶಾಭಾವನೆ ಇದೆ. ನಾವು ನೆರೆಹೊರೆ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತೇವೆ. ಈ ಸಂಬಂಧ ಈಗಾಗಲೇ ನಾವು ಹಲವಾರು ಕ್ರಮಗಳನ್ನೂ ಸಹ ಕೈಗೊಂಡಿದ್ದೇವೆ ಎಂದರು.

Facebook Comments

Sri Raghav

Admin